More

    ಟೈರ್​ ಶೋ ರೂಮ್​​ಗೆ ಕನ್ನ

    ಚಿಂಚೋಳಿ (ಕಲಬುರಗಿ): ಸಿನಿಮೀಯ ರೀತಿಯಲ್ಲಿ ಕಾವಲುಗಾರನ ಮೇಲೆ ಹಲ್ಲೆ ಮಾಡಿ ಟೈರ್ಸ್ ಶೋರೂಮ್ನಲ್ಲಿನ ಹಲವು ವಸ್ತುಗಳನ್ನು ಹೊತ್ತೊಯ್ದ ಘಟನೆ ಪಟ್ಟಣದಲ್ಲಿ ಶನಿವಾರ ನಸುಕಿನ ಜಾವ ಜರುಗಿದೆ.

    ಚಿದಾನಂದ ಸುಂಕದ ಎಂಬುವರ ಬಸವ ಟೈರ್ಸ್ ಶೋರೂಮ್ನಲ್ಲಿ ಕಳ್ಳತನ ನಡೆದಿದೆ. ಚಿಂಚೋಳಿ-ತಾಂಡೂರು ಮುಖ್ಯ ರಸ್ತೆಯಲ್ಲಿರುವ ಶೋರೂಮ್​ಗೆ ಎಂದಿನಂತೆ ವಹಿವಾಟು ಮುಗಿದ ಬಳಿಕ ಕೀಲಿ ಹಾಕಿ ಹೋಗಲಾಗಿದೆ. ಮಧ್ಯರಾತ್ರಿ 2ರ ಸುಮಾರಿಗೆ ಕಳ್ಳರು ನುಗ್ಗಿದ್ದಾರೆ. ಅಂಗಡಿಯಲ್ಲಿ ಶಬ್ದ ಬರುತ್ತಿರುವುದರಿಂದ ಕೆಳ ಮಹಡಿಯಲ್ಲಿದ್ದ ಕಾವಲುಗಾರ ಶೋರೂಮ್ ಬಳಿ ತೆರಳಿದಾಗ ಕಳ್ಳರ ಗುಂಪು ಹಲ್ಲೆ ನಡೆಸಿದೆ. ಬಳಿಕ ಸುಮಾರು 20 ಲಕ್ಷ ರೂ. ಮೌಲ್ಯದ 70ಕ್ಕೂ ಅಧಿಕ ಟೈರ್ರ್​ಗಳನ್ನು ಲಾರಿಯಲ್ಲಿ ಹಾಕಿಕೊಂಡು ಪರಾರಿಯಾಗಿದೆ. ಖದೀಮರ ಕೃತ್ಯವೆಲ್ಲ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ವಿಷಯ ತಿಳಿಯುತ್ತಿದ್ದಂತೆ ಪಿಎಸ್ಐ ಮಂಜುನಾಥರೆಡ್ಡಿ, ಸಿಪಿಐ ಮಹಾಂತೇಶ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಒಂದೇ ಅಂಗಡಿಯಲ್ಲಿ ಮೂರು ಸಲ ಕಳ್ಳತನ: ಚಿಂಚೋಳಿಯ ಬಸವ ಟೈರ್ಸ್ ಶೋರೂಮ್​ನಲ್ಲಿ ಇದುವರೆಗೆ ಮೂರು ಬಾರಿ ಕಳ್ಳತನ ನಡೆದಿದೆ. ಮೊದಲ ಸಲ ಕಳ್ಳರು 3 ಲಕ್ಷದ ಟೈರ್ರ್​ಗಳನ್ನು ಹೊತ್ತೊಯ್ದಿದ್ದರು. ಎರಡನೇ ಬಾರಿಯೂ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದರೂ ಸಫಲವಾಗಿರಲಿಲ್ಲ. ಪೊಲೀಸರು ಮತ್ತು ಶ್ವಾನದಳ ತಂಡ ಭೇಟಿ ನೀಡಿ ಪರಿಶೀಲಿಸಿದರೂ ಪ್ರಯೋಜನವಾಗಿರಲಿಲ್ಲ. ಇಲ್ಲಿವರೆಗೆ ಯಾರೊಬ್ಬರನ್ನೂ ಅರೆಸ್ಟ್ ಮಾಡಿಲ್ಲ. ಇದೀಗ ಪಕ್ಕಾ ಸ್ಕೆಚ್ ಹಾಕಿ ಮೂರನೇ ಸಲ ದೊಡ್ಡ ಪ್ರಮಾಣದ ಕಳ್ಳತನ ಮಾಡಿದ್ದಾರೆ.

    ಸಿಡಿದೆದ್ದ ವ್ಯಾಪಾರಸ್ಥರು, ವರ್ತಕರು : ತಾಲೂಕಿನಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು, ನಿಶ್ಚಿಂತೆಯಿಂದ ವ್ಯಾಪಾರ-ವಹಿವಾಟು ಮಾಡಲು ಆಗುತ್ತಿಲ್ಲ ಎಂದು ಆರೋಪಿಸಿ ಚಿಂಚೋಳಿ ಪೊಲೀಸ್ ಠಾಣೆ ಎದುರು ವ್ಯಾಪಾರಸ್ಥರು ಮತ್ತು ವರ್ತಕರ ಸಂಘದ ಅಧ್ಯಕ್ಷ ಅಜೀತ್ ಪಾಟೀಲ್ ನೇತೃತ್ವದಲ್ಲಿ ವ್ಯಾಪಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು. ಬಸವೇಶ್ವರ ವೃತ್ತದಿಂದ ಶುರುವಾದ ಬೃಹತ್ ಮೆರವಣಿಗೆ ಪೊಲೀಸ್ ಠಾಣೆಗೆ ಬಂದು ಸಮಾವೇಶಗೊಂಡಿತು. ಎಲ್ಲ ಅಂಗಡಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಬಸವ ಟೈರ್ಸ್ ಶೋರೂಮ್​ನಲ್ಲಿ ಕಳ್ಳತನ ಮಾಡಿದ ಖದೀಮರನ್ನು ಕೂಡಲೇ ಬಂಧಿಸಬೇಕು ಎಂದು ಅಜೀತ್ ಒತ್ತಾಯಿಸಿದರು. ಪ್ರಮುಖರಾದ ಎಸ್.ಎನ್. ದಂಡಿನಕುಮಾರ, ರಮೇಶ ಬೇಕರಿ, ಶಿವಕುಮಾರ ಪಲ್ಲೇದ್, ರಾಕೇಶ ಗೋಸೂಲ್, ಸಂಪತ್ ಮುಸ್ತರಿ, ಸೋಮಶೇಖರ ಹುಲಿ, ಉಮಾ ಪಾಟೀಲ್, ಮಲ್ಲಿಕಾರ್ಜುನ, ಜಗನ್ನಾಥ ಶೇರಿಕಾರ, ಶ್ರೀಕಾಂತ ಸುಂಕದ, ನರೇಂದ್ರ, ಸುನೀಲ ಗೋಳ, ಮಹಾಂತೇಶ, ಶಿವಕುಮಾರ, ಸಿದ್ದಯ್ಯ ಸಾಲಿ, ಸಂತೋಷ ಗಡಂತಿ ಅನೇಕರಿದ್ದರು. ಸಿಪಿಐ ಮಹಾಂತೇಶ ಪಾಟೀಲ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts