More

    ಜೇನಿಗೆ ರೋಗ: ಥಾಯ್ ಸ್ಯಾಕ್‌ಬ್ರೂಡ್ ಕಾಟದಿಂದ ಕಂಗೆಟ್ಟ ಕೃಷಿಕರು

    ವೇಣುವಿನೋದ್ ಕೆ.ಎಸ್. ಮಂಗಳೂರು
    10 ವರ್ಷ ಹಿಂದೆ ಕರಾವಳಿ, ಮಲೆನಾಡು ಭಾಗವನ್ನು ಕಂಗೆಡಿಸಿದ್ದ ಜೇನು ಗೂಡಿನ ಥಾಯ್ ಸ್ಯಾಕ್‌ಬ್ರೂಡ್ ರೋಗ ಮತ್ತೆ ಕಾಣಿಸಿಕೊಂಡಿದೆ. ದ.ಕ ಜಿಲ್ಲೆಯ ವಿವಿಧೆಡೆ ಈ ರೋಗದಿಂದಾಗಿ ಜೇನು ಕೃಷಿಕರು ಕಂಗೆಟ್ಟಿದ್ದಾರೆ. ಜಿಲ್ಲೆಯ ವಿವಿಧೆಡೆಗಳಲ್ಲಿ ದೊಡ್ಡ ಮಟ್ಟಿನ ಜೇನು ಕೃಷಿ ಮಾಡುತ್ತಿರುವವರ ಹಲವು ಜೇನು ಕುಟುಂಬಗಳಿಗೆ ಈ ರೋಗ ಬಾಧಿಸಿದೆ. ಆದರೆ ಇದಕ್ಕೆ ಯಾವುದೇ ರೀತಿಯ ಪರಿಹಾರ ಇಲ್ಲದ ಕಾರಣ ರೈತರು ಅಸಹಾಯಕರಾಗಿದ್ದಾರೆ.

    ಕಳೆದ ಮಳೆಗಾಲದ ಆರಂಭದಲ್ಲೇ ವಿವಿಧ ಕಡೆಗಳಲ್ಲಿ ಕಂಡುಬಂದಿತ್ತು. ಇದನ್ನು ತೋಟಗಾರಿಕಾ ಇಲಾಖೆಯ ವಿಜ್ಞಾನಿಗಳಿಗೆ ತಿಳಿಸಲಾಗಿತ್ತು. ಅವರು ಬಂದು ಅಧ್ಯಯನ ನಡೆಸಿ ಪರಿಹಾರೋಪಾಯಗಳನ್ನೂ ಸೂಚಿಸಿ ತೆರಳಿದ್ದರು. ಆದರೂ ಇದು ಅಷ್ಟೇನೂ ಪ್ರಯೋಜನವಾಗಲಿಲ್ಲ. ಬಹಳಷ್ಟು ಜೇನು ಕುಟುಂಬಗಳು ಈ ಕಾಯಿಲೆಗೆ ಬಲಿಯಾಗಿವೆ ಎನ್ನುತ್ತಾರೆ ಹಿರಿಯ ಜೇನು ಕೃಷಿಕ ಶ್ಯಾಮ ಭಟ್ ವಾದ್ಯಕೋಡಿ.

    ತಜ್ಞರ ಸಲಹೆಯಂತೆ ಅಡಕೆ ಮರದ ಸಲಾಕೆಯಲ್ಲಿ ಹುಟ್ಟುವ ಅಣಬೆಯ ಪುಡಿಯನ್ನು ಸಕ್ಕರೆ ನೀರಿನೊಂದಿಗೆ ಬೆರೆಸಿ ನೀಡಲಾಗಿದೆ. ಅಲ್ಲದೆ ನೆಲನೆಲ್ಲಿಯ ಪುಡಿ ಮತ್ತು ಅರಸಿನಪುಡಿಯನ್ನು ಶುಗರ್ ಸಿರಪ್‌ಗೆ ಹಾಕಿ ಕೊಡಲಾಗಿದೆ. ಅದು ಸ್ವಲ್ಪ ನಿಧಾನವಾಗಿ ಪರಿಣಾಮ ಬೀರಿರಬಹುದು, ಆದರೆ ದೊಡ್ಡ ಪ್ರಯೋಜನವಾಗಿಲ್ಲ. ರೋಗ ಉಲ್ಪಣಗೊಂಡು ಅನೇಕ ಕುಟುಂಬಗಳು ನಾಶವಾಗಿವೆ.

    ರೋಗ ಲಕ್ಷಣಗಳು: ಜೇನು ಹುಳಗಳು ಕೆಲಸ ನಿಧಾನಗೊಳಿಸುವುದು, ಕ್ರಿಯಾಶೀಲತೆ ಕಳೆದುಕೊಳ್ಳುವುದು, ಗೂಡಿನಲ್ಲಿ ಮೇಲ್ಗಡೆ ನೊಣಗಳು ಇಲ್ಲದಿರುವುದು, ಎದಿಯಲ್ಲಿ ಮೊಟ್ಟೆ ಕೊಳೆಯುವುದು, ಗಂಡುನೊಣ ಜಾಸ್ತಿ, ರಾಣಿಕೋಶ ಜಾಸ್ತಿ ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ. ಲಾರ್ವಗಳು ಒಣಗುತ್ತವೆ, ಜೇನ್ನೊಣಗಳು ಸಾಯುತ್ತವೆ. ಕೆಲವೊಮ್ಮೆ ಅದರ ಪಾಡಿಗೆ ಬಿಟ್ಟರೆ ಜೇನ್ನೊಣಗಳೇ ಒಣಗಿದ ಲಾರ್ವಗಳನ್ನು ಕೆಳಗೆ ಎಳೆದು ಹಾಕುತ್ತವೆ.

    ಹರಡುವುದು ಹೇಗೆ?: ಯಾವುದಾದರೂ ಮೂಲದಿಂದ ಒಂದು ಗೂಡಿಗೆ ಈ ಥಾಯ್ ಸ್ಯಾಕ್‌ಬ್ರೂಡ್ ವೈರಸ್ ಹರಡಿದರೆ ಅದರಲ್ಲಿ ಕುಳಿತ ಜೇನುನೊಣಗಳು ಪರಾಗ/ಮಕರಂದ ಸಂಗ್ರಹಿಸಲು ಹೂವನ್ನು ಸಂಪರ್ಕಿಸುತ್ತವೆ. ಅಲ್ಲಿಗೆ ಬೇರೆ ಕುಟುಂಬದ ಜೇನುನೊಣಗಳೂ ಬರುತ್ತವೆ, ಆಗ ಅಲ್ಲಿ ವೈರಸ್ ಹರಡುತ್ತದೆ. 1970ರ ದಶಕದಲ್ಲಿ ಥಾಯ್‌ಲ್ಯಾಂಡ್‌ನಲ್ಲಿ ತುಡುವೆ ಜೇನು ಕುಟುಂಬಗಳಿಗೆ ಬಾಧಿಸಲು ಪ್ರಾರಂಭಿಸಿದ್ದು ಈ ರೋಗದ ಪ್ರಾರಂಭಿಕ ಹಂತ. ಅಲ್ಲಿಂದ ಅದು ಹರಡಲು ಶುರುವಾಗಿದೆ.

    ಮಕರಂದ ಜಾಸ್ತಿ ಇದ್ದು, ಪರಾಗ ಕಡಿಮೆ ಲಭಿಸುವಾಗ ಆಹಾರದ ಅಸಮತೋಲನದ ಸಂದರ್ಭ ಈ ರೋಗ ತೀವ್ರಗೊಳ್ಳುತ್ತದೆ. ಜಿಲ್ಲೆಯ ಹಲವೆಡೆಗಳಿಂದ ಈ ರೋಗದ ಬಗ್ಗೆ ಮಾಹಿತಿ ಬರುತ್ತಿದೆ. ಆದಷ್ಟೂ ಗೂಡುಗಳನ್ನು ಸ್ವಚ್ಛವಾಗಿರಿಸುವುದು, ಬಾಧಿತ ಗೂಡುಗಳನ್ನು ಉರಿಸುವುದು ನಿಯಂತ್ರಿಸುವ ವಿಧಾನವಾಗಿದೆ.
    – ರಾಧಾಕೃಷ್ಣ ಕೋಡಿ, ಜೇನು ತರಬೇತುದಾರ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts