More

    ಜೇನುಕಲ್ ಸಿದ್ದೇಶ್ವರಸ್ವಾಮಿ ರಥೋತ್ಸವ ವೈಭವ

    ಅರಸೀಕೆರೆ: ಸುಕ್ಷೇತ್ರ ಯಾದಪುರ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಐತಿಹಾಸಿಕ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.


    ಹುಣ್ಣಿಮೆ ದಿನವಾದ ಗುರುವಾರದಿಂದಲೇ ಸಹಸ್ರಾರು ಸಂಖ್ಯೆಯ ಭಕ್ತರು ತಂಡೋಪತಂಡವಾಗಿ ಆಗಮಿಸಿ ಬೆಟ್ಟ ಹತ್ತಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಬೆಟ್ಟದ ಮೇಲೆ ಸಂಪ್ರದಾಯದಂತೆ ಧ್ವಜಾರೋಹಣ, ರುದ್ರಾಭಿಷೇಕ, ಅಂಕುರಾರ್ಪಣೆ, ನೂರೊಂದೆಡೆ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ಪೂಜಾ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.


    ಬಸವೇಶ್ವರಸ್ವಾಮಿ ಉತ್ಸವ, ಗದ್ದುಗೆ ಮಂಟಪದಲ್ಲಿ ಸಾಮ್ರಾಜ್ಯೋತ್ಸವ, ಹುಲಿವಾಹನ, ಸೂರ್ಯಮಂಡಲೋತ್ಸವ, ಬೆಳ್ಳಿಪಲ್ಲಕ್ಕಿ ಉತ್ಸವ, ಬಿಲ್ವವೃಕ್ಷೋತ್ಸವ, ಹರಕೆ ತೀರಿಸುವವರಿಗೆ ಬಾಯಿಬೀಗ, ಚಂದ್ರಮಂಡಲೋತ್ಸವ, ಅಗ್ನಿಕುಂಡ ಸೇವೆ ಹಾಗೂ ಕೆಂಚಮ್ಮನವರ ಸನ್ನಿಧಿಯಲ್ಲಿ ಜರುಗಿದ ಗುಗ್ಗಳ ಸೇವೆಯಲ್ಲಿ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡಿದ್ದರು. ಮಕ್ಕಳು, ಯುವಕ-ಯುವತಿಯರು, ಗೃಹಿಣಿಯರು ಉಪವಾಸ ವ್ರತದೊಂದಿಗೆ ಕೆಂಡ ಹಾದು ಹರಕೆ ತೀರಿಸಿದರು.


    ಭಾನುವಾರ ಬೆಳಗ್ಗೆ ಗ್ರಾಮದ ಮಧ್ಯಭಾಗದಲ್ಲಿರುವ ದೇಗುಲದಿಂದ ನಾದಸ್ವರ, ಕರಡೇವು ವಾದ್ಯ, ತಮಟೆ ಹಾಗೂ ನಂದಿಧ್ವಜ ಕುಣಿತದೊಂದಿಗೆ ಯಳವಾರೆ ಚೆಲುವರಾಯಸ್ವಾಮಿ ಸಮ್ಮುಖದಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ರಥ ಮಂಟಪಕ್ಕೆ ಕರೆತರಲಾಯಿತು. ಜನಸ್ತೋಮದ ನಡುವೆ ನವವಧುವಿನಂತೆ ಶೃಂಗರಿಸಿದ್ದ ರಥದ ಮೇಲೆ ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿಯನ್ನು ಪ್ರತಿಷ್ಠಾಪಿಸುತ್ತಿದ್ದಂತೆ ಹಣ್ಣು-ದವನ ಎಸೆದು ಭಕ್ತಿ ಸಮರ್ಪಿಸಿದರು.


    ಬೆಂಗಳೂರು, ಹಾಸನ, ಚಿಕ್ಕಮಗಳೂರು, ತುಮಕೂರು, ಮೈಸೂರು ಸೇರಿ ರಾಜ್ಯದ ವಿವಿಧೆಡೆಗಳಿಂದ ಜನಸಾಗರವೇ ಹರಿದುಬಂದಿತ್ತು. ಕರೊನಾ ಹಾವಳಿಯಿಂದ 2 ವರ್ಷಗಳಿಂದ ಕಳೆಗುಂದಿದ್ದ ರಥೋತ್ಸವಕ್ಕೆ ವಿಶೇಷ ಮೆರುಗು ಬಂದಿತು. ಅಲ್ಲದೆ ಶ್ರೀ ಕ್ಷೇತ್ರದ ಸುತ್ತಮುತ್ತಲಿನ ಹಳ್ಳಿಗಳಾದ ಮಲ್ಲೇನಹಳ್ಳಿ, ಮುರುಂಡಿ, ಜವನಹಳ್ಳಿ, ಬೊಮ್ಮನಹಳ್ಳಿ, ಸಿದ್ಧರಹಟ್ಟಿ, ಮುದ್ದರಂಗನಹಳ್ಳಿ, ಸಂಕೋಡನಹಳ್ಳಿ, ಗೀಜಿಹಳ್ಳಿ, ಗೊಲ್ಲರಹಳ್ಳಿ, ಬೋರನಕೊಪ್ಪಲು, ಹಾರನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ಗ್ರಾಮಸ್ಥರು ಪ್ರಸಾದ ವಿನಿಯೋಗಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts