More

    ಜು.4ರಂದು ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ ಬೆಳ್ಳಿಹಬ್ಬ

    ಶ್ರೀಮಂಗಲ : ಕೊಡವ ಸಾಹಿತ್ಯ ಲೋಕದಲ್ಲಿ ಅತಿ ಹೆಚ್ಚು ಸಾಧನೆಗೈದಿರುವ ಸ್ವಯಂ ಸೇವಾ ಸಂಸ್ಥೆ ಎಂಬ ಖ್ಯಾತಿಗೆ ಭಾಜನವಾಗಿರುವ ಕೊಡವ ತಕ್ಕ್ ಎಳ್ತ್‌ಕಾರಡ ಕೂಟವು ಜುಲೈ 4 ರಂದು ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿದೆ.
    ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಜುಲೈ 4ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಪೂರ್ವಾಹ್ನ 9.30ರಿಂದ ಸಂಜೆ 7 ಗಂಟೆಯವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ಇದೇ ಪ್ರಥಮ ಬಾರಿಗೆ ಒಂದೇ ವೇದಿಕೆಯಲ್ಲಿ ಏಕ ಕಾಲಕ್ಕೆ ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ 25ನೇ ವರ್ಷಾಚರಣೆಯ ಪ್ರಯುಕ್ತ ವಿವಿಧ ಕೊಡವ ಸಾಹಿತ್ಯ ಪ್ರಕಾರಗಳ 25 ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು. ಕೂಟದ ಸ್ಥಾಪನೆಗೆ ಕಾರಣಕರ್ತರಾದ ಪ್ರಥಮ ಆಡಳಿತ ಮಂಡಳಿಯ ಅಧ್ಯಕ್ಷರು ಸದಸ್ಯರಾದಿಯಾಗಿ ಇದುವರೆಗೆ ಕೂಟದಲ್ಲಿ ಕಾರ್ಯನಿರ್ವಹಿಸಿದ ಅಧ್ಯಕ್ಷ, ಆಡಳಿತ ಮಂಡಳಿಯವರಿಗೆ, ಇದುವರೆಗೆ ಕೂಟದ ವತಿಯಿಂದ ಬಿಡುಗಡೆಯಾದ ಎಲ್ಲ ಪುಸ್ತಕಗಳ ಲೇಖಕರಿಗೆ ಹಾಗೂ ಇದುವರೆಗೆ ಕೂಟದ ಪುಸ್ತಕ ಯೋಜನೆಗೆ ಧನ ಸಹಾಯ ನೀಡಿದ ಎಲ್ಲ ದಾನಿಗಳೂ ಸೇರಿದಂತೆ ಒಟ್ಟು 300 ಜನರನ್ನು ಸನ್ಮಾನಿಸಲಾಗುವುದು.
    ಅಂದು ಬೆಳ್ಳಿಹಬ್ಬದ ನೆನಪಿಗಾಗಿ ಪ್ರಕಟಿಸುವ ವಿಶೇಷವಾದ ಅತ್ಯಾಕರ್ಷಕ ಸ್ಮರಣಸಂಚಿಕೆ ಬಿಡುಗಡೆ ಗೊಳಿಸಲಾಗುವುದು.
    ಇದರೊಂದಿಗೆ ವಿವಿಧ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ, ಗಣ್ಯಾತಿಗಣ್ಯ ಅತಿಥಿಗಳ ಭಾಷಣ ಸೇರಿದಂತೆ ಹಲವು ವಿಶೇಷಗಳನ್ನೊಳಗೊಂಡ ಈ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕೊಡವ ಭಾಷೆ, ಸಾಹಿತ್ಯ, ಕಲೆ-ಸಂಸ್ಕೃತಿಯ ಅಭಿಮಾನಿಗಳು ಭಾಗವಹಿಸಲಿದ್ದಾರೆ.
    ಕೊಡವ ತಕ್ಕ್ ಎಳ್ತ್‌ಕಾರಡ ಕೂಟ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ನಡೆಯುವ ಕೂಟದ ಈ ಬೆಳ್ಳಿ ಹಬ್ಬಕ್ಕೆ ಎಲ್ಲ ಕೊಡವ ಸಂಘಟನೆಗಳು ಸಹಕಾರ ನೀಡಲಿವೆ ಎಂದು ಪ್ರಕಟಣೆಯಲ್ಲಿ ಕೂಟದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ತಿಳಿಸಿದ್ದಾರೆ.
    ಬೆಳ್ಳಿಹಬ್ಬದ ಪೂರ್ವಭಾವಿ ಸಭೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಕೂಟದ ಖಜಾಂಚಿ ಬೋಡಂಗಡ ಜಗದೀಶ್ ತಿಮ್ಮಯ್ಯ ಹಾಗೂ ಇತರ ನಿರ್ದೇಶಕರು ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಯುಕ್ತ ಕೂಟದ ವತಿಯಿಂದ ಇದುವರೆಗೆ ಬಿಡುಗಡೆಯಾದ ಪುಸ್ತಕಗಳ ಎಲ್ಲ ಲೇಖಕರ ಸಭೆ ಮೇ 26ರಂದು ಮಧ್ಯಾಹ್ನ 2ಗಂಟೆಗೆ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts