More

    ಟಿಬೆಟಿಯನ್ ಕಾಲನಿಯಲ್ಲಿ ಕರೊನಾ ಹೆಚ್ಚಳ

    ಮುಂಡಗೋಡ: ತಾಲೂಕಿನ ಟಿಬೆಟಿಯನ್ ಕಾಲನಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಪಟ್ಟಣದ ಇತರೆಡೆಗಳ ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ. ಕಳೆದ ಮೂರು ದಿನಗಳಲ್ಲಿ 400 ಮಂದಿ ಟಿಬೆಟಿಯನ್ನರ ಕರೊನಾ ಪರೀಕ್ಷೆ ಮಾಡಲಾಗಿದ್ದು ಒಟ್ಟು 140 ಜನರ ವರದಿ ಪಾಸಿಟಿವ್ ಬಂದಿದೆ.

    ಟಿಬೆಟಿಯನ್ ಆಡಳಿತ ನೀಡಿದ 60 ವರ್ಷ ಮೇಲ್ಪಟ್ಟ 1265 ಜನರ ಯಾದಿಯ ಪ್ರಕಾರ ಪರೀಕ್ಷೆ ಮಾಡಲಾಗಿದ್ದು, ಪಾಸಿಟಿವ್ ವರದಿ ಬಂದವರನ್ನು ಡಿಟಿಆರ್ ಮತ್ತು ಲಾಮಾ ಕ್ಯಾಂಪ್ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ದಾಖಲಿಸಲಾಗಿದೆ.

    ಅ.2ರಂದು ಪ್ರಥಮ ಬಾರಿ 224 ಜನರ ಪರೀಕ್ಷೆ ಮಾಡಿದಾಗ 4 ಜನರಲ್ಲಿ ರೋಗ ಕಾಣಿಸಿಕೊಂಡಿತ್ತು. ಎರಡನೇ ಬಾರಿ 135 ಜನರ ಪರೀಕ್ಷೆ ಮಾಡಿದಾಗ 95 ಜನರ ವರದಿ ಪಾಸಿಟಿವ್ ಬಂತು. ಶಿಬಿರಕ್ಕೆ ಬರಲು ಟಿಬೆಟಿಯನ್ನರು ಹಿಂಜರಿಯುತ್ತಿದ್ದ ಕಾರಣ ಅವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

    ‘ಕಡ್ಡಾಯವಾಗಿ ಎಲ್ಲರೂ ಕರೊನಾ ಪರೀಕ್ಷೆ ಮಾಡಿಕೊಳ್ಳಬೇಕು. ರೋಗ ಇದ್ದಲ್ಲಿ ತಕ್ಷಣ ಚಿಕಿತ್ಸೆ ನೀಡಿ ಜೀವ ಬದುಕಿಸಬಹುದು. ತಡವಾದರೆ ನಾವು ಏನೂ ಮಾಡಲು ಆಗುವುದಿಲ್ಲ. ಮುಂದೆ ಆಗುವ ಅನಾಹುತಕ್ಕೆ ಆಡಳಿತ ಹೊಣೆಯಲ್ಲ. ಸರ್ಕಾರ ಉಚಿತ ಚಿಕಿತ್ಸೆ ನೀಡುತ್ತಿದೆ ಸಹಕಾರ ನೀಡಬೇಕು’ ಎಂದು ತಹಸೀಲ್ದಾರ್ ಶ್ರೀಧರ ಮುಂದಲಮನಿ ಟಿಬೆಟಿಯನ್ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

    ‘ಪಟ್ಟಣ ಸೇರಿದಂತೆ ತಾಲೂಕಿನ ಹಳ್ಳಿಗಳಲ್ಲಿ ಅಲ್ಲಲ್ಲಿ ಮಾತ್ರ ದಿನಕ್ಕೆ 2-3ರಂತೆ ಕರೊನಾ ಸೋಂಕಿತರು ಕಂಡು ಬರುತ್ತಿದ್ದಾರೆ. ಟಿಬೆಟಿಯನ್ ಕಾಲನಿಯಲ್ಲಿ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಇದರಿಂದ ಟಿಬೆಟಿಯನ್

    ಕಾಲನಿಯ ಜನ ಪಟ್ಟಣದಲ್ಲಿ ಅನಾಶವಶ್ಯಕವಾಗಿ ಓಡಾಡಬಾರದು. ತಮ್ಮ ಪರವಾಗಿ

    ಪ್ರತಿನಿಧಿಗಳನ್ನು ಕಳಿಸುವ ವ್ಯವಸ್ಥೆ ಮಾಡುವ ಬಗ್ಗೆ ಜಿಲ್ಲಾಧಿಕಾರಿ ಜತೆ ರ್ಚಚಿಸಲಾಗುವುದು’ ಎಂದು ಆಡಳಿತ ವೈದ್ಯಾಧಿಕಾರಿ ಎಚ್.ಎಫ್.ಇಂಗಳೆ ತಿಳಿಸಿದ್ದಾರೆ.

    ಕೋವಿಡ್ ಕೇರ್ ಸೆಂಟರ್​ಗಳಲ್ಲಿ 20 ರಿಂದ 45 ವರ್ಷದ ಒಳಗಿನ ಸೋಂಕಿತರು ಬೇಗ ಗುಣ ಮುಖರಾಗುತ್ತಿದ್ದಾರೆ. 60 ವರ್ಷ ಮೇಲ್ಪಟ್ಟವರು ಗುಣವಾಗಲು ಸ್ವಲ್ಪ ವೇಳೆ ತೆಗೆದು ಕೊಳ್ಳುತ್ತಿದ್ದಾರೆ. ಟಿಬೆಟಿಯನ್ ಕಾಲನಿಯಲ್ಲಿ ಈವರೆಗೆ ಒಟ್ಟು 297 ಸೋಂಕಿತರು ಪತ್ತೆಯಾಗಿದ್ದು ಪ್ರಸ್ತುತ ಎರಡೂ ಕೋವಿಡ್ ಕೇರ್ ಸೆಂಟರ್​ಗಳಲ್ಲಿ 123 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸ್ಥಿತಿ ತೀರಾ ಗಂಭೀರವಾದವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. | ನವಾಂಗ್ ತುಪ್ಟೇನ್ ಡಿಟಿಆರ್ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts