More

    ತಬ್ಲಿಘಿ ಸೇರಿ ಇಬ್ಬರಿಗೆ ಕರೊನಾ ಪಾಸಿಟಿವ್

    ಶಿವಮೊಗ್ಗ: ಜಿಲ್ಲೆಯಲ್ಲಿ ಭಾನುವಾರ ಮತ್ತೆರಡು ಕರೊನಾ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿವೆ. ಇದರೊಂದಿಗೆ ಮಲೆನಾಡಲ್ಲಿ ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.

    ಮೇ 9ರಂದು ಅಹಮದಾಬಾದ್​ನಿಂದ ಬಂದಿದ್ದ 65 ವರ್ಷದ ತಬ್ಲಿಘಿ ಸೋಂಕಿತನ (ಪಿ.808) ಸಂಪರ್ಕದಿಂದ 31 ವರ್ಷದ ಯುವಕ(ಪಿ.2087) ಹಾಗೂ ರಾಜಸ್ತಾನದಿಂದ ಬಂದಿರುವ 74 ವರ್ಷದ ವೃದ್ಧ (ಪಿ.2088)ನಲ್ಲಿ ಕರೊನಾ ದೃಢಪಟ್ಟಿದೆ. ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಯ ಐಸೋಲೆಟೆಡ್ ವಾರ್ಡ್​ಗೆ ಸ್ಥಳಾಂತರಿಸಲಾಗಿದೆ.

    ಮತ್ತೊಬ್ಬ ತಬ್ಲಿಘಿಗೂ ಸೋಂಕು ದೃಢ: ಗುಜರಾತ್​ನ ಅಹಮದಾಬಾದ್​ನಿಂದ ಬಸ್​ನಲ್ಲಿ ಬಂದಿದ್ದ 9 ತಬ್ಲಿಘಿಗಳಲ್ಲಿ 8 ಜನರಿಗೆ ಮೇ 10ರಂದು ಸೋಂಕು ದೃಢಪಟ್ಟಿತ್ತು. ಆದರೆ ಭಾನುವಾರ ಮತ್ತೊಬ್ಬ ತಬ್ಲಿಘಿಗೂ ಸೋಂಕು ತಗುಲಿದೆ. ಇದರೊಂದಿಗೆ 9 ತಬ್ಲಿಘಿಗಳಿಗೂ ಸೋಂಕು ದೃಢಪಟ್ಟಿದೆ. ಈ ನಡುವೆ 8 ಸೋಂಕಿತರಿಗೆ ಶನಿವಾರದ ವರದಿ ನೆಗೆಟಿವ್ ಬಂದಿದೆ. ಭಾನುವಾರ ಮತ್ತೊಮ್ಮೆ ಸ್ವಾಬ್ ಟೆಸ್ಟ್ ಮಾಡಿದ್ದು ನೆಗೆಟಿವ್ ಬಂದರೆ ಸೋಮವಾರ 8 ಮಂದಿಯೂ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.

    ಮಲೆನಾಡಿಗೆ ರಾಜಸ್ಥಾನದ ಮೊದಲ ನಂಟು: ಇಲ್ಲಿಯವರೆಗೆ ಗುಜರಾತ್​ನ ಅಹಮದಾಬಾದ್, ಮಹಾರಾಷ್ಟ್ರದ ಥಾಣೆ, ಪುಣೆ ಮತ್ತು ಮುಂಬೈ, ತಮಿಳುನಾಡಿನ ಚೆನ್ನೈನಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದೇ ಮೊದಲ ಬಾರಿಗೆ ರಾಜಸ್ಥಾನದಿಂದ ಬಂದಿರುವ ವೃದ್ಧನಲ್ಲೂ ಸೋಂಕು ದೃಢಪಟ್ಟಿದೆ. ಮೇ 22ರಂದು 10 ಜನರ ತಂಡ ಶಿವಮೊಗ್ಗಕ್ಕೆ ಮರಳಿದ್ದು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಅದರಲ್ಲಿ 74 ವರ್ಷದ ವೃದ್ಧನಲ್ಲಿ ಭಾನುವಾರ ಸೋಂಕು ದೃಢಪಟ್ಟಿದೆ.

    ಇಬ್ಬರಿಗೂ ಪ್ರಾಥಮಿಕ ಸಂಪರ್ಕ ಇಲ್ಲ: ಭಾನುವಾರ ಕರೊನಾ ಸೋಂಕು ದೃಢಪಟ್ಟ ಇಬ್ಬರಿಗೂ ಪ್ರಾಥಮಿಕ ಸಂಪರ್ಕ ಇಲ್ಲ. ಅಹಮದಾಬಾದ್ ಹಾಗೂ ರಾಜಸ್ಥಾನದಿಂದ ಬಂದಿರುವ ಇಬ್ಬರನ್ನೂ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಹಾಗಾಗಿ ಈ ಇಬ್ಬರು ಯಾರೊಂದಿಗೂ ಸಂಪರ್ಕಕ್ಕೆ ಬಂದಿಲ್ಲ ಎಂದು ಡಿಸಿ ಕೆ.ಬಿ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಅದರಲ್ಲೂ ತಬ್ಲಿಘಿಗಳ ಜತೆ ಬಂದಿದ್ದ 31 ವರ್ಷದ ಶಿಕಾರಿಪುರದ ಯುವಕನನ್ನು 14 ದಿನಗಳಿಂದ ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ಹಾಲಿ 5 ಪ್ರದೇಶಗಳಲ್ಲಿ ಮಾತ್ರ ಸೀಲ್​ಡೌನ್ ಮುಂದುವರಿಯಲಿದೆ ಎಂದರು.

    ಮೇ 24ರ ಸೋಂಕಿತರ ವಿವರ: 31 ವರ್ಷದ ಯುವಕ(ಪಿ.2087)- ಅಹಮದಾಬಾದ್​ನಿಂದ ಬಂದಿದ್ದ 65 ವರ್ಷದ (ಪಿ.808) ವೃದ್ಧನ ಸಂಪರ್ಕದಿಂದ ಸೋಂಕು, 74 ವರ್ಷದ ವೃದ್ಧ (ಪಿ.2088), ರಾಜಸ್ಥಾನದಿಂದ ಬಂದಿದ್ದು ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದರು.

    ಹಾಲು, ತರಕಾರಿ ದುಬಾರಿ: ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಂಟೇನ್ಮೆಂಟ್ ಜೋನ್​ಗಳನ್ನು ನಿರ್ವಿುಸಿದ್ದು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಇದನ್ನೇ ದುರುಪಯೋಗ ಮಾಡಿಕೊಳ್ಳುತ್ತಿರುವ ಕೆಲವರು ಸೀಲ್​ಡೌನ್ ಪ್ರಯೋಜನ ಪಡೆದುಕೊಳ್ಳಲು ಮುಂದಾಗಿದ್ದಾರೆ. ಸ್ಥಳೀಯವಾಗಿರುವ ಅಂಗಡಿಗಳಲ್ಲಿ ಹಾಲು, ತರಕಾರಿ ಬೆಲೆಯನ್ನು ದಿಢೀರ್ ಹೆಚ್ಚಿಸಿದ್ದಾರೆ. 22 ರೂ. ಇರುವ ಅರ್ಧ ಲೀಟರ್ ಹಾಲಿ ದರ ಏಕಾಏಕಿ 28ರಿಂದ 30 ರೂ. ತಲುಪಿದೆ. ತರಕಾರಿ ಬೆಲೆಗೂ ದುಬಾರಿಯಾಗುತ್ತಿದೆ ಎಂಬ ಆರೋಪಗಳೂ ಸ್ಥಳೀಯರಿಂದ ಕೇಳಿಬರುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts