More

    ಜಿಲ್ಲೆಯ ಕೆಲ ಶಾಲೆಗಳ ಜಾಗ ಒತ್ತುವರಿ

    ಸುಭಾಸ ಧೂಪದಹೊಂಡ ಕಾರವಾರ: ಜಿಲ್ಲೆಯ ಕೆಲ ಸರ್ಕಾರಿ ಶಾಲೆಗಳ ಜಾಗ ಒತ್ತುವರಿ ಆರೋಪ ಕೇಳಿಬಂದಿದೆ. ಜತೆಗೆ, ಶಾಲೆಗಳ ಆಸ್ತಿ ರಕ್ಷಣೆಯ ಬಗ್ಗೆ ಶಿಕ್ಷಣ ಇಲಾಖೆ ಮುತುವರ್ಜಿ ವಹಿಸುತ್ತಿಲ್ಲ ಎಂಬ ದೂರುಗಳೂ ಕೇಳಿಬರುತ್ತಿವೆ.

    ಕಾರವಾರದ ಚಿತ್ತಾಕುಲಾ, ಮಾಜಾಳಿ ಗ್ರಾಪಂ ವ್ಯಾಪ್ತಿ ಯಲ್ಲಿ ಕಳೆದ 10 ವರ್ಷಗಳಲ್ಲಿ ನಾಲ್ಕು ಸರ್ಕಾರಿ ಮರಾಠಿ ಮಾಧ್ಯಮ ಶಾಲೆಗಳು ಬಂದ್ ಆಗಿವೆ. ಆದರೆ, ಈ ಶಾಲೆಗಳ ಜಾಗ ಹಾಗೂ ಕಟ್ಟಡಗಳನ್ನು ಯಾವುದೇ ಇಲಾಖೆಗೆ ಹಸ್ತಾಂತರಿಸಿಲ್ಲ. ಇದರಿಂದ ಅಂಥ ಕಟ್ಟಡಗಳು ಅಕ್ರಮ ಚಟುವಟಿಕೆಯ ತಾಣಗಳಾಗಿವೆ. ಕಿಟಕಿ, ಬಾಗಿಲುಗಳನ್ನು ಕಿತ್ತುಕೊಂಡು ಹೋಗಲಾಗಿದೆ. ಹೆಂಚುಗಳು ನಾಪತ್ತೆಯಾಗುತ್ತಿವೆ.

    ನಗರದ ಸೋನಾರವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗವನ್ನು ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ವಿುಸಿದ ಆರೋಪ ಕೇಳಿಬಂದಿದೆ. ಬಾವಿ ಹಾಗೂ ದೇವ ಕಟ್ಟೆ ಇರುವ ನೆಪವೊಡ್ಡಿ ಕಾಂಪೌಂಡ್ ನಿರ್ವಿುಸಿದ್ದಾರೆ ಎನ್ನಲಾಗಿದೆ. ಈ ಜಾಗ ಯಾರಿಗೆ ಸೇರಿದ್ದು ಎಂಬುದು ಸರ್ವೆ ನಡೆಸಿದ ನಂತರವಷ್ಟೇ ಖಚಿತವಾಗಬೇಕಿದೆ. ತಾಲೂಕಿನಲ್ಲಿ 150 ಸರ್ಕಾರಿ ಶಾಲೆಗಳಿದ್ದು, ಇವುಗಳಲ್ಲಿ ಬಾಡ ಗ್ರಾಮದ ಒಂದು ಪ್ರಾಥಮಿಕ ಶಾಲೆಯ ಜಾಗ ಸ್ವಲ್ಪ ಒತ್ತುವರಿಯಾಗಿದೆ. ಉಳಿದ ಎಲ್ಲ ಶಾಲೆಗಳ ಹೆಸರಿನ ಜಾಗಗಳು ಸಮರ್ಪಕವಾಗಿವೆ ಎಂದು ಬಿಇಒ ಕಚೇರಿಯ ಮಾಹಿತಿ ಹೇಳುತ್ತದೆ.

    ಮಾಜಾಳಿ ಗಾಂವಕರ್​ವಾಡದಲ್ಲಿ ಸ್ಥಗಿತಗೊಂಡಿದ್ದ ಶಾಲೆಯ ಕಟ್ಟಡವನ್ನು ಗ್ರಾಪಂ ಸದಸ್ಯನೊಬ್ಬ ಯಾರ ಅನುಮತಿ ಪಡೆಯದೇ ನೆಲಸಮಗೊಳಿಸಿ ವಸ್ತುಗಳನ್ನು ಮಾರಾಟ ಮಾಡಲು ಹೊರಟ ಪ್ರಸಂಗ 2 ವರ್ಷಗಳ ಹಿಂದೆ ನಡೆದಿತ್ತು. ಈ ಸಂಬಂಧ ಗ್ರಾಪಂ ಸದಸ್ಯನ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದಾದ ನಂತರವೂ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಶಿಕ್ಷಣ ಇಲಾಖೆಗೆ ಸೇರಿದ ಆಸ್ತಿಯನ್ನು ರಕ್ಷಿಸಲು ಯಾವುದೇ ಕ್ರಮವಾಗಿಲ್ಲ ಎಂಬ ದೂರು ಕೇಳಿಬಂದಿದೆ.

    ಆನ್​ಲೈನ್​ನಲ್ಲಿ ದಾಖಲಾತಿ: ಅರಣ್ಯ ಜಾಗದಲ್ಲಿರುವ ಶಾಲೆಗಳ ಮಾಹಿತಿಯನ್ನು ಆನ್​ಲೈನ್​ನಲ್ಲಿ ದಾಖಲಿಸುವಂತೆ ಡಿಡಿಪಿಐ ಕಚೇರಿಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 7 ಶಾಲೆಗಳು ಅರಣ್ಯ ಪ್ರದೇಶದಲ್ಲಿವೆ. ಭಟ್ಕಳದಲ್ಲಿ 4, ಹೊನ್ನಾವರದಲ್ಲಿ 2 ಹಾಗೂ ಅಂಕೋಲಾದಲ್ಲಿ ಒಂದು ಶಾಲೆ ಅರಣ್ಯ ಜಾಗದಲ್ಲಿದ್ದು, ಅನುಸೂಚಿತ ಬುಡಕಟ್ಟು ಮತ್ತು ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯ್ದೆಯಡಿ ಸಾಮೂಹಿಕ ಹಕ್ಕು ನೀಡಬೇಕು ಎಂದು ಶಿಕ್ಷಣ ಇಲಾಖೆ ಮನವಿ ಮಾಡಿದೆ. ಎಲ್ಲ ಶಾಲೆಗಳ ದಾಖಲೆಗಳನ್ನು ಆನ್​ಲೈನ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ ಎಂದು ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಎನ್.ಜಿ.ನಾಯ್ಕ ತಿಳಿಸಿದ್ದಾರೆ.

    ಬಂದ್ ಆದ ಸರ್ಕಾರಿ ಶಾಲೆಯ ಪೀಠೋಪಕರಣ ಹಾಗೂ ದಾಖಲೆಗಳನ್ನು ಸಮೀಪದ ಶಾಲೆಗೆ ಹಸ್ತಾಂತರಿಸಬೇಕು. ಕಟ್ಟಡ ಮತ್ತು ಜಾಗವನ್ನು ಸಂಬಂಧಪಟ್ಟ ಗ್ರಾಪಂಗೆ ಹಸ್ತಾಂತರಿಸಬೇಕು ಎಂಬ ನಿಯಮವಿದೆ. ನಮ್ಮಲ್ಲಿ ಬಂದ್ ಆಗಿರುವ ಶಾಲೆಯ ಜಾಗ ಹಸ್ತಾಂತರವಾಗಿದೆಯೇ ಎಂದು ಪರಿಶೀಲಿಸಲಾಗುವುದು. ಶಾಲೆಗಳ ಆಸ್ತಿಯ ವಹಿಯನ್ನು ಆಯಾ ಬಿಇಒ ಕಚೇರಿಗಳಲ್ಲಿ ನಿರ್ವಹಿಸಲಾಗಿದೆ. ಜಾಗ ಒತ್ತುವರಿಯಾಗಿದ್ದರೆ ಮಾಹಿತಿ ಪಡೆದು ತೆರವುಗೊಳಿಸಲಾಗುವುದು. | ಹರೀಶ ಗಾಂವಕರ್ ಡಿಡಿಪಿಐ, ಕಾರವಾರ ಶೈಕ್ಷಣಿಕ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts