More

    ಡಗ್ಸ್ ಹೆಸರಲ್ಲಿ ಅಡಕೆ ಬೆಳೆಗಾರರಿಗೆ ಬರೆ ಹಾಕಬೇಡಿ

    ಸಾಗರ: ಪಾನ್ ಮಸಾಲಾ ಪ್ಯಾಕೇಟ್​ನಲ್ಲಿ ಡ್ರಗ್ಸ್ ಸರಬರಾಜು ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಪಾನ್ ಮಸಾಲಾ ನಿಷೇಧ ಮಾಡಲು ಮುಂದಾಗಿರುವ ಕ್ರಮವನ್ನು ಅಡಕೆ ವರ್ತಕರ ಸಂಘ ತೀವ್ರವಾಗಿ ಖಂಡಿಸಿದೆ.

    ರಾಜ್ಯದಲ್ಲಿ ಪ್ರಸಕ್ತ ಡ್ರಗ್ಸ್ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಡ್ರಗ್ಸ್ ಮಾರಾಟ ಮತ್ತು ಬಳಕೆಯನ್ನು ಅಡಕೆ ವರ್ತಕರ ಸಂಘ ವಿರೋಧಿಸುತ್ತದೆ. ಆದರೆ ರಾಜ್ಯ ಸರ್ಕಾರ ಡ್ರಗ್ಸ್ ಮಾರಾಟ ಜಾಲವನ್ನು ಭೇದಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಬದಲು ಪಾನ್ ಮಸಾಲಾ ಪ್ಯಾಕೇಟ್​ನಲ್ಲಿ ಡ್ರಗ್ಸ್ ಸರಬರಾಜು ಮಾಡಲಾಗುತ್ತಿದೆ ಎಂದು ಅದನ್ನೇ ಬ್ಯಾನ್ ಮಾಡಲು ಹೊರಟಿರುವುದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎನ್ನುವಂತಾಗಿದೆ ಎಂದು ರಾಜ್ಯ ಅಡಕೆ ಛೇಂಬರ್ಸ್ ಉಪಾಧ್ಯಕ್ಷ ಅಶ್ವಿನಿಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

    ಕಳೆದ ಕೆಲವು ವರ್ಷಗಳಿಂದ ಅಡಕೆ ಬೆಳೆ ಒಂದಿಲ್ಲೊಂದು ಸಂಕಷ್ಟ ಎದುರಿಸುತ್ತಿದೆ. ಕೆಲವು ವರ್ಷಗಳ ಹಿಂದೆ ಅಡಕೆ ಜಗಿಯುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ ಎನ್ನುವ ಊಹಾಪೋಹ ಹಬ್ಬಿಸಲಾಗಿತ್ತು. ನಂತರ ಇನ್ನೊಂದು ಊಹಾಪೋಹ ಹಬ್ಬಿಸಲಾಯಿತು. ಬೆಳೆಗಾರರು ಬೆಳೆದ ಅಡಕೆ ಕೈಗೆ ಹತ್ತುತ್ತಿದೆ ಎನ್ನುವ ಹೊತ್ತಿಗೆ ಇಂತಹ ಸುಳ್ಳುಸುದ್ದಿಗಳನ್ನು ಹಬ್ಬಿಸಿ ಅಡಕೆ ಧಾರಣೆಯನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಅಡಕೆ ಟಾಸ್ಕ್​ಫೋರ್ಸ್ ರಚಿಸಿದೆ. ಟಾಸ್ಕ್​ಫೋರ್ಸ್ ಅಡಕೆ ಇತರೆ ಉಪಯೋಗ, ಔಷಧೀಯ ಗುಣ ಹಾಗೂ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎನ್ನುವ ಕುರಿತು ಸಂಶೋಧನೆ ನಡೆಸುತ್ತಿದೆ. ಇಂತಹ ಹೊತ್ತಿನಲ್ಲಿ ಪಾನ್ ಮಸಾಲಾವನ್ನು ಬ್ಯಾನ್ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಅತ್ಯಂತ ದುರದೃಷ್ಟಕರ ಎಂದು ಹೇಳಿದರು.

    ಈಚೆಗೆ ಮುಖ್ಯಮಂತ್ರಿಗಳು ರಾಜ್ಯಪಾಲರ ಜತೆ ಚರ್ಚೆ ನಡೆಸುವಾಗ ಪಾನ್ ಮಸಾಲಾ ಪ್ಯಾಕೇಟ್​ನಲ್ಲಿ ಡ್ರಗ್ಸ್ ಸರಬರಾಜು ಮಾಡಲಾಗುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಮುಖ್ಯಮಂತ್ರಿಗಳು ಸುಗ್ರಿವಾಜ್ಞೆ ಮೂಲಕ ಪಾನ್ ಮಸಾಲಾ ಬ್ಯಾನ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಡಕೆ ನಂಬಿಕೊಂಡು ದೇಶದಲ್ಲಿ ಸುಮಾರು 5 ಕೋಟಿಗೂ ಹೆಚ್ಚು ಜನರು ಜೀವನ ನಡೆಸುತ್ತಿದ್ದಾರೆ. ಸಹಕಾರಿ ಸಂಸ್ಥೆಗಳು, ಕೃಷಿ ಕೂಲಿ ಕಾರ್ವಿುಕರು, ವರ್ತಕರು, ದಲ್ಲಾಲರು, ಕೈಗಾರಿಕೋದ್ಯಮಿಗಳು, ಬೀಡಾ ಅಂಗಡಿಯವರು, ಪಾನ್​ವಾಲಾಗಳು ಅಡಕೆ ವಹಿವಾಟು ನಂಬಿಕೊಂಡಿದ್ದಾರೆ ಎಂದು ಹೇಳಿದರು.

    ಸಿಎಂ ತಕ್ಷಣ ಪಾನ್ ಮಸಾಲಾ ಬ್ಯಾನ್ ಮಾಡುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಮುಖ್ಯಮಂತ್ರಿಗಳು ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಮುಖ್ಯಮಂತ್ರಿಗಳು ಅಡಕೆ ಬೆಳೆಗಾರರ ಪರವಾಗಿ ನಿಲ್ಲಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ ಅವರು ಅಡಕೆ ಪಾನ್ ಮಸಾಲಾ ಬ್ಯಾನ್ ಮಾಡಬಾರದು ಎಂದು ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

    ವರ್ತಕರ ಸಂಘದ ಬಿ.ಎಚ್.ಲಿಂಗರಾಜ್, ಕೆ.ಎಸ್.ವೆಂಕಟೇಶ್, ಶಂಕರ್ ಅಳ್ವೆಕೋಡು, ಆರೀಫ್ ಆಲಿಖಾನ್, ಸುರೇಶ್, ಅಬ್ದುಲ್ ಜಬ್ಬಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts