More

    ತಂಪಾಗಿಲ್ಲ ಇಳೆ… ಬಿತ್ತನೆಗೆ ಹಿನ್ನಡೆ..

    ಹುಬ್ಬಳ್ಳಿ: ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದರಿಂದ ಹೊಲ ಹಸನು ಮಾಡಿಕೊಂಡು ಖುಷಿಯಿಂದಲೇ ಬಿತ್ತನೆಗೆ ಸಜ್ಜಾಗಿದ್ದರು ರೈತರು. ಆದರೆ, ಕಳೆದೊಂದು ವಾರದಿಂದ ಮಳೆರಾಯ ಮಾಯವಾಗಿ ಆತಂಕ ಮೂಡಿಸಿದ್ದಾನೆ.
    ಮೇ ತಿಂಗಳ ಮಧ್ಯದಲ್ಲಿ ತೌಕ್ತೆ, ಯಾಸ ಚಂಡಮಾರುತಗಳು ಬೀಸಿ ಒಂದಿಷ್ಟು ಹೆಚ್ಚಾಗಿಯೇ ಸುರಿದಿದ್ದ ಮಳೆಯಿಂದಾಗಿ ನೆಲವೆಲ್ಲ ಹಸಿಯಾಗಿದೆ. ಇದರಿಂದಾಗಿ, ಕೃಷಿ ಚಟುವಟಿಕೆಗಳು ಚುರುಕಾಗಿವೆ. ಆದರೆ, ಉಷ್ಣಾಂಶ ಈಗಲೂ ಸರಾಸರಿ 30- 32 ಡಿಗ್ರಿ ಸೆಲ್ಸಿಯಸ್ ಇರುವುದರಿಂದ ಬಿತ್ತನೆಗೆ ಯೋಗ್ಯವಲ್ಲ ಎಂಬ ಅಭಿಪ್ರಾಯವನ್ನು ಕೃಷಿ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ.
    ಕರೊನಾ, ಲಾಕ್​ಡೌನ್ ಇತ್ಯಾದಿ ಅಡೆತಡೆಗಳ ಮಧ್ಯೆಯೂ ರೆಂಟೆ, ಕುಂಟೆ ಹೊಡೆದು ಎಲ್ಲ ಸಜ್ಜು ಮಾಡಿ ಬಿತ್ತನೆ ಮಾಡಬೇಕು ಎನ್ನುವ ಹೊತ್ತಿಗೆ ಮಳೆ ಇಲ್ಲ. ಬಿತ್ತನೆ ಬೀಜ, ಗೊಬ್ಬರ ಖರೀದಿಸಿ ರುವ ರೈತರು ನಿತ್ಯ ಮುಗಿಲು ನೋಡುವಂತಾಗಿದೆ.
    ಪ್ರತಿ ವರ್ಷ ಜೂನ್ ಮೊದಲ ವಾರದಿಂದಲೇ ಮುಂಗಾರು ಮಾರುತಗಳು ರಾಜ್ಯಕ್ಕೆ ಅಪ್ಪಳಿಸುತ್ತಿದ್ದವು. ಇದರಿಂದ ವಾತಾವರಣ ಬದಲಾಗುತ್ತಿತ್ತು. ಉಷ್ಣಾಂಶ ಕೂಡ 30 ಡಿಗ್ರಿ ಸೆಲ್ಸಿಯಸ್ ಕೆಳಗೆ ಇಳಿಯುತ್ತಿತ್ತು. ಆಗಾಗ ಮಳೆ ಸುರಿದು ಎಲ್ಲೆಡೆ ತಂಪು ಸೂಸುತ್ತಿತ್ತು. ಇದರಿಂದ ಬಿತ್ತಿದ ಬೀಜ ಸುಲಭವಾಗಿ ಮೊಳಕೆಯೊಡೆಯುತ್ತಿತ್ತು.
    ಆದರೆ, ಈ ವರ್ಷ ಧಾರವಾಡ ಜಿಲ್ಲೆಯಲ್ಲಿ ಒಂದು ವಾರದಿಂದ ಮಳೆಯ ದರ್ಶನವಿಲ್ಲ. ಮುಂಗಾರಿನ ವಾತಾವರಣವೇ ಕಾಣದ್ದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಮೇ 26ರಿಂದ ಆರಂಭವಾದ ರೋಹಿಣಿ ಮಳೆ ಜೂನ್ 7ರವರೆಗೆ ಇದೆ. ಈ ಮಳೆಯಲ್ಲಿ ಬಿತ್ತನೆಯಾದರೆ ಉತ್ತಮ ಫಸಲು ನಿರೀಕ್ಷಿಸಬಹುದು. ಹಾಗಾಗಿ ಇದೇ ಮಳೆಯಲ್ಲಿ ಬಿತ್ತನೆ ಮಾಡಬೇಕೆಂಬುದು ರೈತರ ಹಂಬಲ. ಆದರೆ, ವಾತಾವರಣ ಸಾಥ್ ನೀಡದಿರುವುದು ರೈತರಿಗೆ ಸಮಸ್ಯೆ ತಂದೊಡ್ಡಿದೆ.
    ತಡವಾಗಲಿದೆ ಮುಂಗಾರು: ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಈಗಾಗಲೇ ಎರಡು ಚಂಡಮಾರುತಗಳು ಅಪ್ಪಳಿಸಿ ಹೋಗಿದ್ದರಿಂದ ಮುಂಗಾರು ಆಗಮನ ವಿಳಂಬವಾಗುತ್ತಿದೆ. ಜೂನ್ 3ಕ್ಕೆ ಕೇರಳ ಪ್ರವೇಶ ಮಾಡಿ ಜೂನ್ 6ರ ವೇಳೆಗೆ ಕರ್ನಾಟಕಕ್ಕೆ ಮುಂಗಾರು ಮಾರುತಗಳು ಬರಲಿವೆ. ಈಗಾಗಲೇ ಬೀಸಿರುವ ಎರಡು ಚಂಡಮಾರುತಗಳು ಮುಂಗಾರು ಮೇಲೆ ಪ್ರಭಾವ ಬೀರಿವೆ ಎಂದು ಇಲಾಖೆ ಹೇಳಿದೆ.
    ರೈತರಿಂದ ಖರೀದಿ: ಯೂರಿಯಾ- 5517 ಟನ್, ಡಿಎಪಿ- 4576 ಟನ್, ಎಂಒಪಿ- 744 ಟನ್, ಕಾಂಪ್ಲೆಕ್ಸ್- 6391 ಟನ್ ಸೇರಿ 17228 ಟನ್ ಗೊಬ್ಬರವನ್ನು ರೈತರು ಖರೀದಿಸಿದ್ದಾರೆ.
    2.35 ಲಕ್ಷ ಹೆಕ್ಟೇರ್ ಗುರಿ: ಧಾರವಾಡ ಜಿಲ್ಲೆಯಲ್ಲಿ ಈ ವರ್ಷ 2.35 ಲಕ್ಷ ಹೆಕ್ಟೇರ್​ನಲ್ಲಿ ಕೃಷಿ ಬೆಳೆಗಳನ್ನು ಬಿತ್ತುವ ಗುರಿ ಹೊಂದಲಾಗಿದೆ. ಭತ್ತ- 12080 ಹೆಕ್ಟೇರ್, ಗೋವಿನಜೋಳ- 43000 ಹೆ, ತೊಗರಿ- 2160 ಹೆ, ಉದ್ದು- 4230 ಹೆ, ಹೆಸರು- 41750 ಹೆ, ಶೇಂಗಾ- 25450 ಹೆ, ಸೋಯಾಬೀನ್- 36300 ಹೆ, ಹತ್ತಿ- 59300 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆ ಇದೆ. ಇದಕ್ಕೆ ತಕ್ಕಂತೆ ರೈತರು ಬೀಜ ಖರೀದಿಸಿದ್ದಾರೆ ಎಂದು ಕೃಷಿ ಇಲಾಖೆ ತಿಳಿಸಿದೆ.
    ಅಗತ್ಯ ಬೀಜ ಸಂಗ್ರಹ: ಈ ಬಾರಿಯ ಮುಂಗಾರು ಹಂಗಾಮಿಗಾಗಿ ಕೃಷಿ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡು ಈಗಾಗಲೇ ಬೀಜ, ಗೊಬ್ಬರ ವಿತರಣೆ ಆರಂಭಿಸಿದೆ. ಲಾಕ್​ಡೌನ್​ನಲ್ಲಿ ಒಂದಿಷ್ಟು ಸಡಿಲಿಕೆ ಮಾಡಿದ್ದರಿಂದ ರೈತರು ಸರದಿಯಲ್ಲಿ ನಿಂತು ವಿವಿಧ ನಮೂನೆಯ ಬಿತ್ತನೆಯ ಬೀಜ, ಗೊಬ್ಬರ ಖರೀದಿಸಿದ್ದಾರೆ. ಮೇ 31ರ ವರೆಗೆ ಹೆಸರು- 605 ಕ್ವಿಂಟಾಲ್, ಉದ್ದು- 195 ಕ್ವಿಂ, ಶೇಂಗಾ- 667, ಮೆಕ್ಕೆಜೋಳ- 587, ಭತ್ತ- 111, ತೊಗರಿ- 15, ಸೋಯಾಬೀನ್- 9310 ಕ್ವಿಂಟಾಲ್ ಸೇರಿ 11500 ಕ್ವಿಂಟಾಲ್ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಿಂದ ಖರೀದಿ ಮಾಡಿದ್ದಾರೆ.

    ಮುಂಗಾರು ಮೂರು ದಿನ ತಡವಾಗಿ ರಾಜ್ಯ ಪ್ರವೇಶಿಸಲಿದೆ. ಹಾಗಾಗಿ ರೈತರು ಮಳೆ ನೋಡಿಕೊಂಡು ಬಿತ್ತನೆ ಮಾಡುವುದು ಉತ್ತಮ. ವಿಶೇಷವಾಗಿ ಸೋಯಾಬೀನ್ ಬೀಜವನ್ನು ಒಣ ಭೂಮಿಯಲ್ಲಿ ಬಿತ್ತನೆ ಮಾಡಬಾರದು. ಹೆಸರು, ಶೇಂಗಾ, ಉದ್ದು ಬಿತ್ತನೆಯಾದ ನಂತರ ಮಳೆಯಾದರೂ ನಡೆಯುತ್ತದೆ.
    | ರಾಜಶೇಖರ ಬಿಜಾಪುರ, ಜಂಟಿ ನಿರ್ದೇಶಕ, ಕೃಷಿ ಇಲಾಖೆ ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts