More

    ಡಿಸಿಸಿ ಬ್ಯಾಂಕ್ ಹಗರಣ ಸಿಬಿಐಗೆ ವಹಿಸಿ

    ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಮುಖಂಡರು ಸೋಮವಾರ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದರು.

    7 ವರ್ಷಗಳ ಹಿಂದೆ ಸುಳ್ಳು ದಾಖಲೆ ಸೃಷ್ಟಿಸಿ 63 ಕೋಟಿ ರೂ. ಸಾಲದ ರೂಪದಲ್ಲಿ ಪಡೆಯಲಾಗಿದೆ. ಆ ಸಂದರ್ಭದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿದ್ದ ಕೆ.ಎಸ್.ಈಶ್ವರಪ್ಪ ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ್ದರು. ಆದರೆ ಆಗಿನ ಕಾಂಗ್ರೆಸ್ ಸರ್ಕಾರ ನೆಪ ಮಾತ್ರಕ್ಕೆ ಸಿಐಡಿ ತನಿಖೆ ನಡೆಸಿ ಬಿ ರಿಪೋರ್ಟ್ ಬರುವಂತೆ ನೋಡಿಕೊಂಡಿತ್ತು ಎಂದು ದೂರಿದರು.

    ಸರ್ಕಾರದ ಅನುಮತಿಯಿಲ್ಲದೆ ಮತ್ತು ಆಡಳಿತ ಮಂಡಳಿ ನಿರ್ದೇಶಕರಿಗೂ ತಿಳಿಸದೆ ನಷ್ಟದಲ್ಲಿರುವ ಬೇರೆ ಜಿಲ್ಲೆಗಳ ಮೂರು ಸಕ್ಕರೆ ಕಾರ್ಖಾನೆಗಳಿಗೆ ಇತ್ತೀಚೆಗೆ ಸುಮಾರು 85 ಕೋಟಿ ರೂ. ಸಾಲ ನೀಡಲಾಗಿದೆ. ಚನ್ನರಾಯಪಟ್ಟಣ ಹಾಗೂ ಹೂವಿನಹಡಗಲಿಯ ಸಕ್ಕರೆ ಕಾರ್ಖಾನೆಗಳಿಗೆ ತಲಾ 30 ಕೋಟಿ ರೂ. ಮತ್ತು ಬಾಗಲಕೋಟೆಯ ಕಾರ್ಖಾನೆಗೆ 25 ಕೋಟಿ ರೂ. ಸಾಲ ನೀಡಿರುವುದು ಕಾನೂನುಬಾಹಿರ ಎಂದು ದೂರಿದರು.

    ಆಡಳಿತ ಮಂಡಳಿಯಲ್ಲಿರುವ ಒಬ್ಬರೇ ನಿರ್ದೇಶಕರಿಗೆ ಸಂಬಂಧಿಸಿದ 3 ಸೊಸೈಟಿಗಳಿಗೆ ಸುಮಾರು 60 ಕೋಟಿ ರೂ. ಸಾಲ ನೀಡಲಾಗಿದೆ. ಕಂಪ್ಯೂಟರ್ ಮತ್ತು ಸರ್ವರ್ ಖರೀದಿಯಲ್ಲಿ 8 ಕೋಟಿ ರೂ. ಹಗರಣ ನಡೆದಿದೆ. ಈ ಹಿಂದೆ ಸ್ತ್ರೀ ಶಕ್ತಿ ಗುಂಪುಗಳಿಂದ ಶೇ.5 ಷೇರು ಹಣ ಪಡೆಯಲಾಗುತ್ತಿತ್ತು. ಈಗ ಅದನ್ನು ಶೇ.10ಕ್ಕೆ ಏರಿಸಲಾಗಿದೆ. ಸಿಬ್ಬಂದಿ ವರ್ಗಾವಣೆಯಲ್ಲೂ ಅವ್ಯವಹಾರ ನಡೆದಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.

    ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts