More

    ಜಿಲ್ಲೆಯಲ್ಲಿ 51 ಜನರಿಗೆ ಡೆಂಘೆ ದೃಢ

    ಹಾವೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೊನಾ ಮಹಾಮಾರಿ ಹೆಚ್ಚುತ್ತಿದೆ. ಇನ್ನೊಂದೆಡೆ ಸಾಂಕ್ರಾಮಿಕ ರೋಗಗಳ ಹಾವಳಿಯೂ ಹೆಚ್ಚಾಗಿದ್ದು, ಈಗಾಗಲೇ 51 ಡೆಂಘೆ ಪ್ರಕರಣಗಳು ದೃಢಪಟ್ಟಿವೆ.

    ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಗಾಬರಿ ಹುಟ್ಟಿಸುತ್ತಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರುಗತಿಯಲ್ಲಿಯೇ ಇದ್ದು, ನಿತ್ಯ ಹತ್ತಾರು ಹೊಸ ಪ್ರಕರಣಗಳು ದೃಢಪಡುತ್ತಿವೆ. ಕರೊನಾ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳು ಕೋವಿಡ್ ಆಸ್ಪತ್ರೆಗಳಾಗಿ ಮಾರ್ಪಟ್ಟಿವೆ. ಪ್ರತಿವರ್ಷ ಮುಂಗಾರಿನಲ್ಲಿ ಜನರ ಆರೋಗ್ಯ ಕಾಡುವ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವುದು ಆತಂಕ ಹೆಚ್ಚಿಸಿದೆ. ಕರೊನಾದಿಂದ ಬಚಾವ್ ಆದರೂ ಈ ಸಾಂಕ್ರಾಮಿಕ ರೋಗಗಳಿಂದ ಅನೇಕರು ಬಳಲುವಂತಾಗಿದೆ.

    ಸದ್ಯ ಜಿಲ್ಲೆಯಲ್ಲಿ ಡೆಂಘೆ ಹಾಗೂ ಚಿಕೂನ್​ಗುನ್ಯಾ ಹಾವಳಿಯೂ ಜೋರಾಗಿದೆ. ಇದಲ್ಲದೇ ಅತಿಸಾರ, ವಿಷಮಶೀತ ಜ್ವರ, ಕರುಳುಬೇನೆ, ಮಲೇರಿಯಾ ರೋಗಗಳೂ ವ್ಯಾಪಿಸುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿಗಳ ಸ್ವಚ್ಛತೆ, ತ್ಯಾಜ್ಯ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಗ್ರಾಪಂಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಇದು ರೋಗ ಭೀತಿ ಹೆಚ್ಚಲು ಕಾರಣವಾಗುತ್ತಿದೆ.

    2 ತಿಂಗಳಲ್ಲಿ 51 ಡೆಂಘೆ ಪ್ರಕರಣ: ಜೂನ್ ಮತ್ತು ಜುಲೈನಲ್ಲೇ ಸಾಂಕ್ರಾಮಿಕ ರೋಗಗಳು ಹರಡುವುದು ಸಾಮಾನ್ಯ. ನೂರಾರು ಜನರು ಶಂಕಿತ ಡೆಂಘೆ ಜ್ವರದಿಂದ ಬಳಲುತ್ತಿದ್ದಾರೆ. ಇದುವರೆಗೆ 51 ಜನರಲ್ಲಿ ಡೆಂಘೆ ಇರುವುದು ದೃಢಪಟ್ಟಿದೆ. ಹಾವೇರಿ ತಾಲೂಕಿನಲ್ಲಿ 14, ಬ್ಯಾಡಗಿ 6, ಶಿಗ್ಗಾಂವಿ 11, ರಾಣೆಬೆನ್ನೂರ 7, ಹಿರೇಕೆರೂರ 4, ರಟ್ಟಿಹಳ್ಳಿ 2, ಸವಣೂರ 3, ಹಾನಗಲ್ಲ 4 ಸೇರಿ 51 ಡೆಂಘೆ ಪ್ರಕರಣಗಳು ಖಚಿತವಾಗಿವೆ. 70ಕ್ಕೂ ಹೆಚ್ಚು ಶಂಕಿತ ಡೆಂಘೆ ಪ್ರಕರಣಗಳಿದ್ದು, ಲ್ಯಾಬ್ ವರದಿ ಬರಬೇಕಿದೆ.

    ಡೆಂಘೆ ಜ್ವರ ಹತೋಟಿಗೆ ಆರೋಗ್ಯ ಇಲಾಖೆ ವಹಿಸುತ್ತಿರುವ ಮುನ್ನೆಚ್ಚರಿಕೆ ಕ್ರಮ ಸಾಲುತ್ತಿಲ್ಲ ಎಂಬ ಆರೋಪವಿದೆ. ಜಿಲ್ಲಾದ್ಯಂತ ಶಂಕಿತ ಜ್ವರ ವ್ಯಾಪಿಸುತ್ತಿದ್ದು, ಹಲವು ಗ್ರಾಮಗಳಲ್ಲಿ ತೀವ್ರಗೊಂಡಿದೆ. ತಕ್ಷಣ ಆರೋಗ್ಯ ಇಲಾಖೆಯಿಂದ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕರೊನಾ ನಿಯಂತ್ರಣಕ್ಕೆ ಆರೋಗ್ಯ ಸಿಬ್ಬಂದಿ ಗಮನ ಹರಿಸುತ್ತಿರುವ ರೀತಿಯಲ್ಲಿ ಇತರ ಮಾರಣಾಂತಿಕ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೂ ಆದ್ಯತೆ ನೀಡಬೇಕಿದೆ.

    ಚಿಕೂನ್​ಗುನ್ಯಾಕ್ಕೆ ಹೈರಾಣು: ಈ ಬಾರಿ ಮುಂಗಾರು ತಡವಾಗಿ ಆರಂಭವಾಗಿರುವುದರಿಂದ ಸಾಂಕ್ರಾಮಿಕ ರೋಗಗಳ ಹಾವಳಿಯೂ ಈಗ ಆರಂಭವಾಗಿದೆ. ಮಳೆಗಾಲ ಶುರುವಾಗುತ್ತಿದ್ದಂತೆ ಚಿಕೂನ್​ಗುನ್ಯಾಕ್ಕೆ ಅನೇಕ ಗ್ರಾಮಗಳಲ್ಲಿ ಜನರು ಹೈರಾಣಾಗಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಚಿಕೂನ್​ಗುನ್ಯಾ ಹೆಚ್ಚುತ್ತಿದೆ. ಇದುವರೆಗೆ 12 ಪ್ರಕರಣ ದೃಢಪಟ್ಟಿದ್ದು, 27 ಶಂಕಿತ ಚಿಕೂನ್​ಗುನ್ಯಾ ಪ್ರಕರಣಗಳಿವೆ. ಹಲವು ಗ್ರಾಮಗಳಲ್ಲಿ ಕಾಯಿಲೆ ಉಲ್ಭಣಗೊಂಡಿದೆ. ಕೃಷಿ ಕಾರ್ಯ ಮಾಡಲಾಗದೇ ಅನೇಕ ರೈತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೊನಾ ಭಯದಲ್ಲಿ ಅನೇಕರು ಆಸ್ಪತ್ರೆಗೂ ಬಾರದೇ ನೋವು ಅನುಭವಿಸುತ್ತಿದ್ದಾರೆ.

    ಶೀತ, ಜ್ವರ: ಕಲುಷಿತ ನೀರು ಸೇವನೆ ಮುಂತಾದ ಕಾರಣದಿಂದ ಜಿಲ್ಲೆಯಲ್ಲಿ ಕರುಳು ಬೇನೆ ರೋಗವೂ ವ್ಯಾಪಿಸಿದೆ. ಮಲೇರಿಯಾ ನಾಲ್ಕು ಪ್ರಕರಣ ದೃಢಪಟ್ಟಿದ್ದು, ಶೀತ, ಜ್ವರ, ಕರಳುಬೇನೆ ರೋಗದಿಂದ ಅನೇಕರು ಬಳಲುತ್ತಿದ್ದಾರೆ. ಕಲುಷಿತ ನೀರು ಸೇವನೆ, ಸೊಳ್ಳೆ ಕಡಿತದಿಂದ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಅತಿಸಾರದಿಂದ ಅನೇಕರು ತೊಂದರೆ ಅನುಭವಿಸಿದ್ದಾರೆ. ದಡಾರ, ಕರುಳು ಬೇನೆಯಿಂದ ಅನೇಕರು ಬಳಲುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts