More

    ಡೇರಿಗಳಲ್ಲೂ ರೈತರಿಗೆ ಧೋಖಾ !

    ಹುಣಸೂರು: ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಹಾಲು ಪರೀಕ್ಷೆಗಾಗಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ಹಾಲಿನ ಸ್ಯಾಂಪಲ್‌ಗಳನ್ನು ಪಡೆದು ಲೂಟಿ ಹೊಡೆಯಲಾಗುತ್ತಿದೆ. ಈ ಕುರಿತು ರೈತರು ಗಮನಿಸಿದ್ದೀರಾ?..ಆರ್‌ಟಿಒ ಕಚೇರಿ ಸುತ್ತ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂಬ ದೂರಿದೆಯಲ್ಲ, ಅಧಿಕಾರಿಗಳು ಏನು ಮಾಡುತ್ತಿದ್ದೀರಿ? ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವಧಿ ಮುಗಿದ ಔಷಧಗಳ ವಿತರಣೆ ಆಗುತ್ತಿದೆಯೆಂತೆ ಗಮನಿಸಿದ್ದೀರಾ ವೈದ್ಯರುಗಳೇ?…..


    ನಗರದ ನಗರಸಭಾ ಸಭಾಂಗಣದಲ್ಲಿ ಬುಧವಾರ ಲೋಕಾಯುಕ್ತ ಜಿಲ್ಲಾ ಡಿವೈಎಸ್‌ಪಿ ನೇತೃತ್ವದಲ್ಲಿ ಆಯೋಜಿಸಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆಯಲ್ಲಿ ಡಿವೈಎಸ್‌ಪಿ ಮಾಲತೇಶ್ ನಾಗರಿಕರಿಗೆ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಮೋಸದ ಕುರಿತಾಗಿ ಮಾಹಿತಿ ನೀಡುವುದರೊಂದಿಗೆ ನಾಗರಿಕರಿಂದ ಬಂದ ದೂರುಗಳ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ಪರಿ ಇದಾಗಿತ್ತು.


    ಕಂದಾಯ ಇಲಾಖೆಯಲ್ಲಿ ಬೆಳೆ ನಷ್ಟ ಪರಿಹಾರವನ್ನು ಸಮರ್ಪಕವಾಗಿ ವಿತರಿಸಲು ತಹಸೀಲ್ದಾರ್‌ಗೆ ಸೂಚಿಸಿದರು. ಮುರಾರ್ಜಿ ಇನ್ನಿತರ ವಸತಿ ಶಾಲೆಗಳಲ್ಲಿ ದಾಸ್ತಾನು ಕೊಠಡಿಯ ಕೀಲಿಕೈ ಹೊರಗುತ್ತಿಗೆ ನೌಕರನ ಕೈಯಲ್ಲಿರುತ್ತದೆ. ವ್ಯತ್ಯಾಸವಾದರೆ ಹೊಣೆ ಯಾರದ್ದು ಎಂದು ಸಮಾಜ ಕಲ್ಯಾಣಾಧಿಕಾರಿಯನ್ನು ಪ್ರಶ್ನಿಸಿದರು.


    ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆಯೇ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಅವರನ್ನು ಪ್ರಶ್ನಿಸಿ ಸೌಲಭ್ಯ ಇಲ್ಲದ ಕಡೆ ಕೂಡಲೇ ಸೌಲಭ್ಯ ಕಲ್ಪಿಸಲು ಸೂಚಿಸಿದರು.


    ಸ್ಯಾಂಪಲ್ ಹಾಲಿನಿಂದ ಹಣ ಲೂಟಿ: ಡೇರಿಗಳಲ್ಲಿ ರೈತರು ಮಾರಾಟಕ್ಕಾಗಿ ತರುವ ಹಾಲಿನ ಪರೀಕ್ಷೆಗಾಗಿ ಡೇರಿಯ ಸಿಬ್ಬಂದಿ 50 ಎಂ.ಎಲ್. ಪ್ರಮಾಣದ ಹಾಲನ್ನು ಪಡೆಯಬೇಕೆಂಬ ನಿಯಮವಿದೆ. ಆದರೆ ಹಲವಾರು ಕಡೆ 150-200 ಎಂ.ಎಲ್.ನಷ್ಟು ಹಾಲನ್ನು ಪಡೆಯುತ್ತಿದ್ದಾರೆಂಬ ದೂರುಗಳಿವೆ. ಕೆಲವು ಡೇರಿಗಳಲ್ಲಿ ಪ್ರತಿದಿನ 300-400 ಲೀಟರ್ ಈ ರೀತಿಯಾಗಿ ಹೆಚ್ಚುವರಿಯಾಗಿ ಪಡೆದ ಹಾಲನ್ನು ತಾವೇ ಸೃಷ್ಟಿಸಿಕೊಂಡಿರುವವರ ನಕಲಿ ಹೆಸರನ್ನು ಬಳಸಿ ಸರ್ಕಾರದಿಂದ ಹಣ ಪಡೆದು ಲಕ್ಷಾಂತರ ರೂ. ಲೂಟಿ ಮಾಡುತ್ತಿದ್ದಾರೆ. ಈ ಕುರಿತು ರೈತರು ಎಚ್ಚೆತ್ತುಕೊಳ್ಳಬೇಕು. ಡೇರಿ ಗೋಡೆಯಲ್ಲಿ ಆ ಭಾಗದ ಸಿಬ್ಬಂದಿ, ಕಾರ್ಯದರ್ಶಿ, ವಿಸ್ತರಣಾಧಿಕಾರಿಯ ಹೆಸರು ಮತ್ತು ಮೊಬೈಲ್ ಸಂಖ್ಯೆ ಪ್ರದರ್ಶಿಸಲು ರೈತರು ಸೂಚಿಸಬೇಕು. ವಾರದಲ್ಲಿ ರೈತ ನೀಡಿದ ಹಾಲಿನ ಒಟ್ಟು ಪ್ರಮಾಣವನ್ನು ತಿಳಿಸಲು ಕಾರ್ಯದರ್ಶಿ ಹಿಂದೇಟು ಹಾಕುವುದು ಏಕೆ? ರೈತರು ಇದರ ಮಾಹಿತಿಯನ್ನು ಪಡೆಯಿರಿ. ಮಾಹಿತಿ ನೀಡದಿದ್ದಲ್ಲಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಪಡೆಯಬೇಕು. ನಿಮಗಾಗುತ್ತಿರುವ ಅನ್ಯಾಯವನ್ನು ನೀವೇ ಪ್ರಶ್ನಿಸಬೇಕೆಂದು ಡಿವೈಎಸ್‌ಪಿ ತಿಳಿಸಿದರು.


    ದೂರುಗಳ ಸರಮಾಲೆ: ಲೋಕಾಯುಕ್ತರಿಂದ ಅಹವಾಲು ಸ್ವೀಕಾರದ ಸಭೆಯಲ್ಲಿ ದೂರುಗಳ ಸರಮಾಲೆಯೇ ಬಂದಿದೆ. 23ಕ್ಕೂ ಹೆಚ್ಚು ಜನ ದೂರು ದಾಖಲಿಸಿದರು. ವಕೀಲ ಶಿವಲಿಂಗಯ್ಯ ಎಡಿಎಲ್‌ಆರ್ ಕಚೇರಿಯಲ್ಲಿ ದಲ್ಲಾಳಿಗಳ ಕಾಟ ಹೆಚ್ಚಾಗಿದೆ ಎಂದು ದೂರಿದರು.


    ಅಂಬೇಡ್ಕರ್ ನಗರದ ಮಹಿಳೆಯರು, ತಮ್ಮ ಕಾಲನಿಯಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಗ್ರಾಮಸ್ಥರು ಬಿದ್ದು ಗಾಯಗೊಂಡಿದ್ದಾರೆ. 10ಕ್ಕೂ ಹೆಚ್ಚು ಕುಟುಂಬಗಳಿಗೆ ರೇಷನ್ ಕಾರ್ಡ್ ಸಿಕ್ಕಿಲ್ಲ. ಅಂಗನವಾಡಿ ಕೇಂದ್ರ ದುಸ್ಥಿತಿಯಲ್ಲಿದೆ. ಮೂಲಸೌಕರ್ಯ ಕಲ್ಪಿಸಬೇಕೆಂದು ಕೋರಿದರು. ಸಂತೆಕೆರೆ ಕೋಡಿಯ ಪ್ರಕಾಶ್ ತಮ್ಮ ಆಸ್ತಿಯ ಇ-ಸ್ವತ್ತು ಮಾಡಿಕೊಡಲು ಪಿಡಿಒ 8 ಸಾವಿರ ರೂ.ಗಳ ಲಂಚ ಕೇಳುತ್ತಿದ್ದಾರೆ. ಇದರಲ್ಲಿ ಇಒ ಮತ್ತು ಶಾಸಕರಿಗೂ ಪಾಲಿದೆ ಎನ್ನುತ್ತಿದ್ದಾರೆಂದು ನೇರವಾಗಿ ಆರೋಪಿಸಿ ದೂರು ದಾಖಲಿಸಿದರು.


    ಅಕ್ರಮ ರಸ್ತೆ ನಿರ್ಮಾಣ: ಗೋವಿಂದನಹಳ್ಳಿಯ ಎಸ್.ಮನು ಎಂಬುವರು ತಮ್ಮ ಜಮೀನಿನ ಮೇಲೆ ರಸ್ತೆ, ವಿದ್ಯುತ್ ಕಂಬ, ತಂತಿಬೇಲಿ ಹಾಕಿಸಿಕೊಂಡು ತನ್ನ ಜಮೀನಿಗೆ ದಾರಿ ಮಾಡಿಸಿಕೊಂಡಿದ್ದಾರೆ. ಸರ್ವೇ ಇಲಾಖೆ ಮೂರು ಬಾರಿ ಸರ್ವೇ ನಡೆಸಿ ಗೊಂದಲದ ವರದಿ ನೀಡಿ ಕೈಚೆಲ್ಲಿದೆ. ತಂತಿಬೇಲಿ ಹಾಕಿದ್ದ ಜಾಗದಲ್ಲಿ ನನ್ನ ಬೋರ್‌ವೆಲ್, 15ಕ್ಕೂ ಹೆಚ್ಚು ತೆಂಗಿನಮರಗಳು ನೆಲಕ್ಕುರುಳಿವೆ. ನನಗಾದ ಅನ್ಯಾಯಕ್ಕೆ ಸರ್ವೇ ಇಲಾಖೆಯೇ ಹೊಣೆ ಹೊರಬೇಕು. ನನಗೆ ನ್ಯಾಯ ಒದಗಿಸಬೇಕೆಂದು ದೂರು ಸಲ್ಲಿಸಿದರು.


    ಕಲ್ಕುಣಿಕೆ ಶಿವಾನಂದ್ ದೂರು ನೀಡಿ, ತಮ್ಮ ನಿವೇಶನದ ಕುರಿತಾಗಿ 95 ವರ್ಷಗಳ ದಾಖಲೆಗಳಿವೆ. ಕಂದಾಯ ಕಟ್ಟಿದ್ದೇನೆ. ಇ ಸ್ವತ್ತು ಮಾಡಿಕೊಡಲು ನಗರಸಭೆ ಆರ್‌ಐ ಇಲ್ಲಸಲ್ಲದ ನೆಪ ಹೇಳುತ್ತಿದ್ದು, ರಾಜಕೀಯ ಕಾರಣದಿಂದ ನನಗೆ ಈ ಸ್ವತ್ತು ಸಿಗುತ್ತಿಲ್ಲ. ಈ ಕುರಿತು ಕ್ರಮವಹಿಸಿರಿ ಎಂದು ಕೋರಿದರು. ಮಂಜುನಾಥ ಬಡಾವಣೆ ನಿವಾಸಿಗಳು ಮಳೆಯಿಂದಾಗಿ ಬಡಾವಣೆ ಮುಳುಗುತ್ತಿದ್ದು, ರಾಜಕಾಲುವೆ ನಿರ್ಮಿಸಿ ನಿವಾಸಿಗಳ ಬವಣೆ ತೀರಿಸಬೇಕೆಂದು ಒತ್ತಾಯಿಸಿ ದೂರು ಸಲ್ಲಿಸಿದರು.

    ಲೋಕಾಯುಕ್ತ ನಿರೀಕ್ಷಕಿ ರೂಪಶ್ರೀ, ಉಪವಿಭಾಗಾಧಿಕಾರಿ ವರ್ಣಿತ್ ನೇಗಿ, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾ.ಪಂ. ಇಒ ಬಿ.ಕೆ.ಮನು, ಪ್ರಭಾರ ಪೌರಾಯುಕ್ತೆ ಎಲ್.ರೂಪಾ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts