More

    ಡೆಲ್ಟಾ ತಡೆಗೆ ಮಹಾ ಗಡಿಯಲ್ಲಿ ಕಟ್ಟೆಚ್ಚರ

    ಬೆಳಗಾವಿ: ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿಭಾಗವಾದ ಬೆಳಗಾವಿ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರು ಕರೊನಾ ನೆಗೆಟಿವ್ ವರದಿ ಅಥವಾ ಲಸಿಕೆ ಪಡೆದಿರುವ ಬಗ್ಗೆ ದಾಖಲೆ ಹೊಂದಿರದಿದ್ದರೆ ಕರ್ನಾಟಕ ರಾಜ್ಯ ಪ್ರವೇಶಿಸದಂತೆ ತಡೆದು, ವಾಪಸ್ ಕಳುಹಿಸಲಾಗುತ್ತಿದೆ.

    ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ಪ್ರಯಾಣಿಕರ ತಪಾಸಣೆ ತೀವ್ರಗೊಳಿಸಿರುವ ಜಿಲ್ಲಾ ಪೊಲೀಸರು, ಭಾನುವಾರವೂ ಹಲವು ಖಾಸಗಿ ವಾಹನ ಸೇರಿದಂತೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನೂ ತಡೆದು ಪ್ರಯಾಣಿಕರ ಬಳಿ ನೆಗೆಟಿವ್ ವರದಿ ಇದೆಯೋ, ಇಲ್ಲವೋ ಎಂದು ಪರಿಶೀಲಿಸಿದರು. ಅಲ್ಲದೆ, ಸೂಕ್ತ ದಾಖಲೆ ಇಲ್ಲದವರನ್ನು ವಾಪಸ್ ಕಳುಹಿಸುತ್ತಿದ್ದರು.

    ಸ್ಥಳದಲ್ಲೇ ಪ್ರಯಾಣಿಕರ ಪರೀಕ್ಷೆ: ಮಹಾರಾಷ್ಟ್ರ ಮತ್ತು ಗೋವಾ ರಾಜ್ಯ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲೂ ಚೆಕ್‌ಪೋಸ್ಟ್ ತೆರೆಯಲಾಗಿದೆ. ಪ್ರತಿ ಪ್ರಯಾಣಿಕರ ಆರ್‌ಟಿಪಿಸಿಆರ್ ವರದಿ ಹಾಗೂ ಲಸಿಕೆ ಪಡೆದಿರುವ ದಾಖಲೆ ತಪಾಸಣೆ ನಡೆಸಿಯೇ ಪ್ರವೇಶ ನಿರ್ಧರಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ ತಪಾಸಣೆ ಸಾಧ್ಯವಾಗಿಲ್ಲ ಎಂದು ಸಮಜಾಯಿಷಿ ನೀಡುವವರು ಹಾಗೂ 18 ವರ್ಷದೊಳಗಿನವರಿಗೆ ಲಸಿಕೆ ಸಿಗುತ್ತಿಲ್ಲ ಎನ್ನುವವರನ್ನು ಸ್ಥಳದಲ್ಲೇ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ಚೆಕ್‌ಪೋಸ್ಟ್‌ನಲ್ಲಿ ವೈದ್ಯಕೀಯ ಸಿಬ್ಬಂದಿ ನಿಯೋಜಿಸಲಾಗಿದೆ.

    ಮಹಾರಾಷ್ಟ್ರದಿಂದ ಆಗಮಿಸಿ ಕೊಗನೊಳ್ಳಿ ಚೆಕ್‌ಪೋಸ್ಟ್ ಮೂಲಕ ಬೆಳಗಾವಿ ಜಿಲ್ಲೆ ಪ್ರವೇಶಿಸುವ ಎಲ್ಲ ವಾಹನಗಳಲ್ಲಿರುವ ಪ್ರಯಾಣಿಕರನ್ನು ತಪಾಸಿಸಲಾಗುತ್ತಿದೆ. ಕೋವಿಡ್-19 ನೆಗೆಟಿವ್ ವರದಿ ಅಥವಾ ಕನಿಷ್ಠ ಮೊದಲ ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಬರಲು ಅವಕಾಶ ನೀಡಲಾಗುತ್ತಿದೆ. 18 ವರ್ಷದೊಳಗಿನವರಿಗೆ ಸ್ಥಳದಲ್ಲೇ ಪರೀಕ್ಷಿಸಿ ಕರೊನಾ ನೆಗೆಟಿವ್ ಇದ್ದರಷ್ಟೇ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.
    | ಲಕ್ಷ್ಮಣ ನಿಂಬರಗಿ ಎಸ್ಪಿ, ಬೆಳಗಾವಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts