More

    ತತ್ತರಿಸಿಹೋದ ಉಳ್ಳಾಗಡ್ಡಿ ಬೆಳೆಗಾರ

    ಡಂಬಳ: ಕರೊನಾ ಮಹಾಮಾರಿಯಿಂದಾಗಿ ರೈತರು ತತ್ತರಿಸಿಹೋಗಿದ್ದಾರೆ. ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬೆಳೆಯಲಾದ ಉಳ್ಳಾಗಡ್ಡಿ ಉತ್ತಮ ಫಸಲು ಬಂದಿದ್ದರೂ ಅದನ್ನು ಮಾರಾಟ ಮಾಡಲಾಗದಂತಹ ಸ್ಥಿತಿ ನಿರ್ವಣವಾಗಿದೆ.

    ಕಳೆದ ಮುಂಗಾರು ಹಂಗಾಮಿನಲ್ಲಿ ಉಳ್ಳಾಗಡ್ಡಿಗೆ ಬಂಗಾರದ ಬೆಲೆ ಬಂದಿತ್ತು. ಇಳುವರಿ ಕಡಿಮೆ ಬಂದವರೂ ಕೈತುಂಬಾ ಹಣ ಗಳಿಸಿದ್ದರು. ಆದರೆ, ಏಪ್ರಿಲ್, ಮೇ ತಿಂಗಳಲ್ಲಿ ಉಳ್ಳಾಗಡ್ಡಿಗೆ ಉತ್ತಮ ಬೆಲೆ ಬರುತ್ತದೆ ಎಂಬ ಅಂದಾಜಿನಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ ಶ್ರಮವಹಿಸಿ ಬೆಳೆ ಬೆಳೆದರೂ ಯಾವುದೇ ಫಲ ಸಿಗುತ್ತಿಲ್ಲ.

    ಡಂಬಳ ವ್ಯಾಪ್ತಿಯ ಡೋಣಿ, ಹಿರೇವಡ್ಡಟ್ಟಿ, ಕದಾಂಪುರ, ಜಂತ್ಲಿ, ಪೇಠಾಲೂರು ಸೇರಿ ಹಲವಾರು ಗ್ರಾಮಗಳ ರೈತರು ಬೇಸಿಗೆ ಉಳ್ಳಾಗಡ್ಡಿ ಬಿತ್ತನೆ ಮಾಡಿದ್ದರು. ಫಸಲು ಕೂಡ ಉತ್ತಮವಾಗಿ ಬಂದಿದೆ. ಆದರೆ, ಲಾಕ್​ಡೌನ್ ಇರುವುದರಿಂದ ಖರೀದಿದಾರರೇ ಬರುತ್ತಿಲ್ಲ. ಹೀಗಾಗಿ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರು ನಿರಾಸೆ ಅನುಭವಿಸುವಂತಾಗಿದೆ. ಕೆಲ ರೈತರು ಉಳ್ಳಾಗಡ್ಡಿಯನ್ನು ತಾವೇ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಮುಂದಾದರೂ ಬೆಲೆ ಕಡಿಮೆಯಾಗಿರುವುದು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈ ಸಂದರ್ಭದಲ್ಲಿ ಉಳ್ಳಾಗಡ್ಡಿ ಮಾರಿದರೆ ಮಾಡಿದ ಖರ್ಚು ಕೂಡ ವಾಪಸ್ ಬರುವುದಿಲ್ಲ ಹಾಗಂತ ಅದನ್ನು ಹಲವಾರು ದಿನಗಳವರೆಗೆ ಸಂಗ್ರಹಿಸಿ ಇಡಲೂ ಆಗುವುದಿಲ್ಲ. ಹೀಗಾಗಿ ರೈತರಿಗೆ ದಿಕ್ಕು ತೋಚದಂತಾಗಿದೆ.

    ಉತ್ತಮ ಫಸಲು: ರೈತರು ಉಳ್ಳಾಗಡ್ಡಿ ಬೆಳೆಯಲು ಬಿತ್ತನೆ, ಕೀಟನಾಶಕ ಔಷಧ, ಗೊಬ್ಬರ, ಆಳುಗಳ ಖರ್ಚು ಸೇರಿ 1 ಎಕರೆಗೆ 30ರಿಂದ 40 ಸಾವಿರ ರೂ. ಖರ್ಚು ಮಾಡಿದ್ದಾರೆ. ಎಕರೆಗೆ ಜಮೀನಿನಲ್ಲಿ 200 ಚೀಲದಷ್ಟು ಫಸಲಿದೆ ಆದರೆ, ಉಳ್ಳಾಗಡ್ಡಿ ಬೆಲೆ ಇಳಿದಿರುವುದರಿಂದ ಹಾಗೂ ಖರೀದಿದಾರರು ಬಾರದಿರುವುದರಿಂದ ನಷ್ಟ ಅನುಭವಿಸುವಂತಾಗಿದೆ.

    ರೈತರ ಆಗ್ರಹ: ಉಳ್ಳಾಗಡ್ಡಿ ಬೆಲೆ ಏಕಾಏಕಿ ಕುಸಿತವಾಗಿದೆ. ಆದ್ದರಿಂದ ಸರ್ಕಾರ ಮಧ್ಯಪ್ರವೇಶ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಖರೀದಿರಾರರು ರೈತರ ಜಮೀನಿನಿಂದಲೇ ನೇರವಾಗಿ ಉಳ್ಳಾಗಡ್ಡಿ ಖರೀದಿಸಲು ಅವಕಾಶ ನೀಡಬೇಕು ಎನ್ನುತ್ತಾರೆ ರೈತರು.

    2 ಎಕರೆ ಜಮೀನಿನಲ್ಲಿ ಉಳ್ಳಾಗಡ್ಡಿ ಬೆಳೆಯಲಾಗಿದೆ. ಇಳುವರಿ ಕೂಡ ಉತ್ತಮವಾಗಿ ಬಂದಿದೆ. ಆದರೆ, ಮುಂಗಾರು ಹಂಗಾಮಿನಲ್ಲಿ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿಗೆ ಬೆಲೆ ಇಲ್ಲ. ಖರೀದಿದಾರರು ಉಳ್ಳಾಗಡ್ಡಿ ಖರೀದಿಸಲು ಮುಂದೆ ಬರುತ್ತಿಲ್ಲ. ಇದರಿಂದ ಉಳ್ಳಾಗಡ್ಡಿ ಜಮೀನಿನಲ್ಲೇ ಕೊಳೆಯುತ್ತಿವೆ.
    | ಸಂಜೀವ ಮಾನೆ, ಶಿವಾಜಿ ಪಾರಪ್ಪನವರ, ಉಳ್ಳಾಗಡ್ಡಿ ಬೆಳೆಗಾರರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts