More

    ಜೋಳದ ಬೆಳೆಗೆ ಲದ್ದಿಹುಳುಗಳೇ ವೈರಿ, ಹೈರಾಣಾದ ರೈತ ಜಾನುವಾರುಗಳಿಗೆ ಮೇವು ಪೂರೈಕೆ ಸಂಕಷ್ಟ

    ವಿಜಯಪುರ/ಬೆಂ.ಗ್ರಾಮಾಂತರ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಸುರಿದ ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ಕೆರೆ-ಕುಂಟೆಗಳು ಭರ್ತಿಯಾಗಿ ಕೃಷಿ ಚಟುವಟಿಕೆ ಚುರುಕುಗೊಂಡಿವೆ. ಏತನ್ಮಧ್ಯೆ ಮುಂಗಾರು ಮಳೆಯೂ ಉತ್ತಮವಾಗಿದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮುಸುಕಿನ ಜೋಳ ಬಿತ್ತಲಾಗಿದ್ದು, ಸಲಿನ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಲದ್ದಿಹುಳುವಿನ ಕಾಟ ಎದುರಾಗಿದೆ.

    ಹೌದು! ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಪ್ರಧಾನ ಬೆಳೆಯಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಜೋಳದ ಬೆಳೆಯತ್ತ ರೈತರು ಒಲವು ತೋರಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಜೋಳ ಬಿತ್ತನೆ ಪ್ರಮಾಣವೂ ಹೆಚ್ಚುತ್ತಿದೆ, ನೀಲಗಿರಿ ತೆರವುಗೊಳಿಸಿದ ಜಮೀನುಗಳಲ್ಲಿ ಜೋಳದ ಬೆಳೆ ತೊನೆಯುತ್ತಿದೆ. ಆದರೆ ಎರಡನೇ ಪ್ರಮುಖ ಬೆಳೆಯಾಗುವತ್ತ ಮುಂಚೂಣಿಗೆ ಬರುತ್ತಿರುವ ಜೋಳಕ್ಕೆ ಲದ್ದಿಹುಳದ ಕಾಟ ರೈತರಿಗೆ ತೊಡಕಾಗಿ ಪರಿಣಮಿಸಿದೆ.

    ಚಿಂತೆಗೀಡು ಮಾಡುವ ಕೀಟ: ಮುಂಗಾರು ಮಳೆ ಆರಂಭವಾಗುತ್ತಿರುವ ಹೊತ್ತಿನಲ್ಲಿ ಅಬ್ಬರದ ಮಳೆ ಬಿಡುವು ಕೊಟ್ಟಿದೆ. ಕೆಲವೆಡೆ ಬಿತ್ತನೆ ಕೆಲಸ ಆರಂಭಿಸಲು ರೈತರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಬಿತ್ತನೆ ಮಾಡಿರುವ ಏಕದಳ ಹಾಗೂ ದ್ವಿದಳ ಬೆಳೆಗಳಿಗೆ ಈ ಹುಳುಗಳ ಕಾಟ ಶುರುವಾಗಿದೆ. ಹಸಿಹುಲ್ಲು, ನಾಟಿ ಪೈರುಗಳು, ಮೊಳಕೆಯೊಡೆದ ಸಸಿಗಳು ಸೇರಿ ಹಸಿರಾಗಿ ಕಾಣುವ ಎಲ್ಲವನ್ನೂ ತಿಂದು ಹಾಕುವ ಈ ಕೀಟದಿಂದ ಬೆಳೆ ನಾಶವಾಗುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

    ಸುಳಿಗೆ ಕನ್ನ: ಜೋಳದ ಸುಳಿಯನ್ನೇ ತಿಂದು ಹಾಕುವ ಈ ಲದ್ದಿಹುಳು ಕಾಟಕ್ಕೆ ರೈತರು ಹೈರಾಣಾಗಿದ್ದಾರೆ. ಬಯಲು ಸೀಮೆಯಾಗಿರುವ ಜಿಲ್ಲೆಯಲ್ಲಿ ಬಹುಪಾಲು ರೈತರು ಮಳೆಯಾಶ್ರಿತ ಕೃಷಿ ನಡೆಸುತ್ತಾರೆ, ಅತಿವೃಷ್ಟಿ-ಅನಾವೃಷ್ಟಿಯಿಂದ ಬೇಸತ್ತಿರುವ ರೈತರಿಗೆ ಲದ್ದಿಹುಳು ಪ್ರಮುಖ ಶತ್ರುವಾಗಿವೆ.

    ಹೈನುಗಾರಿಕೆಗೆ ಕಂಟಕ: ಕೆಲವು ವರ್ಷದ ಹಿಂದೆ ತೀವ್ರ ಬರಗಾಲದಿಂದಾಗಿ ಕಂಗೆಟ್ಟಿದ್ದ ರೈತರು, ಹೈನುಗಾರಿಕೆಯಿಂದ ಆರ್ಥಿಕ ಮಟ್ಟ ಸುಧಾರಣೆ ಮಾಡಿಕೊಳ್ಳಲು ಮುಂದಾಗಿದ್ದರು. ಕಳೆದೆರಡು ವರ್ಷದಿಂದ ಉತ್ತಮ ಮಳೆಯಿಂದಾಗಿ ಸಂತಸಗೊಂಡ ರೈತರು ಹೈನುಗಾರಿಕೆ ಅಭಿವೃದ್ಧಿಗೆ ಜೋಳದ ಬೆಳೆ ನಾಟಿ ಮಾಡಿದ್ದರು. ಮೇವಿನ ಬೆಳೆ ಕಟಾವಿನ ಹಂತಕ್ಕೆ ಬರುವಷ್ಟರಲ್ಲಿ ಲದ್ದಿ ಹುಳುವಿನ ಕಾಟ ಶುರುವಾಗಿದ್ದು, ರೈತರ ಉತ್ಸಾಹಕ್ಕೆ ಕೊಡಲಿಪೆಟ್ಟು ನೀಡಿದೆ. ಇದರಿಂದ ರಾಸುಗಳಿಗೆ ನಿರೀಕ್ಷೆಯಷ್ಟು ಮೇವು ಲಭ್ಯವಾಗುವುದು ಕಷ್ಟವಾಗಿದೆ.

    ಲದ್ದಿಹುಳು ಕಾಟ ಬಿತ್ತನೆ ಬೀಜದಿಂದಲೇ ಆರಂಭವಾಗುತ್ತದೆ, ನಾಟಿ ಮಾಡುವಾಗ ರಾಸಾಯನಿಕ ಸಿಂಪಡಿಸುವ ಮೂಲಕ ಇದನ್ನು ಹತೋಟಿಗೆ ತರಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಆಯಾ ಭಾಗದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.
    ಎಂ.ಸಿ.ವಿನೂತಾ, ಉಪನಿರ್ದೇಶಕರು, ಕೃಷಿ ಇಲಾಖೆ ಬೆಂ.ಗ್ರಾಮಾಂತರ

    ಲದ್ದಿ ಹುಳಗಳನ್ನು ನಾಶಪಡಿಸಲು ಎಮಾಮೆಕ್ಟಿನ್ ಬೆಂಝೋಎಟ್ 5 ಅನ್ನು 200 ಲೀಟರ್‌ಗೆ 100 ಗ್ರಾಂ ಮಿಶ್ರಣ ಮಾಡಿ ಸಿಂಪಡಣೆ ಮಾಡುವುದರಿಂದ ಹುಳುಗಳು ಸಾಯುತ್ತವೆ. ಇದರಿಂದ ಬೆಳೆಗೆ ಯಾವುದೇ ತೊಂದರೆಯಾಗುವುದಿಲ್ಲ. ಮುಸುಕಿನ ಜೋಳದ ಬೆಳೆಯಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಆರಂಭಿಕ ಹಂತದಲ್ಲಿಯೇ ನಿಯಂತ್ರಣ ಮಾಡಬೇಕು.
    ಕೆ.ಎಚ್.ವೀಣಾ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ದೇವನಹಳ್ಳಿ

    ತೋಟಗಳಿಗೆ ರಸಗೊಬ್ಬರ ಹೊರತುಪಡಿಸಿ, ಬೇರೇನೂ ಹಾಕಿಲ್ಲ. ಈಗ ಲದ್ದಿಹುಳುವಿನ ಕಾಟದಿಂದ ಬೆಳೆ ನಾಶವಾಗುತ್ತಿದೆ, ಬೆಳೆಗೆ ರಾಸಾಯನಿಕ ಸಿಂಪಡಿಸಿದರೆ ರಾಸುಗಳ ಆರೋಗ್ಯದ ಮೇಲೆ ದುಷ್ಪರಿಣಾಮವಾಗುವ ಆತಂಕವಿದೆ, ಇದರಿಂದ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.
    ಉಮೇಶ್‌ಕುಮಾರ್, ವಿಜಯಪುರ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts