More

    ಟೆಕ್ಸ್​ಟೈಲ್ ಪಾರ್ಕ್​ಗೆ ಸರ್ಕಾರದ ಅಸ್ತು

    ಶಿಗ್ಗಾಂವಿ: ರಾಜ್ಯ ಸರ್ಕಾರ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಕಡೆ ಸಹ ಹೊಸ ಹೊಸ ಉದ್ದಿಮೆ ಸ್ಥಾಪನೆಗೆ ಮುಂದಾಗಿದೆ. ಅದರ ಪ್ರಕಾರ ಶಿಗ್ಗಾಂವಿ ತಾಲೂಕಿನ ಬಂಕಾಪುರ ಹೋಬಳಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಖುರ್ಸಾಪುರ ಗ್ರಾಮದ ಕಂದಾಯ ಭೂಮಿಯಲ್ಲಿ ಟೆಕ್ಸ್​ಟೈಲ್ ಪಾರ್ಕ್ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ. ಇದರೊಂದಿಗೆ ಗ್ರಾಮೀಣ ಭಾಗದ ಯುವಕರಲ್ಲಿ ಉದ್ಯೋಗದ ಭರವಸೆ ಜತೆಗೆ ರೈತರ ಮುಖದಲ್ಲೂ ಮಂದಹಾಸ ಮೂಡಿಸುವಂತಾಗಿದೆ.

    2020ನೇ ಸಾಲಿನ ಬಜೆಟ್​ನಲ್ಲಿ ಘೊಷಣೆಯಾಗಿದ್ದ ಟೆಕ್ಸ್​ಟೈಲ್ ಪಾರ್ಕ್, ಖುರ್ಸಾಪುರ ಗ್ರಾಮದ ಬಳಿ ಸರ್ವೆ ನಂ. 43ರ 59.34 ಎಕರೆ ಕಂದಾಯ ಭೂಮಿಯಲ್ಲಿ ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಯಾಗಲಿದೆ. ಜವಳಿ ಪಾರ್ಕ್ ಸ್ಥಾಪನೆ ಕುರಿತು ಮುಂದಿನ ಕ್ರಮಕ್ಕೆ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆಗೆ ಆದೇಶ ಮಾಡಿದ್ದಾರೆ.

    ಹೊಸ ಜವಳಿ ಹಾಗೂ ಸಿದ್ಧ ಉಡುಪು ನೀತಿಯನ್ವಯ ಅನುಷ್ಠಾನಗೊಳಿಸುವಂತೆ ಆದೇಶದಲ್ಲಿ ತಿಳಿಸಿದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಜವಳಿ) ಸರ್ಕಾರದ ಉಪ ಕಾರ್ಯದರ್ಶಿ ಬಿ. ವೆಂಕಟೇಶಮೂರ್ತಿ, ಟೆಕ್ಸ್​ಟೈಲ್ ಪಾರ್ಕ್ ಸ್ಥಾಪನೆಯಿಂದ ಮೂರು ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

    ರೈತರಿಗೆ ಲಾಭ

    ಶಿಗ್ಗಾಂವಿಯಲ್ಲಿ ಈಗಾಗಲೇ ಗೋವಿನಜೋಳ ಸಂಸ್ಕೃರಣಾ ಕಂಪನಿ ಇದ್ದು, ನೇರವಾಗಿ ರೈತರಿಂದಲೇ ಗೋವಿನ ಜೋಳ ಖರೀದಿಸುತ್ತಿದೆ. ಟೆಕ್ಸ್​ಟೈಲ್ಸ್ ಪಾರ್ಕ್ ಸ್ಥಾಪನೆಯಿಂದ ಹತ್ತಿಯನ್ನೂ ಖರೀದಿಸಲಾಗುತ್ತದೆ. ರೈತರಿಗೆ ಒಂದಿಷ್ಟು ಹೆಚ್ಚಿನ ಬೆಲೆ ಸಿಗುವ ಸಾಧ್ಯತೆಯಿದೆ. ಹತ್ತಿ ಬೆಳೆಯುವುದರಲ್ಲಿ ದೇಶದಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ. ರಾಜ್ಯದ ಗ್ರಾಮೀಣ ಪ್ರದೇಶದ ರೈತರಿಂದ ಪ್ರತಿವರ್ಷ 4 ಸಾವಿರ ಕೋಟಿ ರೂ. ಮೌಲ್ಯದ ಸುಮಾರು 3.5 ಲಕ್ಷ ಟನ್ ಹತ್ತಿ ಬೇರೆ ರಾಜ್ಯಗಳಿಗೆ ರವಾನೆಯಾಗುತ್ತಿದೆ. ಹೀಗಾಗಿ ರಾಜ್ಯದ ರೈತರು ಬೆಳೆದ ಹತ್ತಿಯ ಲಾಭ ತಮಿಳುನಾಡು, ಮಹಾರಾಷ್ಟ್ರ, ಗುಜರಾತ ರಾಜ್ಯದ ಮಿಲ್​ಗಳ ಪಾಲಾಗುತ್ತಿತ್ತು. ಈಗ ಶಿಗ್ಗಾಂವಿ ತಾಲೂಕಿನಲ್ಲಿ ಟೆಕ್ಸ್​ಟೈಲ್ ಪಾರ್ಕ್ ಸ್ಥಾಪನೆಯಿಂದ ರೈತರು ಹತ್ತಿಯನ್ನು ನೇರವಾಗಿ ಟೆಕ್ಸ್​ಟೈಲ್​ಗೆ ಮಾರಾಟ ಮಾಡಬಹುದು. ಹತ್ತಿ ಬೆಳೆದ ರೈತರಿಗೆ ಶೇ. 15ರಿಂದ 20ರಷ್ಟು ಹೆಚ್ಚುವರಿ ಬೆಲೆ ನೀಡಬಹುದು. ಇದರಿಂದ ಹತ್ತಿ ಬೆಳೆಗಾರರಿಗೆ ಉತ್ತೇಜನ ದೊರಕುತ್ತದೆ. ವಿಶೇಷವಾಗಿ ಪಾರ್ಕ್​ನಿಂದ ಸಿದ್ಧಗೊಳ್ಳುವ ಉಡುಪುಗಳು ದೇಶ, ವಿದೇಶಗಳಿಗೆ ರಫ್ತಾಗುವ ಮೂಲಕ ಶಿಗ್ಗಾಂವಿ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದೆ.

    ಉದ್ಯೋಗ ಸೃಷ್ಟಿ

    ಟೆಕ್ಸ್​ಟೈಲ್ ಪಾರ್ಕ್ ನಿರ್ವಣದಿಂದ ಸ್ಥಳೀಯವಾಗಿ ಹಲವು ವ್ಯಾಪಾರ- ವಹಿವಾಟಿನ ಮೇಲೆ ಉತ್ತಮ ಪರಿಣಾಮ ಉಂಟಾಗಲಿದೆ. ಜತೆಗೆ ಜಿಲ್ಲೆಯ ಸಣ್ಣಪುಟ್ಟ ಜಿನ್ನಿಂಗ್ ಮಿಲ್​ಗಳಿಗೂ ಉತ್ತೇಜನ ಸಿಗಲಿದೆ. ಸಹಕಾರಿ ಕ್ಷೇತ್ರದಲ್ಲಿನ ಜವಳಿ ಗಿರಣಿಗಳನ್ನು ಮರಳಿ ತೆರೆಯಲು ಸಹಕಾರಿಯಾಗಲಿದೆ. ಇದರಿಂದ ಆರ್ಥಿಕ ಚಟುವಟಿಕೆ ವೃದ್ಧಿಯಾಗಿ 20ರಿಂದ 25 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಸರಕು ಸಾಗಣೆಯಿಂದ ಸರ್ಕಾರದ ಬೊಕ್ಕಸಕ್ಕೂ ಆದಾಯ ಸಿಗಲಿದೆ.

    ಶಿಗ್ಗಾಂವಿ ತಾಲೂಕಿನಲ್ಲಿ ಟೆಕ್ಸ್​ಟೈಲ್ ಪಾರ್ಕ್ ಸ್ಥಾಪಿಸುವ ಮೂಲಕ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಜತೆಗೆ ಹತ್ತಿ ಬೆಳೆಯುವ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದ್ದಾರೆ. ಇಲ್ಲಿ ತಯಾರಾಗುವ ಸಿದ್ಧ ಉಡುಪುಗಳು ದೇಶ ವಿದೇಶಗಳಿಗೆ ರಫ್ತಾಗಲಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ರೈತರ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಲಾಗಿದೆ.
    | ಬಸವರಾಜ ಬೊಮ್ಮಾಯಿ ಗೃಹ ಸಚಿವ

    ಪಾರ್ಕ್ ಸ್ಥಾಪನೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕಳೆದ ಎರಡು ವರ್ಷಗಳಿಂದ ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ. ಉದ್ಯೋಗ ಸೃಷ್ಟಿ ಹಾಗೂ ರೈತರ ನೆರವಿಗೆ ಬಂದು, ಕೈಗಾರಿಕಾ ಅಭಿವೃದ್ಧಿಯಾಗಲಿದೆ. ಈ ಯೋಜನೆಯಿಂದ ಸ್ಥಳೀಯವಾಗಿ 15 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ.
    | ರಾಘವೇಂದ್ರ ಮೇಲಗೇರಿ, ಪ್ರಭಂಜನ್ ಇಂಡಸ್ಟ್ರೀಸ್ ಸಿಇಒ ಬಂಕಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts