More

    ಡಯಾಲಿಸಿಸ್ ಯಂತ್ರ ಸ್ಥಗಿತ


    ಚಿಕ್ಕನಾಯಕನಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳು ಕೆಟ್ಟಿದ್ದು, ರೋಗಿಗಳು ಮಂಗಳವಾರ ಪರದಾಡಿದರು. ಯಂತ್ರಗಳ ನಿರ್ವಹಣೆ ಹೊತ್ತ ಖಾಸಗಿ ಕಂಪನಿ ನಿರ್ಲಕ್ಷ್ಯ ವಹಿಸಿದ ಕಾರಣ ನಾಲ್ಕೈದು ತಿಂಗಳಿಂದ ರೋಗಿಗಳ ಸಮಸ್ಯೆ ಕೇಳುವವರು ಇಲ್ಲದಂತಾಗಿದೆ. ಆಸ್ಪತ್ರೆ ಆಡಳಿತಾಧಿಕಾರಿ ಅಸಹಾಯಕತೆ ಒಂದು ಕಡೆಯಾದರೆ, ಜಿಲ್ಲಾ ಅಧಿಕಾರಿಗಳಿಗೆ ಈ ಬಗ್ಗೆ ವರದಿ ಮಾಡಿದರೂ ಪ್ರಯೋಜನವಾಗಿಲ್ಲದಿರುವುದು ರೋಗಿಗಳ ಪರದಾಟ ಹೆಚ್ಚಿಸಿದೆ. ಆಸ್ಪತ್ರೆಯಲ್ಲಿ ನಾಲ್ಕೈದು ವರ್ಷಗಳಿಂದ ಒಟ್ಟು 3 ಡಯಾಲಿಸಿಸ್ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದವು.

    ಐದು ತಿಂಗಳ ಹಿಂದೆ ಒಂದು ಯಂತ್ರ ಕೆಟ್ಟಿದ್ದು, ಇನ್ನೊಂದು ಯಂತ್ರದಲ್ಲಿ ಒಂದು ಬಿಡಿಭಾಗ ಹಾಳಾಗಿದ್ದರೆ ಇನ್ನೊಂದು ಯಂತ್ರವೂ ಕೆಟ್ಟಿದೆ. ಇಷ್ಟಾದರೂ ಜವಾಬ್ದಾರಿ ಹೊತ್ತಿರುವಂತಹ ಸಂಜೀವಿನಿ ಎಸ್ಕಾಗ್ ಕಂಪನಿಯು ತಿರುಗಿ ನೋಡಿಲ್ಲ. ಹೀಗಾಗಿ ಡಯಾಲಿಸಿಸ್‌ಗೆ ಒಳಪಟ್ಟಿರುವ 11 ರೋಗಿಗಳ ಗೋಳು ಕೇಳುವವರಿಲ್ಲದಂತಾಗಿದೆ. ಆಸ್ಪತ್ರೆಯಲ್ಲಿ ದೊಡ್ಡ ದೊಡ್ಡ ಕೊಠಡಿಗಳಿದ್ದರೂ ಚಿಕ್ಕ ಕೊಠಡಿಯಲ್ಲಿ ಮೂರು ಯಂತ್ರಗಳನ್ನು ಅಳವಡಿಸಿದ್ದು, ಮೂರು ಜನ ಮಲಗುವ ವ್ಯವಸ್ಥೆ ಮಾಡಲಾಗಿದೆ. ದೊಡ್ಡ ಕೊಠಡಿಯಲ್ಲಿ ಅಳವಡಿಸಿದರೆ ಸ್ವಲ್ಪ ದೂರದೂರದಲ್ಲಿ ರೋಗಿಗಳು ಮಲಗುವ ವ್ಯವಸ್ಥೆ ಆಗಲಿದೆ. ಆಸ್ಪತ್ರೆಯಲ್ಲಿ ನೀರು, ವಿದ್ಯುತ್ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ, ಅಲ್ಲದೆ ಬೆಡ್‌ಗಳು ಕೊಳೆತು ನಾರುತ್ತಿದ್ದರೂ ಸ್ವಚ್ಛತೆ ಬಗ್ಗೆ ಯಾರೂ ಗಮನಹರಿಸಿಲ್ಲ.

    ಮೂರ್ನಾಲ್ಕು ದಿನಗಳಲ್ಲಿ ಸಮಸ್ಯೆಗೆ ಪರಿಹಾರ: ಡಯಾಲಿಸಿಸ್ ಯಂತ್ರಗಳು ಕೆಟ್ಟಿದ್ದು ಒಂದು ಯಂತ್ರದ ಬಿಡಿಭಾಗಕ್ಕೆ ಲಕ್ಷಾಂತರ ರೂಪಾಯಿಯನ್ನು ನಮ್ಮ ಕಂಪನಿ ಸಂದಾಯ ಮಾಡಿದೆ. ಆದರೂ ಅದರ ಬಿಡಿಭಾಗ ಸರಬರಾಜು ಆಗಿಲ್ಲ. ಕಂಪನಿಯ ಟೆಂಡರ್ ಮುಗಿದಿದ್ದು ಅದರ ನವೀಕರಣವಾಗಬೇಕಿದೆ. ನಮ್ಮ ಸಿಬ್ಬಂದಿಗೆ ಸರಿಯಾಗಿ ವೇತನವೂ ಆಗಿಲ್ಲ. ಇಂಜಿನಿಯರ್‌ಗಳು ಯಂತ್ರಗಳನ್ನು ಪರಿಶೀಲನೆ ಮಾಡಬೇಕಾಗಿದ್ದು, ಅವರೂ ಸಂಬಳವಾಗಿಲ್ಲ ಎಂದು ಬರುತ್ತಿಲ್ಲ. ಮೂರ್ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಂಜೀವಿನಿ ಕಂಪನಿ ಜಿಲ್ಲಾ ಕೋ-ಆರ್ಡಿನೇಟರ್ ಯೋಗಾನಂದ್ ತಿಳಿಸಿದ್ದಾರೆ.

    ಶಾಸಕರ ಭರವಸೆಯೂ ಈಡೇರಿಲ್ಲ: ಜಿಲ್ಲೆಯ ಹತ್ತೂ ತಾಲೂಕುಗಳಲ್ಲಿನ ಡಯಾಲಿಸಿಸ್ ಯಂತ್ರಗಳ ನಿರ್ವಹಣೆ ನೋಡುತ್ತಿರುವ ಸಂಜೀವಿನಿ ಎಸ್ಕಾಗ್ ಕಂಪನಿಯವರು ಇದುವರೆಗೆ ಈ ಕಡೆ ತಿರುಗಿ ನೋಡದಿರುವುದು ಒಂದೆಡೆಯಾದರೆ, ಆಸ್ಪತ್ರೆ ಆಡಳಿತಾಧಿಕಾರಿ ಕೇವಲ ಸಮಸ್ಯೆ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿದ್ದು ಬಿಟ್ಟರೆ ಸಮಸ್ಯೆ ಬಗೆಹರಿದಿಲ್ಲ. ಅಲ್ಲದೆ ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್‌ಬಾಬು ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸಮಸ್ಯೆ ಬಗೆಹರಿಸುವುದಾಗಿ ನೀಡಿದ್ದ ಭರವಸೆ ಈಡೇರಿಲ್ಲ.

    ನಾಲ್ಕು ವರ್ಷಗಳಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದು, ಮೂರ್ನಾಲ್ಕು ತಿಂಗಳಿಂದ ಚಿಕಿತ್ಸೆಗೆ ತೊಂದರೆಯಾಗುತ್ತಿದೆ. ಇಲ್ಲಿ ಚಿಕಿತ್ಸೆ ಇಲ್ಲವಾದರೆ ತಿಪಟೂರು, ತುಮಕೂರು ಆಸ್ಪತ್ರೆಗಳಿಗೆ ಇಲ್ಲವೆ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾಗುತ್ತದೆ, ನಾವು ಬಡವರು. ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಿಕೊಡಬೇಕು.| ಇಮ್ರಾನ್ ಪಾಷ, ಡಯಾಲಿಸಿಸ್ ರೋಗಿ

    ಡಯಾಲಿಸಿಸ್ ಯಂತ್ರಗಳ ಸಂಪೂರ್ಣ ಜವಾಬ್ದಾರಿ ಖಾಸಗಿ ಕಂಪನಿಗೆ ಸೇರಿದ್ದು, ಈ ಬಗ್ಗೆ ಅನೇಕ ಬಾರಿ ಮೇಲಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಿದ್ದು, ಈ ಸಮಸ್ಯೆಯೂ ರಾಜ್ಯಮಟ್ಟದಲ್ಲಿದೆ. ಈ ಬಗ್ಗೆ ಮೇಲಧಿಕಾರಿಗಳು ಗಮನಹರಿಸಬೇಕು.| ಡಾ.ನಟರಾಜ್, ಆಸ್ಪತ್ರೆಆಡಳಿತಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts