More

    ಜಿಲ್ಲೆಯಾದ್ಯಂತ ವರುಣನ ಆರ್ಭಟ

    ಹಾವೇರಿ: ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿಯಿಂದ ಬುಧವಾರ ಸಂಜೆಯವರೆಗೂ ಆಗಾಗ್ಗೆ ಬಿರುಸಿನ ಮಳೆಯಾಗಿದ್ದು, ಒಂದೇ ದಿನದ ಮಳೆಗೆ ಜನತೆ ನಲುಗುವಂತಾಗಿದ್ದು, ವಾತಾವರಣದಲ್ಲಿ ತಂಪು ಮೂಡಿದೆ.

    ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಆರಂಭಗೊಂಡ ಸಮಯದಿಂದಲೂ ಇಷ್ಟು ದೊಡ್ಡ ಪ್ರಮಾಣದ ಮಳೆ ಆಗಿರಲಿಲ್ಲ. ಆಗಾಗ್ಗೆ ಜಿಟಿಜಿಟಿ ಮಳೆಯೇ ಹೆಚ್ಚಾಗಿ ಸುರಿಯುತ್ತಿತ್ತು. ಬುಧವಾರ ಮಾತ್ರ ಬಿಟ್ಟು ಬಿಡದೇ ಮಳೆ ಸುರಿದು ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ.

    ಮಳೆಯ ವಿವರ: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದವರೆಗೆ 215.3 ಮಿಮೀ ಮಳೆಯಾಗಿದೆ. ಶಿಗ್ಗಾಂವಿ ತಾಲೂಕಿನಲ್ಲಿ ಅತಿಹೆಚ್ಚು 43.2, ಹಿರೇಕೆರೂರ 41.6, ಹಾನಗಲ್ಲ 33, ಸವಣೂರ 32.7, ಹಾವೇರಿ 25, ಬ್ಯಾಡಗಿ 20.4, ರಾಣೆಬೆನ್ನೂರ 19.4 ಮಿಮೀ ಮಳೆಯಾಗಿದೆ. ಸತತ ಜಿಟಿಜಿಟಿ ಮಳೆಯಿಂದ ಈವರೆಗೆ ಯಾವುದೇ ಮನೆ, ಜೀವಹಾನಿಯಾದ ವರದಿಯಾಗಿಲ್ಲ.

    ಅಕ್ಕಪಕ್ಕದ ಜಿಲ್ಲೆಯಲ್ಲಿಯೂ ಕಳೆದ ಒಂದು ವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿನ ತುಂಗಭದ್ರಾ, ವರದಾ ನದಿಗಳಲ್ಲಿಯೂ ನೀರಿನ ಹರಿವು ಹೆಚ್ಚಾಗಿದೆ. ಇದೀಗ ಜಿಲ್ಲೆಯಲ್ಲಿಯೂ ಉತ್ತಮ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿನ ನದಿಗಳಲ್ಲಿನ ನೀರಿನ ಹರಿವು ಮತ್ತಷ್ಟು ಹೆಚ್ಚಾಗಿದೆ. ತುಂಗಭದ್ರಾ ಹಾಗೂ ವರದಾ ನದಿಗಳು ಮೈದುಂಬಿ ಹರಿಯುತ್ತಿವೆ. ವರದಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ನಾಗನೂರು-ಕೂಡಲ, ಕಳಸೂರ-ದೇವಗಿರಿ ಸಂಪರ್ಕದ ಬಾಂದಾರ ಮುಳುಗಿ ಸಂಚಾರಕ್ಕೆ ವ್ಯತ್ಯಯವಾಗಿದೆ. ಇದರಿಂದಾಗಿ ಈ ಮಾರ್ಗದಿಂದ ಹಾವೇರಿಗೆ ಬರುವ ಮಾರ್ಗ ಸ್ಥಗಿತಗೊಂಡಂತಾಗಿದೆ.

    ಕೂಡಲ-ನಾಗನೂರ ಬಾಂದಾರ ಹಾನಗಲ್ಲ ಹಾಗೂ ಹಾವೇರಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಒಳದಾರಿಯೂ ಆಗಿದೆ. ಅದು ಮುಳುಗಿರುವುದು ಈ ಭಾಗದ ಸಾವಿರಾರು ಜನರ ಓಡಾಟಕ್ಕೂ ತೊಂದರೆಯಾಗಿದೆ. ಹಾನಗಲ್ಲ ಕಡೆಯಿಂದ ಬರುವ ಸ್ವಂತ ವಾಹನ ಹೊಂದಿರುವ ಪ್ರಯಾಣಿಕರು, ಕಲ್ಲಾಪುರ, ಹರವಿ, ಕೂಡಲ, ನರೇಗಲ್ಲ, ಮಾರನಬೀಡ, ಬೊಮ್ಮನಹಳ್ಳಿ, ಹರನಗಿರಿ ಗ್ರಾಮದಿಂದ ಈ ಮಾರ್ಗವಾಗಿ ಜಿಲ್ಲಾ ಕೇಂದ್ರ ಹಾವೇರಿಗೆ ಆಗಮಿಸುತ್ತಾರೆ. ಈಗ ಸುತ್ತು ಹಾಕಿ ವರ್ದಿ, ಸಂಗೂರ ಮಾರ್ಗವಾಗಿ ಗ್ರಾಮಸ್ಥರು ಹಾವೇರಿಗೆ ಬರುವಂತಾಗಿದೆ. ಈ ಬಾಂದಾರಿನ ಆಚೆಗೂ ಉಭಯ ಗ್ರಾಮಸ್ಥರ ಜಮೀನುಗಳಿವೆ. ಹೊಳೆಗೆ ನೀರು ಬಂದರೆ ಹೊಲಕ್ಕೆ ಹೋಗಲು ದಾರಿ ಇಲ್ಲದೇ ಹೊಲದ ಕೆಲಸವೂ ನಿಂತು ಬಿಡುತ್ತದೆ. ಏನಾದರೂ ತುರ್ತು ಇದ್ದಾಗ ಸುತ್ತುವರಿದು ಬಂದು ಕೆಲಸ ಮಾಡಬೇಕಾದ ಸ್ಥಿತಿ ನಿರ್ವಣವಾಗಿದೆ.

    ತುಂಗಭದ್ರಾ, ಧರ್ವ ನದಿಯಲ್ಲಿಯೂ ನೀರಿನ ಹರಿವು ಹೆಚ್ಚುತ್ತಿದೆ. ಮಳೆ ಹೀಗೆಯೇ ಮುಂದುವರಿದರೆ ಜಿಲ್ಲೆಯಲ್ಲಿನ ನದಿಗಳಿಗೂ ಪ್ರವಾಹ ಭೀತಿ ಎದುರಾಗುವ ಸಾಧ್ಯತೆಗಳಿವೆ.

    ರೈತರಿಗೂ ಚಿಂತೆ… ಮುಂಗಾರು ಹಂಗಾಮು ಬಿತ್ತನೆಗೆ ಸಕಾಲದಲ್ಲಿ ಮಳೆಯಾಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಈ ಬಾರಿ ಬಿತ್ತನೆಯಾಗಿದೆ. ಇದೀಗ ಸತತವಾಗಿ ಜಿಟಿಜಿಟಿ ಮಳೆಯಾಗುತ್ತಿರುವುದರಿಂದ ಹುಟ್ಟಿದ ಬೆಳೆಗಳು ಹೆಚ್ಚಿನ ತೇವಾಂಶದಿಂದ ಬೆಳವಣಿಗೆ ಕಾಣುತ್ತಿಲ್ಲ. ಅಲ್ಲದೆ, ಸತತ ಮಳೆಯಿಂದ ಬೆಳೆಗಗಳಿಗೆ ವಿವಿಧ ರೋಗಬಾಧೆಯು ಕಾಡುವ ಆತಂಕ ರೈತರಲ್ಲಿ ಮೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts