More

    ಜೀವಜಲಕ್ಕೆ ಸಾಗಬೇಕು ದೂರ

    ರಾಣೆಬೆನ್ನೂರ: ತಾಲೂಕಿನ ಮೇಡ್ಲೇರಿ ತಾಂಡಾದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಒಂದು ಲಕ್ಷ ಲೀಟರ್​ನ ಮೇಲ್ಮಟ್ಟದ ಜಲಾಗಾರವಿದ್ದರೂ ಜನರು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಅಧಿಕಾರಿ ಗಳ ನಿಷ್ಕಾಳಜಿಯಿಂದಾಗಿ ಸ್ಥಳೀಯರು ರೋಸಿ ಹೋಗಿದ್ದಾರೆ.

    ತಾಂಡಾದಲ್ಲಿ 250ಕ್ಕೂ ಅಧಿಕ ಕುಟುಂಬಗಳಿದ್ದು, 800ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕವು ದುರಸ್ತಿಗೆ ಬಂದಿದ್ದರಿಂದ ತಾಂಡಾದ ಜನರು 3 ಕಿ.ಮೀ. ದೂರದ ಮೇಡ್ಲೇರಿ ಗ್ರಾಮಕ್ಕೆ ಹೋಗಿ ನೀರು ಹೊತ್ತು ತರುವ ಅನಿವಾರ್ಯತೆಗೆ ಸಿಲುಕಿದ್ದಾರೆ.

    ಖಾಲಿ ಬಿದ್ದ ಜಲಾಗಾರ: ಜಿಪಂ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ 2016-17ನೇ ಸಾಲಿನ ಎನ್​ಆರ್​ಡಬ್ಲ್ಯುಡಿ ಯೋಜನೆಯಡಿ 1 ಲಕ್ಷ ಲೀ. ಸಾಮರ್ಥ್ಯದ ಮೇಲ್ಮಟ್ಟದ ಜಲಾಗಾರ ನಿರ್ವಿುಸಲಾಗಿದೆ. ಮೇಡ್ಲೇರಿ ಕೆರೆ ಬಳಿ ಎರಡು ಬೋರ್​ವೆಲ್ ಕೊರೆಯಿಸಿ ಅಲ್ಲಿಂದ ನೀರು ತುಂಬಿಸಲು ಪೈಪ್​ಲೈನ್ ಕೂಡ ಮಾಡಲಾಗಿದೆ. ಆದರೆ, ಜಲಾಗಾರಕ್ಕೆ ಇಂದಿಗೂ ಹನಿ ನೀರು ತಲುಪಿಲ್ಲ. ಇದರಿಂದಾಗಿ ತಾಂಡಾ ಜನರ ಅನುಕೂಲಕ್ಕಾಗಿ ನಿರ್ವಿುಸಲಾದ ಜಲಾಗಾರ ನಿರುಪಯುಕ್ತವಾಗಿದೆ. ಹೀಗಾಗಿ, ಜನರು ಅನಿವಾರ್ಯವಾಗಿ ಫ್ಲೋರೈಡ್​ಯುುಕ್ತ ನೀರು ಕುಡಿಯುವ ಸ್ಥಿತಿ ಉಂಟಾಗಿದೆ.

    ಮನವಿಗಿಲ್ಲ ಸ್ಪಂದನೆ: ತಾಂಡಾದ ನೀರಿನ ಸಮಸ್ಯೆ ಕುರಿತು ಈಗಾಗಲೇ ತಹಸೀಲ್ದಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಹಾಗೂ ಪಿಡಿಒ ಅವರ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ವೃಥಾ ಭರವಸೆ ನೀಡುವ ಮೂಲಕ ಜಾರಿಕೊಳ್ಳುತ್ತಿದ್ದಾರೆ. ಯಾರೊಬ್ಬರೂ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿಲ್ಲ ಎನ್ನುವುದು ತಾಂಡಾ ಜನರ ಆರೋಪವಾಗಿದೆ.

    ಮೇಡ್ಲೇರಿ ತಾಂಡಾ ಸಮಸ್ಯೆ ಕುರಿತು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಯೋಜನೆ ಅಧಿಕಾರಿಗಳಿಗೆ ಸೂಚಿಸಿ ಶೀಘ್ರವೇ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಜಲಾಗಾರವನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.
    | ಎಸ್.ಎಂ. ಕಾಂಬಳೆ, ರಾಣೆಬೆನ್ನೂರ ತಾಪಂ ಇಒ

    ತಾಂಡಾದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿದೆ. ಮೇಲ್ಮಟ್ಟದ ಜಲಗಾರ ನಿರ್ವಿುಸಿ ಒಂದು ವರ್ಷ ಕಳೆದರೂ ಇಂದಿಗೂ ಆರಂಭಿಸಿಲ್ಲ. ಹೀಗಾಗಿ, ತಾಂಡಾದ ಜನತೆ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಈ ಕುರಿತು ಕ್ರಮ ಕೈಗೊಳ್ಳಬೇಕು.
    | ಪುಟ್ಟಪ್ಪ ಎಲ್, ಮೇಡ್ಲೇರಿ ತಾಂಡಾ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts