More

    ಜೆಡಿಎಸ್‌ಗೆ ಮುಳಬಾಗಿಲು ನಗರಸಭೆ ಚುಕ್ಕಾಣಿ

    ಮುಳಬಾಗಿಲು: ತೀವ್ರ ಕುತುಹಲ ಕೆರಳಿಸಿದ್ದ ಮುಳಬಾಗಿಲು ನಗರಸಭೆ ಆಡಳಿತ ಚುಕ್ಕಾಣಿ ಜೆಡಿಎಸ್ ವಶವಾಗಿದ್ದು, ಅಧ್ಯಕ್ಷರಾಗಿ ರಿಯಾಜ್ ಅಹ್ಮದ್, ಉಪಾಧ್ಯಕ್ಷರಾಗಿ ಭಾಗ್ಯಮ್ಮರಾಮಚಂದ್ರಯ್ಯ ತಲಾ 18 ಮತ ಪಡೆದು ಆಯ್ಕೆಯಾಗಿದ್ದಾರೆ.

    ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಅಕ್ಮಲ್‌ಬೇಗ್, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ರಿಹಾನ ಬೇಗಂ ತಲಾ 14 ಮತ ಪಡೆದು ಪರಾಭವಗೊಂಡರು.

    ಜೆಡಿಎಸ್ ಅಭ್ಯರ್ಥಿಗಳಿಗೆ ಸಚಿವ ಎಚ್.ನಾಗೇಶ್ ಮತ ಚಲಾಯಿಸುವುದರ ಜತೆಗೆ ತಮ್ಮ ಬೆಂಬಲಿತ ನಾಲ್ವರು ಸದಸ್ಯರ ಬೆಂಬಲವನ್ನು ಜೆಡಿಎಸ್‌ಗೆ ಕೊಡಿಸುವ ಮೂಲಕ ಒಂದೇ ಏಟಿಗೆ ಎರಡು ದಾಳವನ್ನು ಉರುಳಿಸಿದರು.

    ಸಮೃದ್ಧಿ ವಿ.ಮಂಜುನಾಥ್, ಕೊತ್ತೂರು ಮಂಜುನಾಥ್ ಜತೆ ಕೈ ಜೋಡಿಸಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಹಂಚಿಕೊಳ್ಳಲು ಮುಂದಾದರೂ ಇದಕ್ಕೆ ಜೆಡಿಎಸ್ ಮುಖಂಡರು ಆಸ್ಪದ ನೀಡಲಿಲ್ಲ. ಕೊನೆಯ ಹಂತದಲ್ಲಿ ಸಚಿವರು ಜೆಡಿಎಸ್ ಬಣ ಸೇರಿದ್ದರಿಂದ ಜೆಡಿಎಸ್‌ಗೆ ಭೀಮ ಬಲ ಬಂದಂತಾಗಿದ್ದು, ಕೊತ್ತೂರು ಬಣಕ್ಕೆ ತೀವ್ರ ಹಿನ್ನಡೆಯಾಗಿದೆ.

    ಸಚಿವ ಎಚ್.ನಾಗೇಶ್ ಬಣದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿಯ ಎಂ.ಪ್ರಸಾದ್, ಪಕ್ಷೇತರ ಎಸ್.ವೈ.ರಾಜಶೇಖರ್, ಜೆಡಿಎಸ್‌ನ ಜಿ.ನಾಗರಾಜ್, ಟಿ.ಎಸ್.ಸುವರ್ಣಾ, ಎಂ.ಭಾರತಿ ಜೆಡಿಎಸ್‌ಗೆ ಬೆಂಬಲ ವ್ಯಕ್ತಪಡಿಸಿದ ಕಾರಣ ನಗರಸಭೆ ಗಾದಿಗೇರಲು ಸುಲಭವಾಯಿತು. ಚುನಾವಣೆ ಅಧಿಕಾರಿಯಾಗಿ ಎಸಿ ಸೋಮಶೇಖರ್, ಸಹಾಯಕ ಅಧಿಕಾರಿಯಾಗಿ ತಹಸೀಲ್ದಾರ್ ಕೆ.ಎನ್.ರಾಜಶೇಖರ್ ಕರ್ತವ್ಯ ನಿರ್ವಹಿಸಿದರು.

    ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಪಿ ಕಾರ್ತಿಕ್‌ರೆಡ್ಡಿ. ಎಎಸ್‌ಪಿ ಜಾಹ್ನವಿ, ಡಿವೈಎಸ್‌ಪಿ ಬಿ.ಎಂ.ನಾರಾಯಣಸ್ವಾಮಿ, ಸಿಪಿಐ ಎನ್.ಗೋಪಾಲ್‌ನಾಯಕ್, ಪಿಎಸ್‌ಐ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    ಸಚಿವರಿಗೆ ದಿಕ್ಕಾರ, ಲಘು ಲಾಠಿ ಪ್ರಹಾರ: ಸಂಜೆ 6.30ರಲ್ಲಿ ಜೆಡಿಎಸ್ ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ದಿದ್ದ ಹೈಟೆಕ್ ಬಸ್ ನಗರಸಭೆ ಮುಂಭಾಗ ಬಂದಾಗ ಸಚಿವ ಎಚ್.ನಾಗೇಶ್ ಜೆಡಿಎಸ್ ಸದಸ್ಯರೊಂದಿಗೆ ಹೋಗಬಾರದು, ಸಚಿವರಿಗೂ ನಮಗೂ ಸಂಬಂಧವಿಲ್ಲ, ಅವರ ಮತವೂ ಅವಶ್ಯಕತೆಯಿಲ್ಲ ಎಂದು ಸಮೃದ್ಧಿ ವಿ.ಮಂಜುನಾಥ್, ನಗರ ಘಟಕದ ಅಧ್ಯಕ್ಷ ಟಿ.ಎಚ್.ತೇಜೋರಮಣ ಬೆಂಬಲಿಗರು ಸಚಿವರಿಗೆ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಿದರು.

    ಸಮೃದ್ಧಿ ಮಂಜುನಾಥ್ ಕಿಡಿ:  ಜೆಡಿಎಸ್ ಸಣ್ಣ ಪಕ್ಷ ಎಂದು ಪೊಲೀಸರು ತಿಳಿದಿದ್ದಾರೆ, ಎಸ್ಪಿ ಕಾರ್ತಿಕ್‌ರೆಡ್ಡಿ ಮತ್ತು ಕೆಲ ಅಧಿಕಾರಿಗಳು ಏಕ ಪಕ್ಷೀಯವಾಗಿ ನಡೆದುಕೊಂಡಿದ್ದಾರೆಂದು ಸಮೃದ್ಧಿ ಮಂಜುನಾಥ್ ಕಿಡಿ ಕಾರಿದ್ದು, ಸಚಿವ ನಾಗೇಶ್ ನೇರ ರಾಜಕಾರಣ ಮಾಡಿದ್ದಾರೆ. ನಮಗೆ ಅವರ ಮತ ಅವಶ್ಯಕತೆ ಇರಲಿಲ್ಲ. ಜೆಡಿಎಸ್ ಪ್ರಬಲ ಪಕ್ಷವಾಗಿದೆ. ಅವರ ಕುತಂತ್ರಕ್ಕೆ ಜೆಡಿಎಸ್ ಬಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕಾಂಗ್ರೆಸ್ ವಿಪ್‌ಗೆ ಕ್ಯಾರೆ ಎನ್ನದ ಸದಸ್ಯರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ ಕಾಂಗ್ರೆಸ್‌ನ 7 ನಗರಸಭೆ ಸದಸ್ಯರ ಮನೆ ಬಾಗಿಲಿಗೆ ಕಾಂಗ್ರೆಸ್ ಎಸ್ಸಿ ಸೆಲ್ ಅಧ್ಯಕ್ಷ ಕಾರ್ಗಿಲ್ ವೆಂಕಟೇಶ್ ಮೂಲಕ ನೋಟಿಸ್ ಅಂಟಿಸಿ ಚುನಾವಣೆ ಪ್ರಕ್ರಿಯೆಯಿಂದ ದೂರ ಇರಬೇಕೆಂಬ ಸಂದೇಶವನ್ನು ಮುಟ್ಟಿಸಿದರು. ಆದರೆ 7 ಸದಸ್ಯರು ವಿಪ್‌ಗೆ ಕೇರ್ ಮಾಡದೆ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಬೆಂಬಲಕ್ಕೆ ನಿಂತು ಚುನಾವಣೆ ಪ್ರಕ್ರಿಯೆಲ್ಲಿ ಪಾಲ್ಗೊಂಡರು.

    ಮಾಧ್ಯಮದಿಂದ ಅಂತರ: ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಮುಗಿದ ಕೂಡಲೆ ಸಚಿವರು ನಗರಸಭೆಯ ಪೌರಾಯುಕ್ತರ ಕೊಠಡಿಯಲ್ಲಿ ವಿಶ್ರಾಂತಿ ತೆಗೆದುಕೊಂಡಿದ್ದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಪೊಲೀಸರು ಮತ್ತು ಅಧಿಕಾರಿಗಳು ಸಚಿವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿ ವಿಶ್ರಾಂತಿಯಲ್ಲಿದ್ದಾರೆಂದು ಸಮಜಾಯಿಷಿ ನೀಡಿ ಸಾಗಿಹಾಕಿದರು.

    ನಾವು ಸಮೃದ್ಧಿ ಬೆಂಬಲಿಗರು: ಅಧ್ಯಕ್ಷ ಉಪಾಧ್ಯಕ್ಷರು ಮಾತನಾಡಿ ನಾವು ಜೆಡಿಎಸ್‌ನಿಂದ ಆಯ್ಕೆಗೊಂಡಿದ್ದೇವೆ. ಪಕ್ಷಕ್ಕೆ ನಿಷ್ಠೆ ಹೊಂದಿದ್ದೇವೆ ನಮ್ಮ ನಾಯಕರು ಸಮೃದ್ಧಿ ಮಂಜುನಾಥ್ ಆಗಿದ್ದಾರೆ. ಸಚಿವ ಎಚ್.ನಾಗೇಶ್ ಅವರು ಪ್ರೀತಿಯಿಂದ ಚುನಾವಣೆಯಲ್ಲಿ ಬೆಂಬಲಿಸಿದ್ದಾರೆ. ಅದೇ ರೀತಿ ಬಿಜೆಪಿಯ ಒಬ್ಬರು, ಎಸ್‌ಡಿಪಿಐ ಇಬ್ಬರು ಸದಸ್ಯರು ಚುನಾವಣೆಲ್ಲಿ ಬೆಂಬಲಿಸಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts