More

    ಜಿಲ್ಲೆಯಲ್ಲಿ 158 ಕೋಟಿ ರೂ. ಮೌಲ್ಯದ ಆಸ್ತಿ ನಷ್ಟ

    ಗದಗ: ಪ್ರವಾಹದಿಂದ ರಾಜ್ಯದಲ್ಲಿ ಮನೆಗಳು, ತೋಟಗಾರಿಕೆ ಮತ್ತು ಕೃಷಿ ಬೆಳೆ ಹಾನಿ ಸೇರಿ ಅಂದಾಜು 8071 ಕೋಟಿ ರೂ. ಮೌಲ್ಯದ ಆಸ್ತಿ ನಷ್ಟವಾಗಿದೆ. 628 ಕೋಟಿ ರೂ. ಅನುದಾನದ ಪೈಕಿ ಮೊದಲ ಕಂತು ರಾಜ್ಯಕ್ಕೆ ಬಂದಿದೆ. 2ನೇ ಕಂತು ಶೀಘ್ರ ಬರಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

    ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗದಗ ಜಿಲ್ಲೆಯಲ್ಲಿ 158 ಕೋಟಿ ರೂ. ಮೌಲ್ಯದ ಆಸ್ತಿ ನಷ್ಟವಾಗಿದೆ. 12.82 ಕೋಟಿ ರೂ. ಅನುದಾನ ಜಿಲ್ಲಾಧಿಕಾರಿ ಬಳಿ ಇದ್ದು, ಇದರಲ್ಲಿ 7.9 ಕೋಟಿ ರೂ. ಬಳಕೆ ಮಾಡಲಾಗಿದೆ ಎಂದರು.

    ಪ್ರವಾಹ ಪೀಡಿತ ಪ್ರದೇಶಗಳಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕೆಂದು ಕೋರಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದಾರೆ. ಕೇಂದ್ರ ಸರ್ಕಾರ ಮುಖ್ಯಮಂತ್ರಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಹೆಚ್ಚುವರಿ ಹಣ ನೀಡಲಿದೆ ಎಂಬ ಭರವಸೆ ಇದೆ ಎಂದರು.

    ಪ್ರತಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ನೀಡಬೇಕು. ಈ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಬೇಕು ಎಂದು ಅವರು ಹೇಳಿದರು.

    ಸಚಿವ ಸಿ.ಸಿ. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ ಮತ್ತಿತರರು ಇದ್ದರು.

    ಮನೆ ಬಾಗಿಲಿಗೆ ಪಿಂಚಣಿ ಯೋಜನೆ

    ಮನೆ ಬಾಗಿಲಿಗೆ ಪಿಂಚಣಿ ಎಂಬ ವಿನೂತನ ಯೋಜನೆ ಜಾರಿಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಸಚಿವ ಆರ್.ಅಶೋಕ ಹೇಳಿದರು. 60 ವರ್ಷ ಪೂರೈಸಿದ ಪ್ರತಿ ನಾಗರಿಕರು ಸೇರಿದಂತೆ ಮಾಸಿಕ ಪಿಂಚಣಿ ಪಡೆಯುವವರ ಖಾತೆಗೆ ಆರ್​ಟಿಜಿಎಸ್ ಮೂಲಕ ಪಿಂಚಣಿ ಹಣ ಜಮೆ ಮಾಡುವಂತಹ ಮನೆ ಬಾಗಿಲಿಗೆ ಪಿಂಚಣಿ ಎಂಬ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದರಿಂದ ಬೋಗಸ್ ಪಿಂಚಣಿ ಪಡೆಯುವುದನ್ನು ತಡೆಯಲು ಸಾಧ್ಯವಾಗಲಿದೆ ಎಂದರು.

    ವೃದ್ಧಾಪ್ಯ, ವಿಧವಾ ವೇತನ ಸೇರಿ ವಿವಿಧ ಮಾಸಿಕ ವೇತನಕ್ಕಾಗಿ ಸರ್ಕಾರ ಪ್ರತಿ ತಿಂಗಳು 7060 ಕೋಟಿ ರೂ. ಹಣ ನೀಡುತ್ತಿದೆ. ಸದ್ಯ 600-700 ಕೋಟಿ ರೂ. ಬೋಗಸ್ ಪಿಂಚಣಿದಾರರ ಪಾಲಾಗುತ್ತಿದೆ ಎಂಬ ಮಾಹಿತಿ ಇದ್ದು, ಇದನ್ನು ತಡೆಯಲು ಆಧಾರ್ ಕಾರ್ಡ್ ಆಧರಿಸಿ ಆರ್​ಟಿಜಿಎಸ್ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಅವರು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts