More

    ಟ್ರ್ಯಾಕ್ಟರ್, ಚಾಲಕ ಪೊಲೀಸರ ವಶಕ್ಕೆ

    ಹಾನಗಲ್ಲ: ತಾಲೂಕಿನ ವರದಾ ನದಿ ತಟದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಘಟಕಗಳ ಮೇಲೆ ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಮಂಗಳವಾರ ದಾಳಿ ನಡೆಸಿ, ಟ್ರ್ಯಾಕ್ಟರ್​ನೊಂದಿಗೆ ಚಾಲಕನನ್ನೂ ಹಿಡಿದು ಪೊಲೀಸ್ ಠಾಣೆಗೊಪ್ಪಿಸಿದ್ದಾರೆ.

    ಶೇಷಗಿರಿ ಗ್ರಾಮದ ವರದಾ ನದಿ ಪಾತ್ರದಲ್ಲಿ ಐದು ವಾಹನಗಳು ಮರಳು ತುಂಬುತ್ತಿದ್ದ ಮಾಹಿತಿ ಹಿನ್ನೆಲೆಯಲ್ಲಿ ಸಿಬ್ಬಂದಿಯೊಂದಿಗೆ ದಾಳಿ ನಡೆಸಲಾಗಿದೆ. ಒಂದು ಟ್ರಾಕ್ಟರ್ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡು ಆಡೂರು ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ದೂರು ದಾಖಲಿಸಿಕೊಳ್ಳಲು ಸೂಚಿಸಲಾಗಿದೆ. ಇನ್ನುಳಿದ ನಾಲ್ಕು ವಾಹನಗಳ ಚಾಲಕರು ಪರಾರಿಯಾಗಿದ್ದಾರೆ. ಆದಾಗ್ಯೂ ಕೆಲವರ ಹೆಸರು ಪತ್ತೆ ಹಚ್ಚಲಾಗಿದೆ.

    ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ಹಾಯ್ದು ಹೋಗಿರುವ ವರದಾ ನದಿ ಪ್ರದೇಶದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವ ಕುರಿತು ಗ್ರಾಮಸ್ಥರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಈ ದಾಳಿ ಕೈಗೊಂಡಿದ್ದರು.

    ಅಕ್ರಮ ತಡೆ ಯಾರ ಜವಾಬ್ದಾರಿ: ವರದಾ ನದಿ ಪಾತ್ರದ 25 ಕಿ.ಮೀ.ಗಿಂತಲೂ ಹೆಚ್ಚು ಸ್ಥಳಗಳಲ್ಲಿ ಅಕ್ರಮವಾಗಿ ಮರಳು ತೆಗೆಯಲಾಗುತ್ತದೆ. ರಾತ್ರಿ ಸಮಯದಲ್ಲಿ ಈ ನದಿಯಲ್ಲಿ ಮರಳು ತೆಗೆಯಲು ಹತ್ತಾರು ಜನರ ತಂಡಗಳು ಬೆಳಗಿನವರೆಗೂ ಕೆಲಸ ಮಾಡುತ್ತವೆ. ಬೆಳಗಿನ ಜಾವದಿಂದ ಈ ಮರಳನ್ನು ಟ್ರಾಕ್ಟರ್​ಗಳಲ್ಲಿ ತುಂಬಿ ತಾಲೂಕು ಹಾಗೂ ಹೊರ ತಾಲೂಕುಗಳಿಗೆ ರವಾನಿಸಲಾಗುತ್ತದೆ. ಟ್ರಾಕ್ಟರ್ ಮರಳು 5 ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗುತ್ತದೆ. ಪ್ರತಿದಿನವೂ ಇಪ್ಪತೈದಕ್ಕೂ ಅಧಿಕ ವಾಹನಗಳಲ್ಲಿ ಮರಳು ರವಾನೆಯಾಗುತ್ತಿರುವ ಮಾಹಿತಿಯಿದೆ.

    ಪೊಲೀಸ್ ಹಾಗೂ ಗ್ರಾಮ ಪಂಚಾಯಿತಿಗಳು ಅಕ್ರಮ ಮರಳು ದಂಧೆಕೋರರನ್ನು ಹಿಡಿದು ದೂರು ದಾಖಲಿಸುವ ಕ್ರಮ ಕೈಗೊಳ್ಳಬೇಕಿದೆ. ಆದರೆ, ಅದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಮರಳು ತುಂಬಿದ ವಾಹನ ಹಿಡಿಯುವ, ದಂಡ ವಿಧಿಸುವ ಅಧಿಕಾರ ತಮ್ಮ ಇಲಾಖೆಗಳಿಗಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

    ತಿಳವಳ್ಳಿ ಭಾಗದ ಗ್ರಾಮಗಳಾದ ಬ್ಯಾತನಾಳ, ಹೊಂಕಣ, ಶೇಷಗಿರಿ, ಇನಾಂಲಕಮಾಪುರ, ಕೂಸನೂರು ಮುಂತಾದ ಗ್ರಾಮಗಳಲ್ಲಿ ಈ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ತಾಲೂಕು ಆಡಳಿತಕ್ಕೆ ದೊರಕಿದೆ. ಇನ್ನು ನಿರಂತರವಾಗಿ ದಾಳಿ ನಡೆಸಿ ಇಂಥವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು.

    | ಪಿ.ಎಸ್. ಎರ್ರಿಸ್ವಾಮಿ , ತಹಸೀಲ್ದಾರ್ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts