More

    ಡಾ.ರಾಜ್‌ಕುಮಾರ್ ಶಾಂತಾಗುಣ ನಮಗೆ ಆದರ್ಶ: ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ

    ಭದ್ರಾವತಿ: ಸ್ವಚ್ಛ ಕನ್ನಡ ಮಾತನಾಡಲು ಕಲಿಸಿದ ತೋಂಟದಾರ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಪ್ರಭಾವ ಹಾಗೂ ಹಾಸ್ಯ ದಿಗ್ಗಜ ಕೃಷ್ಣೇಗೌಡರ ಆಶೀರ್ವಾದದಿಂದ ಇಂದು ಇಡೀ ನಾಡು ಗುರುತಿಸುವಂತಹ ಕಲಾವಿದೆಯಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ದೂರದರ್ಶನದ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಹೇಳಿದರು.
    ನಗರದಲ್ಲಿ ಶನಿವಾರ ಭೂಮಿಕಾ ವೇದಿಕೆ ಆಯೋಜಿಸಿದ್ದ ನಗೆಹೊನಲು ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಾಧ್ಯಾಪಕಿಯಾಗಿ ಮುನ್ನಡೆಯುವ ಕನಸು ನನಸಾಗಲಿಲ್ಲ. ಅರೆಕಾಲಿಕ ಉಪನ್ಯಾಸಕಿಯಾಗಿ ಕಾಲೇಜಿಗಷ್ಟೆ ಸೀಮಿತವಾಗದೆ ಹಾಸ್ಯ ಕಲಾವಿದೆಯಾಗಿ ಮುಂದುವರಿಯುವ ಭಾಗ್ಯ ನನ್ನದಾಯಿತು. ಕೇವಲ ರಾಜ್ಯವಷ್ಟೇ ಅಲ್ಲ ಇಡೀ ದೇಶವೇ ನನ್ನನ್ನು ಗುರುತಿಸುತ್ತಿರುವುದು ನನಗೆ ಹೆಮ್ಮೆ ತಂದಿದೆ. ಶಿಕ್ಷಣ ಕ್ಷೇತ್ರ ಕೈಬಿಟ್ಟರೂ ಕಲಾಕ್ಷೇತ್ರ ನನ್ನ ಕೈಬಿಡಲಿಲ್ಲ ಎಂದು ಮನದಾಳದ ಮಾತು ಹಂಚಿಕೊಂಡರು.
    ವರನಟ ಡಾ.ರಾಜ್‌ಕುಮಾರ್ ಅನ್ಯ ಭಾಷೆಗಳಲ್ಲಿ ಅಭಿನಯಿಸುವ ಅವಕಾಶವಿದ್ದರೂ ನಟಿಸಲಿಲ್ಲ. ರಾಜಕೀಯ ಕ್ಷೇತ್ರಕ್ಕೂ ಕಾಲಿಡಲಿಲ್ಲ. ಕನ್ನಡದ ಮಹತ್ವವನ್ನು ಎತ್ತಿಹಿಡಿದ ಅವರ ಶಾಂತ ಸ್ವಭಾವದ ಗುಣ ನಮಗೆ ಆದರ್ಶವಾಗಿದೆ. ಅಂದು ತೆರೆಕಾಣುತ್ತಿದ್ದ ಚಿತ್ರಗಳಿಗೂ ಇಂದು ನೋಡುತ್ತಿರುವ ಚಿತ್ರಗಳಿಗೂ ಭಾರಿ ಅಂತರವಿದ್ದು ಯುವ ಪೀಳಿಗೆಯ ಹುಚ್ಚುತನಗಳು ಹೆಚ್ಚಾಗಿವೆ. ಅನುಕರಣೆ ಬಿಟ್ಟು ಕನ್ನಡ ನಾಡಿನ ಸಂಸ್ಕೃತಿಯನ್ನು ಬೆಳೆಸುವತ್ತ ಗಮನಹರಿಸಬೇಕಾಗಿದೆ ಎಂದರು.
    ಜೀವನದಲ್ಲಿ ನಗು ಬಹಳ ಮುಖ್ಯ, ಪ್ರತಿ ಯುವಕ ಯುವತಿ, ಗಂಡ ಹೆಂಡತಿ, ಯೌವನ, ಮುಪ್ಪು, ನಡುವಣ ಸಾಕಷ್ಟು ಹಾಸ್ಯದ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಅವುಗಳನ್ನು ಗ್ರಹಿಸಿ ನಾವು ನಗುವ ಮೂಲಕ ಇನ್ನೊಬ್ಬರನ್ನು ನಗಿಸುವ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರ ಮುಖದ ನಗು ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗಲಿದೆ ಎಂದರು.
    ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ತಮ್ಮ ಮಾತಿನ ಮೂಲಕ ಹಾಸ್ಯದ ಹೊನಲು ಹರಿಸಿದರು. ಭೂಮಿಕಾ ವೇದಿಕೆ ಅಧ್ಯಕ್ಷ ಡಾ.ಕೃಷ್ಣ ಎಸ್ ಭಟ್, ಅಪರಂಜಿ ಶಿವರಾಜ್, ರಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts