More

    ಠೇವಣಿ, ಬಾಡಿಗೆ ವಿವಾದ ಸುಖಾಂತ್ಯ, ಕೊನೆಗೂ ಚಿಕ್ಕಬಳ್ಳಾಪುರ ನಗರಸಭೆ ಮಳಿಗೆಗಳ ಹರಾಜು

    ಚಿಕ್ಕಬಳ್ಳಾಪುರ: ನಗರದ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿರುವ ಹೊಸ ಕಟ್ಟಡದ ಮಳಿಗೆಗಳಿಗೆ ಹೆಚ್ಚಿನ ಠೇವಣಿ ಹಾಗೂ ಬಾಡಿಗೆ ಅಪಸ್ಪರದಿಂದ ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. 4 ವರ್ಷಗಳಿಂದಲೂ ಅನೈತಿಕ ಚಟುವಟಿಕೆ ಮತ್ತು ಅನೈರ್ಮಲ್ಯ ತಾಣವಾಗಿದ್ದ ಮಳಿಗೆಗಳನ್ನು ಕೊನೆಗೂ ಹರಾಜು ಮೂಲಕ ಹಂಚಿಕೆ ಮಾಡಲಾಗಿದೆ.

    ನಗರದ ಚನ್ನಯ್ಯ ಪಾರ್ಕಿಗೆ ಹೊಂದಿಕೊಂಡಿರುವ ನಿಲ್ದಾಣದ 47 ಮಳಿಗೆಗಳ ಪೈಕಿ 39 ಅಂಗಡಿಗಳನ್ನು ಈ ಹಿಂದೆ ಹಳೇ ಕಟ್ಟಡದಲ್ಲಿದ್ದ ವರ್ತಕರಿಗೆ ಮತ್ತು ಉಳಿದ 8 ಮಳಿಗೆಗಳನ್ನು ಇತರ ವರ್ತಕರಿಗೆ ಹಂಚಲಾಗಿದ್ದು ಸಂಗ್ರಹವಾದ ಠೇವಣಿ ಮತ್ತು ಪ್ರತಿ ತಿಂಗಳು ಬರುವ ಬಾಡಿಗೆ ಹಣದಿಂದ ನಗರಸಭೆಗೆ ಲಕ್ಷಗಟ್ಟಲೆ ಆದಾಯ ಬರುವಂತಾಗಿದೆ.

    ಇಲ್ಲಿನ ಹಳೇ ಕಟ್ಟಡ ತೆರವುಗೊಳಿಸಿ, 2016ರಲ್ಲಿ ಮುಖ್ಯಮಂತ್ರಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನಾ ನಿಧಿಯ 8.33 ಕೋಟಿ ರೂ.ವೆಚ್ಚದಲ್ಲಿ ನೂತನ ಖಾಸಗಿ ನಿಲ್ದಾಣ ಮಳಿಗೆ ನಿರ್ಮಿಸಲಾಯಿತು. ಇದರ ನಡುವೆ ಈ ಹಿಂದೆ ಅಂಗಡಿಗಳನ್ನು ಬಾಡಿಗೆ ಪಡೆದಿದ್ದ ವ್ಯಾಪಾರಿಗಳು ಬೀದಿ ಪಾಲಾಗುವ ಆತಂಕ ವ್ಯಕ್ತಪಡಿಸಿದ್ದರಿಂದ ಹೊಸ ಕಟ್ಟಡದಲ್ಲಿ ಹಳೇ ವರ್ತಕರಿಗೆ ಅಂಗಡಿಗಳನ್ನು ಬಾಡಿಗೆ ನೀಡಲು ತೀರ್ಮಾನ ಕೈಗೊಳ್ಳಲಾಗಿತ್ತು.

    ಆದರೆ ಉದ್ಘಾಟನೆ ಬಳಿಕ ಹೆಚ್ಚಿನ ಠೇವಣಿ ಮತ್ತು ಬಾಡಿಗೆ ನಿಗದಿಪಡಿಸಿದ್ದರಿಂದ ಅಪಸ್ವರ ಎದ್ದಿತ್ತು. ನಿಯಮಾನುಸಾರ ಹೊಸದಾಗಿ ಹರಾಜು ಪ್ರಕ್ರಿಯೆ ಕೈಗೊಂಡಾಗ ಹಳೇ ವರ್ತಕರು ನ್ಯಾಯಾಲಯದ ಮೆಟ್ಟಿಲೇರಿದ್ದು ಇದೀಗ ಎಲ್ಲವೂ ಸುಖಾಂತ್ಯ ಕಂಡಿದೆ. ಬಹುತೇಕ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ.

    ವಿವಾದದಿಂದ ಆದಾಯಕ್ಕೆ ಕತ್ತರಿ : ತಿಂಗಳಿಗೆ ಒಂದು ಅಂಗಡಿಗೆ ಕನಿಷ್ಠ 5 ರಿಂದ 9 ಸಾವಿರ ಬಾಡಿಗೆ ಇದ್ದು 47 ಅಂಗಡಿಗಳಿಂದ ಕನಿಷ್ಠ 2.35 ಲಕ್ಷ ರೂ.ಸಂಗ್ರಹವಾಗುತ್ತದೆ. ಉದ್ಘಾಟನೆಯಾದ 2016ರಲ್ಲಿಯೇ ಅಂಗಡಿಗಳನ್ನು ಬಾಡಿಗೆಗೆ ನೀಡಿದ್ದರೆ ನಗರಸಭೆಗೆ ಒಳ್ಳೆಯ ಆದಾಯ ಸಿಗುತ್ತಿತ್ತು. ಆದರೆ ವಿವಾದದಿಂದಾಗಿ 4 ವರ್ಷದಿಂದ ಆದಾಯ ಖೋತಾ ಆಗಿದೆ. ಇದೀಗ ಹರಾಜು ಪ್ರಕ್ರಿಯೆ ಮುಗಿಯುತ್ತಿದ್ದಂತೆ ಅಂಗಡಿಗಳು ಒಂದೊಂದಾಗಿ ಕಾರ್ಯಾರಂಭಿಸಲು ಸಿದ್ಧವಾಗಿವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

    ಸಕಾಲಕ್ಕೆ ಸದ್ಬಳಕೆ ಅಗತ್ಯ: ಮಳಿಗೆಗಳನ್ನು ಸಕಾಲಕ್ಕೆ ಬಾಡಿಗೆಗೆ ನೀಡಿ, ಆದಾಯ ಗಳಿಸುವಲ್ಲಿ ನಗರಸಭೆ ಆರಂಭದಿಂದಲೂ ನಿರ್ಲಕ್ಷ್ಯ ತೋರುತ್ತಿದೆ. ಹಳೇ ಬಸ್ ನಿಲ್ದಾಣದ 47 ಅಂಗಡಿಗಳನ್ನು ಬಾಡಿಗೆಗೆ ನೀಡಲು 4 ವರ್ಷ ತೆಗೆದುಕೊಂಡಿದ್ದರೆ, ನಗರದ ಸಂತೆ ಮೈದಾನದಲ್ಲಿ 2009-10ನೇ ಸಾಲಿನ ಎಸ್‌ಎಫ್‌ಸಿ ಅನುದಾನದಲ್ಲಿ ನಿರ್ಮಿಸಿರುವ ಕಟ್ಟಡದ 125 ಅಂಗಡಿಗಳ ಪೈಕಿ 56 ಅಂಗಡಿಗಳನ್ನು ಮಾತ್ರ ಬಾಡಿಗೆಗೆ ನೀಡಲಾಗಿದೆ. ನಗರಸಭೆ ಕಚೇರಿ ಮುಂಭಾಗದ ಭುವನೇಶ್ವರಿ ವೃತ್ತದಲ್ಲಿರುವ ಮಿನಿ ತರಕಾರಿ ಮಾರುಕಟ್ಟೆಯ 21 ಮಳಿಗೆಗಳನ್ನು ಹರಾಜು ಹಾಕಬೇಕಾಗಿದೆ. ಹೀಗೆ ನಗರಸಭೆ ಕಟ್ಟಡಗಳು ಬಾಡಿಗೆ ವಂಚಿತವಾಗುತ್ತಿದ್ದರೆ, ಮತ್ತೊಂದೆಡೆ ಕಟ್ಟಡ ಅನೈತಿಕ ಚಟುವಟಿಕೆ ಮತ್ತು ಅನೈರ್ಮಲ್ಯದ ತಾಣವಾಗುತ್ತಿದ್ದು ಅನುದಾನ ವ್ಯರ್ಥವಾಗುತ್ತಿದೆ.

    ಚಿಕ್ಕಬಳ್ಳಾಪುರ ನಗರದ ಹಳೇ ಬಸ್ ನಿಲ್ದಾಣದಲ್ಲಿ ಮಳಿಗೆಗಳನ್ನು ಬಾಡಿಗೆ ನೀಡಲಾಗಿದೆ. ಬಾಕಿ ಉಳಿದಿರುವ ಕಡೆ ಹರಾಜು ಮೂಲಕ ನೀಡಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ನಗರಸಭೆಗೆ ಆದಾಯ ಬರುತ್ತದೆ.
    ಲೋಹಿತ್ ಧನಂಜಯ್, ಪೌರಾಯುಕ್ತ, ಚಿಕ್ಕಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts