More

    ಠಾಣೆಗಳಲ್ಲಿ ಸ್ನೇಹಪರ ವಾತಾವರಣ ಸೃಷ್ಟಿಸಿ: ಕುಂದುಕೊರತೆ ಪರಿಶೀಲನಾ ಸಭೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಸಲಹೆ

    ತುಮಕೂರು : ಪೊಲೀಸ್ ಠಾಣೆಗಳಿಗೇ ಕಾಲಿಡಲು ಮಹಿಳೆಯರು ಹೆದರುತ್ತಿರುವ ಪರಿಸ್ಥಿತಿ ಇನ್ನೂ ನಮ್ಮಲ್ಲಿದೆ. ಈ ಭಯ ಹೋಗಲಾಡಿಸುವ ಸ್ನೇಹಪರ ವಾತಾವರಣವನ್ನು ಠಾಣೆಗಳಲ್ಲಿ ಸೃಷ್ಟಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್.ಕುಂದರ್ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮಹಿಳಾ ಕಾರ್ಯಕ್ರಮಗಳು ಹಾಗೂ ಕುಂದು ಕೊರತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾ-ಕಾಲೇಜುಗಳ ಸುತ್ತಮುತ್ತಲಿನ ಅಂಗಡಿಗಳಲ್ಲಿ ಮಾದಕ ದ್ರವ್ಯಗಳು ದೊರೆಯುತ್ತಿರುವುದರಿಂದ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಪೊಲೀಸ್ ಇಲಾಖೆ ಈ ಬಗ್ಗೆ ಹೆಚ್ಚು ನಿಗಾವಹಿಸಿ ಗಸ್ತು ಪೊಲೀಸರನ್ನು ನಿಯೋಜಿಸಿ, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

    ಆಂತರಿಕ ದೂರು ಸಮಿತಿಗೆ ಸೂಚನೆ: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ತಡೆಗೆ ಜಿಲ್ಲಾಮಟ್ಟದ ಆಂತರಿಕ ದೂರು ಸಮಿತಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹತ್ತಕ್ಕಿಂತ ಹೆಚ್ಚಿನ ಮಹಿಳೆಯರು ದುಡಿಯುವ ಸ್ಥಳಗಳಲ್ಲಿ ಕಡ್ಡಾಯವಾಗಿ ಆಂತರಿಕ ದೂರು ಸಮಿತಿ ಸ್ಥಾಪಿಸಿ, ದೌರ್ಜನ್ಯ ತಡೆ ಕುರಿತು ಅರಿವು ಮೂಡಿಸಬೇಕು. ಸಮಿತಿ ಕಾರ್ಯವೈಖರಿ ಹಾಗೂ ಜವಾಬ್ದಾರಿಗಳ ಬಗ್ಗೆ ಸದಸ್ಯರಿಗೆ ಅರಿವು ಮೂಡಿಸಲು ಡಿಸಿಗೆ ನಿರ್ದೇಶನ ನೀಡಿದರು.

    ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ಆಂತರಿಕ ದೂರು ಸಮಿತಿ ಸದಸ್ಯೆಯರಿಗೆ ಹೆಚ್ಚಿನ ಅರಿವು ಮೂಡಿಸಲಾಗುವುದು. ಈಗಾಗಲೇ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳು ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಶೌಚಗೃಹಗಳ ಸುಸ್ಥಿರ ಬಳಕೆಗೆ ಹಲವಾರು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಅಂಗನವಾಡಿ ಹಾಗೂ ಶಾಲೆಗಳಲ್ಲಿ ಸುಸಜ್ಜಿತ ಶೌಚಗೃಹಗಳ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಮಾಹಿತಿ ನೀಡಿದರು.

    ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಯಾವುದೇ ಆರೋಗ್ಯ ರಕ್ಷಣಾ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಹಾಗೂ ಮಕ್ಕಳು ಶೌಚಗೃಹಗಳ ಬಳಕೆ ಮಾಡದೆ ಬಯಲು ಬಹಿರ್ದೆಸೆಯನ್ನೇ ಅವಲಂಬಿಸಿರುವುದು ದೌರ್ಜನ್ಯ ಪ್ರಕರಣ ಹೆಚ್ಚು ವರದಿಯಾಗಲು ಕಾರಣವಾಗುತ್ತಿವೆ. ಹೀಗಾಗಿ ಶೌಚಗೃಹಗಳನ್ನು ಬಳಸುವಂತೆ ಗ್ರಾಪಂಗಳು ಸೇರಿ ಸ್ಥಳೀಯ ಸಂಸ್ಥೆಗಳು ಅರಿವು ಮೂಡಿಸಬೇಕು ಎಂದು ಶ್ಯಾಮಲಾ ಸಲಹೆ ನೀಡಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್, ಡಿಡಿಪಿಐ ಸಿ.ನಂಜಯ್ಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾಂತ್ವನ ಕೇಂದ್ರಗಳ ನಿರ್ವಹಣಾಕಾರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts