More

    ಫುಟ್​ಪಾತ್​ನಲ್ಲಿ ಜೋಡಿ ಕಸದ ತೊಟ್ಟಿ

    ಸಂತೋಷ ವೈದ್ಯ ಹುಬ್ಬಳ್ಳಿ

    ಮನೆ ಮನೆಯಿಂದ ಕಸ ಸಂಗ್ರಹಿಸಲು ಆಟೋ ಟಿಪ್ಪರ್ ವ್ಯವಸ್ಥೆ ಮಾಡಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಇದೀಗ ಫುಟ್​ಪಾತ್ ಮೇಲೆ ಕಸದ ತೊಟ್ಟಿ ಅಳವಡಿಸುವ ನೂತನ ಉಪಕ್ರಮ ಕೈಗೊಂಡಿದೆ. ನಗರದ ಗೋಕುಲ ರಸ್ತೆ ಹಾಗೂ ವಿದ್ಯಾನಗರ ಶಿರೂರ ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಗಳ ಫುಟ್​ಪಾತ್ ಮೇಲೆ ಈಗಾಗಲೇ ಅಳವಡಿಸಿರುವ ಅವಳಿ ಕಸದ ತೊಟ್ಟಿಗಳನ್ನು ಕಾಣಬಹುದು.

    ಇವು ರಸ್ತೆಯ ಫುಟ್​ಪಾತ್ ಮೇಲೆ ಸಂಚರಿಸುವ ಪಾದಚಾರಿಗಳಿಗಾಗಿಯೇ ಅಳವಡಿಸಿರುವ ಡಸ್ಟ್ ಬಿನ್​ಗಳು. ಗುಟ್ಖಾ, ಇನ್ನಿತರ ತಂಬಾಕು ಉತ್ಪನ್ನಗಳನ್ನು ಸೇವಿಸುವವರು ಅದರ ಪ್ಯಾಕೇಟ್​ಗಳನ್ನು ರಸ್ತೆಯಲ್ಲಿ ಎಸೆಯುವುದು ಸಾಮಾನ್ಯ. ಬಿಸ್ಕಿಟ್, ಚಿಪ್ಸ್, ಕುರಕುರೆ ಪ್ಯಾಕೇಟ್, ತಂಪು ಪಾನೀಯ ಟೆಟ್ರಾ ಪ್ಯಾಕ್, ಪ್ಲಾಸ್ಟಿಕ್ ಬಾಟಲಿಗಳನ್ನು ಪಾದಚಾರಿಗಳು ಎಲ್ಲಿ ಬೇಕೆಂದರಲ್ಲಿ ಎಸೆಯುತ್ತಾರೆ. ಇದರಿಂದ ನಗರದ ನೈರ್ಮಲ್ಯ ಹದಗೆಡುತ್ತದೆ. ಇದನ್ನು ತಪ್ಪಿಸಲು ಪಾದಚಾರಿಗಳು ಸಂಚರಿಸುವ ಫುಟ್​ಪಾತ್ ಮೇಲೆ ಕಸದ ತೊಟ್ಟಿಗಳನ್ನು ಅಳವಡಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಒಣ ಮತ್ತು ಹಸಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ನೀಲಿ-ಹಸಿರು ಬಣ್ಣದ ಜೋಡಿ ಕಸದ ತೊಟ್ಟಿಗಳನ್ನು ಕಬ್ಬಿಣದ ಸ್ಟ್ಯಾಂಡ್​ಗಳ ಜತೆ ಫುಟ್​ಪಾತ್ ಮೇಲೆ ಸ್ಥಾಪಿಸಲಾಗಿದೆ. ಕಸ ವಿಲೇವಾರಿಗೆ ಅನುಕೂಲವಾಗುವಂತೆ ಈ ತೊಟ್ಟಿಗಳನ್ನು ನೆಲಮಟ್ಟಕ್ಕೆ ಬಗ್ಗಿಸಬಹುದು. ಇದರಿಂದ ಇಲ್ಲಿ ಸಂಗ್ರಹವಾಗುವ ಕಸವನ್ನು ಕಾಂಪ್ಯಾಕ್ಟರ್ ವಾಹನಕ್ಕೆ ನೇರವಾಗಿ ತುಂಬಿಕೊಂಡು ಬೇರೆಡೆ ಸಾಗಿಸುವುದು ಸರಳವಾಗಲಿದೆ.

    ತಲಾ 11 ಸಾವಿರ ರೂ. ವೆಚ್ಚ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಈ ವಿಧದ ಒಟ್ಟು 409 ಜೋಡಿ ಡಸ್ಟ್ ಬಿನ್​ಗಳನ್ನು ಅಳವಡಿಸಲಾಗುತ್ತಿದೆ. ಗುಜರಾತ್​ನ ಘನಶ್ಯಾಮ ಇಂಜಿನಿಯರಿಂಗ್ ವರ್ಕ್ಸ್​ನವರು ಟೆಂಡರ್ ಪಡೆದಿದ್ದಾರೆ. ಪ್ರತಿ ಜೋಡಿ ಡಸ್ಟ್ ಬಿನ್ ವೆಚ್ಚ (ಕಬ್ಬಿಣದ ಸ್ಟ್ಯಾಂಡ್ ಹಾಗೂ ಅಳವಡಿಕೆ ಸೇರಿ) 11 ಸಾವಿರ ರೂಪಾಯಿ ಆಗಿದೆ. ಹು-ಧಾ ಮಹಾನಗರ ಪಾಲಿಕೆಯ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಇದಕ್ಕಾಗಿ ಒಟ್ಟು 45 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಇಲ್ಲಿಯವರೆಗೆ ವಿದ್ಯಾನಗರ ಕಾಡಸಿದ್ದೇಶ್ವರ ಕಾಲೇಜಿನ ಎದುರಿನಿಂದ ತೋಳನಕೆರೆವರೆಗೆ ಟೆಂಡರ್ ಶ್ಯೂರ್ ರಸ್ತೆ ಹಾಗೂ ಗೋಕುಲ ರಸ್ತೆ ಸೇರಿ ಸುಮಾರು 120 ಜೋಡಿ ಡಸ್ಟ್ ಬಿನ್​ಗಳನ್ನು ಅಳವಡಿಸಲಾಗಿದೆ. ಫುಟ್​ಪಾತ್ ಮೇಲೆ ಪ್ರತಿ 100 ಮೀಟರ್ ಅಂತರದಲ್ಲಿ ಒಂದು ಜೋಡಿ ಡಸ್ಟ್ ಬಿನ್ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿಯ ಕೊಪ್ಪಿಕರ ರಸ್ತೆ, ಸ್ಟೇಶನ್ ರಸ್ತೆ, ಜೆ.ಸಿ. ನಗರ, ಸಿಬಿಟಿಯಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಧಾರವಾಡದಲ್ಲಿ ಯಾವ ಬೀದಿಗಳಲ್ಲಿ ಅಳವಡಿಸಬೇಕೆಂಬುದನ್ನು ನಿರ್ಧರಿಸಬೇಕಾಗಿದೆ. ಸ್ವಚ್ಛ ಸರ್ವೆಕ್ಷಣೆಯಲ್ಲಿ ಘೊಷಿಸಲಾಗಿರುವ ವಾಣಿಜ್ಯ ಬೀದಿಗಳನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. 3-4 ವರ್ಷಗಳ ಹಿಂದೆ ಅವಳಿ ನಗರದಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ಜಾರಿಗೆ ತರುವ ವೇಳೆ ಇದು ‘ಕಸದ ತೊಟ್ಟಿ ಮುಕ್ತ ನಗರ’ ಎಂಬ ಪರಿಕಲ್ಪನೆ ಎಂದು ಹೇಳಲಾಗಿತ್ತು. ಆಗ ಮಾರುಕಟ್ಟೆ ಪ್ರದೇಶಗಳನ್ನು ಹೊರತುಪಡಿಸಿ ವಸತಿ ಹಾಗೂ ವಾಣಿಜ್ಯ ಪ್ರದೇಶಗಳಲ್ಲಿನ ಕಸದ ತೊಟ್ಟಿಯನ್ನು ಹಂತ ಹಂತವಾಗಿ ಮೂಲೆಗುಂಪು ಮಾಡಲಾಗಿತ್ತು. ಈಗ, ಅದೇ ಪಾಲಿಕೆ ಕಸದ ತೊಟ್ಟಿಗಳನ್ನು ಅಳವಡಿಸುತ್ತಿರುವುದು ವಿಪರ್ಯಾಸವಾಗಿದೆ.

    ಸದ್ಯ ಹುಬ್ಬಳ್ಳಿಯ ಗೋಕುಲ ರಸ್ತೆ ಹಾಗೂ ವಿದ್ಯಾನಗರ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಪಾದಚಾರಿಗಳಿಗಾಗಿ ಕಸದ ತೊಟ್ಟಿಗಳನ್ನು ಅಳವಡಿಸಲಾಗಿದೆ. ಧಾರವಾಡದಲ್ಲೂ ಅಳವಡಿಸಲಾಗುವುದು. ಕೆಲವೆಡೆ ರಸ್ತೆ ಕಾಮಗಾರಿಗಳು ಪೂರ್ಣಗೊಂಡ ಮೇಲೆ ಅಳವಡಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಈ ಉಪಕ್ರಮದಿಂದ ಕೇಂದ್ರ ಸರ್ಕಾರ ಪ್ರತಿ ವರ್ಷ ನಡೆಸುವ ಸ್ವಚ್ಛ ಸರ್ವೆಕ್ಷಣೆಯಲ್ಲಿ ಪಾಲಿಕೆಗೆ ಹೆಚ್ಚು ಅಂಕಗಳು ಬರಲಿವೆ.
    | ಸಂತೋಷ ಯರಂಗಳಿ ಇಇ, ಘನತ್ಯಾಜ್ಯ ನಿರ್ವಹಣೆ ವಿಭಾಗ, ಹು-ಧಾ ಮಹಾನಗರ ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts