More

    ತಪ್ಪು ಮಾಹಿತಿ ಇದ್ದರೂ ಅರ್ಜಿ ಪುರಸ್ಕಾರ?

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಆ. 24ರಂದು ಮುಕ್ತಾಯವಾಗಿದ್ದು, ತಪ್ಪು ಮಾಹಿತಿ ಸಲ್ಲಿಸಿದ ಕೆಲವು ನಾಮಪತ್ರಗಳನ್ನೂ ಅಧಿಕಾರಿಗಳು ಪುರಸ್ಕರಿಸಿರುವ ಶಂಕೆ ವ್ಯಕ್ತವಾಗಿದೆ.

    ನಾಮಪತ್ರ ಪರಿಶೀಲನೆ ಕಾರ್ಯ ನಡೆಸುವಾಗ ಅಧಿಕಾರಿಗಳು ಪ್ರತಿಯೊಂದು ಮಾಹಿತಿ ಸರಿಯಾಗಿದೆ ಎನ್ನುವುದನ್ನು ಖಚಿತಪಡಿಸಿಕೊಂಡು ಅಂಗೀಕರಿಸಬೇಕು. ದೋಷಗಳಿದ್ದರೆ ತಿರಸ್ಕರಿಸಬೇಕು. ಇದೇ ಕಾರಣಕ್ಕಾಗಿ ಅನೇಕ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿರುತ್ತಾರೆ. ಆದರೆ, ಹು-ಧಾ ಪಾಲಿಕೆ ಚುನಾವಣೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆಯಲ್ಲಿ ಒಂದೆರಡು ಅರ್ಜಿಯಲ್ಲಿಯ ದೋಷಗಳನ್ನು ಸಂಬಂಧಿಸಿದ ಅಧಿಕಾರಿಗಳು ಗಮನಿಸಿಲ್ಲ. ಇದರಿಂದ, ಆಯಾ ವಾರ್ಡ್​ನ ಇತರ ಅಭ್ಯರ್ಥಿಗಳು ದೂರು ಸಲ್ಲಿಸುವ ಕುರಿತು ಚಿಂತನೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

    ಆಮ್ ಆದ್ಮಿ ಪಾರ್ಟಿಯ ಕುಮಾರ ನೂಲ್ವಿ ಎಂಬುವರು ನಾಮಪತ್ರದೊಂದಿಗೆ ಛಾಪಾ ಕಾಗದದಲ್ಲಿ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ‘ಹುಬ್ಬಳ್ಳಿ ಧಾರವಾಡ ವಾರ್ಡ್ ನಂ. 32ರ ಚುನಾವಣೆಯ ಅಭ್ಯರ್ಥಿಯಾಗಿ ಈ ಕೆಳಗಿನಂತೆ ವಿಧ್ಯುಕ್ತವಾಗಿ ಪ್ರಮಾಣ ಮಾಡುತ್ತೇನೆ…’ ಎಂದು ನಮೂದಿಸಿದ್ದಾರೆ. ಆದರೆ, ಅರ್ಜಿ (ಭಾಗ-ಬಿ ಘೊಷ್ವಾರೆ)ಯಲ್ಲಿ ಕ್ಷೇತ್ರ /ವಾರ್ಡಿನ ಹೆಸರು ಮತ್ತು ಸಂಖ್ಯೆ ಎಂಬ ಕಾಲಂ ಎದುರು ‘ಹುಬ್ಬಳ್ಳಿ-ಧಾರವಾಡ ಸೆಂಟ್ರಲ್-74, ವಾರ್ಡ್ ನಂ. 30’ ಎಂದು ನಮೂದಿಸಿದ್ದಾರೆ. ಅಂದರೆ, 32ನೇ ವಾರ್ಡ್​ಗೆ ನಾಮಪತ್ರ ಸಲ್ಲಿಸಿರುವ ಅವರು, 30ನೇ ವಾರ್ಡ್ ಗಾಗಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಈ ನಾಮಪತ್ರ ಸರಿ ಎಂದು ಅಧಿಕಾರಿಗಳು ಅಂಗೀಕರಿಸಿದ್ದಾರೆ!

    ‘ಹುಬ್ಬಳ್ಳಿ- ಧಾರವಾಡ ಸೆಂಟ್ರಲ್-74’ (ವಿಧಾನಸಭೆ ಕ್ಷೇತ್ರ) ಎಂದು ಅಭ್ಯರ್ಥಿ ನಮೂದಿಸಿರುವುದು ಸಹ ತಪ್ಪಾಗಿದೆ. 32ನೇ ವಾರ್ಡ್ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ.

    ಶಿವಸೇನಾ ಪಕ್ಷದ ಕುಬೇರ ಪವಾರ ಎಂಬುವರು ಕೂಡಾ ನಾಮಪತ್ರದೊಂದಿಗೆ ಛಾಪಾ ಕಾಗದದಲ್ಲಿ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ‘ಹುಬ್ಬಳ್ಳಿ ಧಾರವಾಡ ವಾರ್ಡ್ ನಂ. 32ರ ಚುನಾವಣೆಯ ಅಭ್ಯರ್ಥಿಯಾಗಿ ಈ ಕೆಳಗಿನಂತೆ ವಿಧ್ಯುಕ್ತವಾಗಿ ಪ್ರಮಾಣ ಮಾಡುತ್ತೇನೆ…’ ಎಂದು ನಮೂದಿಸಿದ್ದಾರೆ. ಆದರೆ, ಅರ್ಜಿ (ಭಾಗ-ಬಿ ಘೊಷ್ವಾರೆ)ಯಲ್ಲಿ ಕ್ಷೇತ್ರ /ವಾರ್ಡಿನ ಹೆಸರು ಮತ್ತು ಸಂಖ್ಯೆ ಎಂಬ ಕಾಲಂ ಎದುರು ‘ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ-73, ವಾರ್ಡ್ ನಂ. 55’ ಎಂದು ನಮೂದಿಸಿದ್ದಾರೆ. ಅಂದರೆ, 32ನೇ ವಾರ್ಡ್​ಗೆ ನಾಮಪತ್ರ ಸಲ್ಲಿಸಿರುವ ಅವರು, 55ನೇ ವಾರ್ಡ್ ಗಾಗಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಈ ನಾಮಪತ್ರವನ್ನೂ ಸರಿ ಎಂದು ಅಧಿಕಾರಿಗಳು ಅಂಗೀಕರಿಸಿದ್ದಾರೆ!

    ‘ಹುಬ್ಬಳ್ಳಿ-ಧಾರವಾಡ ಕೇಂದ್ರ-73’ (ವಿಧಾನಸಭೆ ಕ್ಷೇತ್ರ) ಎಂದು ಅಭ್ಯರ್ಥಿ ನಮೂದಿಸಿರುವುದು ಸಹ ತಪ್ಪಾಗಿದೆ. 32ನೇ ವಾರ್ಡ್ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ ವ್ಯಾಪ್ತಿಯಲ್ಲಿದೆ.

    ಕೆಲ ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿರುವ ವಿಧಾನಸಭೆ ಕ್ಷೇತ್ರ ಬೇರೆಯಾಗಿದ್ದು, ತಾಂತ್ರಿಕವಾಗಿ ಇದು ದೋಷವಾಗಿದೆ. ಆದರೂ ಅರ್ಜಿಗಳು ಅಂಗೀಕಾರವಾಗಿವೆ. ಈ ಕುರಿತು ಸಂಬಂಧಿಸಿದ ವಾರ್ಡ್ ಚುನಾವಣಾಧಿಕಾರಿಗಳನ್ನು ಸಂರ್ಪಸಿದಾಗ, ಸರಿಯಾಗಿಯೇ ಪರಿಶೀಲಿಸಲಾಗಿದೆ ಎಂದು ಹೇಳಿದರು.

    ಒಂದು ವೇಳೆ ನಾಮಪತ್ರ ಪರಿಶೀಲನೆಯಲ್ಲಿ ವ್ಯತ್ಯಾಸ ಅಥವಾ ದೋಷ ಉಂಟಾದಲ್ಲಿ, ತಪ್ಪಾಗಿ ನಮೂದಿಸಿರುವ ಅಭ್ಯರ್ಥಿಯೂ ಕಣದಲ್ಲಿ ಉಳಿಯುತ್ತಾರೆ. ಫಲಿತಾಂಶ ಪ್ರಕಟವಾದ ನಂತರವೂ ಯಾರಾದರೂ ತಕರಾರು ಮಾಡಿದರೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

    ಚುನಾವಣೆಯ ನಿಯಮಗಳ ಪ್ರಕಾರ ನಾಮಪತ್ರಗಳ ಪರಿಶೀಲನೆ ನಡೆದಿದೆ. ತಪ್ಪು ಮಾಹಿತಿಯ ಅರ್ಜಿಯನ್ನು ಪುರಸ್ಕರಿಸಲಾಗಿದೆ ಎಂದು ಆರೋಪಿಸಿ ಯಾರೂ ಇದುವರೆಗೆ ದೂರು ನೀಡಿಲ್ಲ. ದೂರು ಬಂದರೆ ಚುನಾವಣೆ ಆಯೋಗಕ್ಕೆ ಕಳುಹಿಸಿಕೊಡಲಾಗುತ್ತದೆ.

    | ನಿತೇಶ ಪಾಟೀಲ ಧಾರವಾಡ ಜಿಲ್ಲಾಧಿಕಾರಿ

    ತಪ್ಪು ಮಾಹಿತಿಯಿಂದ ಕೂಡಿರುವ ಅರ್ಜಿಗಳನ್ನು ಪುರಸ್ಕರಿಸಿರುವುದು ಆಶ್ಚರ್ಯ ಉಂಟು ಮಾಡಿದೆ. ಇಂಥ ಕ್ರಮವನ್ನು ನಾವು ಖಂಡಿಸುತ್ತೇವೆ. ಸಂಬಂಧಪಟ್ಟ ವಾರ್ಡ್​ಗಳ ಜವಾಬ್ದಾರಿ ಇರುವ ಚುನಾವಣಾಧಿಕಾರಿಗಳನ್ನು ವಜಾಗೊಳಿಸಬೇಕು. ಜಿಲ್ಲಾಧಿಕಾರಿ ಕೂಡಲೆ ಗಮನ ಹರಿಸಿ, ತಪ್ಪು ಮಾಹಿತಿ ನೀಡಿದ ಅಭ್ಯರ್ಥಿಗಳು ಚುನಾವಣೆ ಸ್ಪರ್ಧೆಯಲ್ಲಿ ಮುಂದುವರಿಯದಂತೆ ಆದೇಶಿಸಬೇಕು. ಈ ಕುರಿತು ನಾವು ದೂರನ್ನು ಸಹ ಸಲ್ಲಿಸಲು ನಿರ್ಧರಿಸಿದ್ದೇವೆ.

    | ಅರವಿಂದ ಬೆಲ್ಲದ

    ಶಾಸಕ ಹಾಗೂ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts