More

    ತಮಿಳುನಾಡು, ಪುದುಚೇರಿ ಮೂಲದ ಐವರು ಅಂತಾರಾಜ್ಯ ವಂಚಕರ ಸೆರೆ -19 ರಾಜ್ಯಗಳಲ್ಲಿ 216 ಆನ್‌ಲೈನ್ ದೂರು 

    ದಾವಣಗೆರೆ: ಆನ್‌ಲೈನ್ ಮೂಲಕ ಉತ್ಪನ್ನಗಳನ್ನು ಖರೀದಿಸಿದರೆ ಹೆಚ್ಚಿನ ಕಮೀಷನ್ ಸಿಗಲಿದೆ, ಮನೆಯಿಂದಲೇ ಸುಲಭವಾಗಿ ಹಣ ಗಳಿಸಬಹುದು ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ 9 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿದ್ದ ತಂಡದ ಐವರು ಅಂತಾರಾಜ್ಯ ಸೈಬರ್ ವಂಚಕರನ್ನು ದಾವಣಗೆರೆ ಸಿಇಎನ್ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
    ತಮಿಳುನಾಡು ರಾಜ್ಯದ ನೈನಾರ್ ಕೊಪ್ಪಂ ಮೂಲದ ಸರವಣನ್, ರಾಯ್‌ಪೆಟ್ಟಂ ಮೂಲದ ಉಮೈಜ್ ಅಹಮ್ಮದ್, ವೈತಿಮನೈ ಮೂಲದ ಜುನೈದ್ ಅಹಮದ್, ಬಾಂಗಿಬುಜನ್ ನಿವಾಸಿ ಜಾವೀದ್ ಅಹಮದ್, ಪುದುಚೇರಿ ರಾಜ್ಯದ ತಿರುಮಲೈರಾಯನ್ ಪಟ್ಟಣ ನಿವಾಸಿ ವೈತಿಲಿಂಗ ಬಂಧಿತ ಆರೋಪಿಗಳು.
    ಜಗಳೂರು ತಾಲೂಕಿನ ಕ್ಯಾಸೇನಹಳ್ಳಿ ನಿವಾಸಿ ಕೆ.ಸಿ.ಮಂಜಪ್ಪ ಅವರಿಗೆ 2023ರ ಫೆ.5ರಿಂದ ಫೆ. 23ರವರೆಗೆ ನಿರಂತರ ಕರೆ ಮಾಡಿದ ಆರೋಪಿಗಳು ಮನೆಯಿಂದಲೇ ಸುಲಭ ಕೆಲಸ ಮಾಡಿ ಹಣ ಸಂಪಾದಿಸಬಹುದು ಎಂದು ನಂಬಿಸಿದ್ದಾರೆ. ನಂತರ 9 ಲಕ್ಷಕ್ಕೂ ಹೆಚ್ಚಿನ ಹಣವನ್ನು ಆನ್‌ಲೈನ್‌ನಲ್ಲಿ ಹಾಕಿಸಿಕೊಂಡು ವಂಚಿಸಿದ್ದರು. ಕಳೆದ ವರ್ಷ ಮಾ.6ರಂದು ಸಿಇಎನ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು.
    ಸ್ಥಳೀಯ ಪೊಲೀಸರು ತನಿಖೆ ನಡೆಸಿದಾಗ ತಮಿಳುನಾಡು ರಾಜ್ಯದ ವಿರುಧ ನಗರ ಸಿಇಎನ್ ಠಾಣೆ, ರಾಣಿಪೇಟ್ ಠಾಣೆ, ತಿರುವಳ್ಳರ್ ಠಾಣೆ, ಕಡಲೂರು ಠಾಣೆಗಳಲ್ಲಿ ಆರೋಪಿತರ ವಿರುದ್ದ ಪ್ರಕರಣ ದಾಖಲಾಗಿ, ವಿರುಧ ನಗರ ಜೈಲಿನಲ್ಲಿರುವುದು ಖಚಿತವಾಯಿತು.
    ನಂತರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಆರೋಪಿತರ ಬಾಡಿ ವಾರೆಂಟ್ ಪಡೆದು 2024ರ ಜ.22ರಂದು ಮೂರನೇ ಎಸಿಜೆ ಹಾಗೂ ಜೆಎಂಎಫ್ ನ್ಯಾಯಾಲಯದಲ್ಲಿ ಹಾಜರುಪಡಿಸಿ ಐದು ದಿನ ಪೊಲೀಸ್ ವಶಕ್ಕೆ ಪಡೆದು ತನಿಖೆ ನಡೆಸಲಾಗಿ ಮರಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
    ಆನ್‌ಲೈನ್ ಸೈಬರ್ ಪೋರ್ಟಲ್ ಪರಿಶೀಲಿಸಲಾಗಿ ಕರ್ನಾಟಕ ಸೇರಿ 19 ರಾಜ್ಯಗಳಲ್ಲಿ ಈ ವಂಚಕರ ವಿರುದ್ಧ 216 ಆನ್‌ಲೈನ್ ದೂರುಗಳು ದಾಖಲಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಇತರೆ ಆರೋಪಿಗಳ ಪತ್ತೆಗಾಗಿ ಸಿಇಎನ್ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿಸಿರುವ ಎಸ್ಪಿ ಉಮಾ ಪ್ರಶಾಂತ್, ಪತ್ತೆ ಕಾರ್ಯಾಚರಣೆಗೆ ಪ್ರಶಂಸಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts