More

    ಜಿಲ್ಲೆಯಲ್ಲಿ 14ಕ್ಕೇರಿದ ಕರೊನಾ ಪಾಸಿಟಿವ್ ಸಂಖ್ಯೆ

    ಹಾವೇರಿ: ಮಹಾರಾಷ್ಟ್ರದಿಂದ ಬಸ್​ನಲ್ಲಿ ಜಿಲ್ಲೆಗೆ ಬಂದಿದ್ದ 11 ವರ್ಷದ ಬಾಲಕಿ, 13 ಹಾಗೂ 15 ವರ್ಷದ ಬಾಲಕರಿಬ್ಬರು ಸೇರಿ ನಾಲ್ವರಲ್ಲಿ ಕರೊನಾ ಪಾಸಿಟಿವ್ ಶನಿವಾರ ದೃಢಪಟ್ಟಿದ್ದು, ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 14ಕ್ಕೇರಿದೆ.

    ರಾಣೆಬೆನ್ನೂರ ತಾಲೂಕು ತುಮ್ಮಿನಕಟ್ಟಿ ಗ್ರಾಮದ ನಿವಾಸಿಗಳಾದ 11 ವರ್ಷದ ಬಾಲಕಿ, 13 ವರ್ಷದ ಬಾಲಕ, 15 ವರ್ಷದ ಬಾಲಕ ಹಾಗೂ 19 ವರ್ಷದ ಯುವಕ ಮೇ 17ರಂದು ಸೇವಾ ಸಿಂಧು ಆಪ್​ನಲ್ಲಿ ನೋಂದಣಿ ಮಾಡಿ ಮಹಾರಾಷ್ಟ್ರದಿಂದ 2 ಬಸ್​ನಲ್ಲಿ ಜಿಲ್ಲೆಗೆ ಆಗಮಿಸಿದ್ದರು. ಈ ಬಸ್​ಗಳಲ್ಲಿ ಒಟ್ಟು 89 ಜನ ಪ್ರಯಾಣಿಸಿ ಜಿಲ್ಲೆಗೆ ಬಂದಿದ್ದರು. ಅದರಲ್ಲಿ ಶನಿವಾರ ಪಾಸಿಟಿವ್ ಬಂದಿರುವ ನಾಲ್ವರು ಸೇರಿ ಒಟ್ಟು 41 ಜನರನ್ನು ರಾಣೆಬೆನ್ನೂರ ಈಶ್ವರ ನಗರದಲ್ಲಿರುವ ದೇವರಾಜ ಅರಸು ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

    89ರ ಪೈಕಿ 8 ಜನರಿಗೆ ಸೋಂಕು ದೃಢ: ಮಹಾರಾಷ್ಟ್ರದಿಂದ ಬಂದ 89 ಜನರನ್ನು ಮೂರು ತಂಡಗಳನ್ನಾಗಿ ವಿಂಗಡಿಸಿ ಮಾಕನೂರ ಮುರಾರ್ಜಿ ವಸತಿ ಶಾಲೆಯಲ್ಲಿ 29, ಮಾಕನೂರ ಗಿರಿಜನ ಆಶ್ರಮ ಶಾಲೆಯಲ್ಲಿ 19, ರಾಣೆಬೆನ್ನೂರ ಈಶ್ವರ ನಗರದ ದೇವರಾಜ ಅರಸು ವಸತಿ ನಿಲಯದಲ್ಲಿ 41 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ ಈಗಾಗಲೇ ಮೇ 28ರಂದು ಮಾಕನೂರ ಮುರಾರ್ಜಿ ವಸತಿ ಶಾಲೆಯಲ್ಲಿದ್ದ 29 ಜನರ ಪೈಕಿ ನಾಲ್ವರಿಗೆ ಸೋಂಕು ದೃಢಪಟ್ಟಿತ್ತು. ಶನಿವಾರ ರಾಣೆಬೆನ್ನೂರ ಈಶ್ವರ ನಗರದ ದೇವರಾಜ ಅರಸು ವಸತಿ ನಿಲಯದಲ್ಲಿ ಕ್ವಾರಂಟೈನ್​ನಲ್ಲಿದ್ದ 41 ಜನರ ಪೈಕಿ ನಾಲ್ವರಿಗೆ ಸೋಂಕು ದೃಢಪಟ್ಟಿದೆ. ಮಹಾರಾಷ್ಟದಿಂದ ಬಂದ ಒಟ್ಟು 89 ಜನರಲ್ಲಿ ಈಗಾಗಲೇ 8 ಜನರಲ್ಲಿ ಸೋಂಕು ಪತ್ತೆಯಾಗಿದೆ. 89 ಜನರ ಗಂಟಲ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ 67 ಜನರ ಪರೀಕ್ಷಾ ವರದಿ ಬಂದಿದೆ. 8 ಪಾಸಿಟಿವ್ ಆಗಿದ್ದರೆ, 59 ನೆಗೆಟಿವ್ ಬಂದಿದೆ. ಇನ್ನೂ 22 ಜನರ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪಾಂಡಪಾಡದ ಕೊಳಚೆ ಪ್ರದೇಶವಾದ ಸಾಯಿಮಿತ್ರ ಮಂಡಲಾ ಚಾಳದಲ್ಲಿ ಇವರು ವಾಸಿಸುತ್ತಿದ್ದರು. ನಿತ್ಯ ಹೇರ್​ಪಿನ್, ಪ್ಲಾಸ್ಟಿಕ್ ಇತರೆ ಸಣ್ಣಪುಟ್ಟ ವಸ್ತುಗಳನ್ನು ಸ್ಥಳೀಯವಾಗಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಅದಕ್ಕಾಗಿ ರಾಣೆಬೆನ್ನೂರ ತಾಲೂಕು ತುಮ್ಮಿನಕಟ್ಟಿ ಗ್ರಾಮದಿಂದ ಇವರೆಲ್ಲ ವಲಸೆ ಹೋಗಿದ್ದರು. ಮಕ್ಕಳನ್ನು ಅಲ್ಲಿಯೇ ಶಾಲೆಗೆ ಸೇರಿದ್ದರು. ಲಾಕ್​ಡೌನ್ ಸಮಯದಲ್ಲಿ ಅಲ್ಲಿಯೇ ಇದ್ದ ಇವರಿಗೆ ಉದ್ಯೋಗವಿಲ್ಲದಂತಾಗಿ, ನಂತರ ಲಾಕ್​ಡೌನ್ ಸಡಿಲಿಕೆ ನಂತರ ಸೇವಾ ಸಿಂಧು ಆಪ್​ನ ಮೂಲಕ ಪಾಸ್ ಪಡೆದು ಮೇ 17ರಂದು 2 ಬಸ್​ಗಳಲ್ಲಿ ಜಿಲ್ಲೆಗೆ ಮರಳಿದ್ದರು.

    ನಾಲ್ವರಿಗೆ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಣೆಬೆನ್ನೂರ ಈಶ್ವರ ನಗರದಲ್ಲಿರುವ ದೇವರಾಜ ಅರಸು ವಸತಿ ಶಾಲೆಯ ಸುತ್ತಲಿನ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು, ಈಶ್ವರ ನಗರವನ್ನು ಬಫರ್ ಜೋನ್ ಎಂದು ಘೊಷಿಸಲಾಗಿದೆ. ರಾಣೆಬೆನ್ನೂರ ತಹಸೀಲ್ದಾರ್ ಅವರನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಆದೇಶಿಸಿದ್ದಾರೆ.

    ಕಾಡುತ್ತಿದೆ ಮಹಾರಾಷ್ಟ್ರ ನಂಟು

    ಲಾಕ್​ಡೌನ್ 3.0 ವರೆಗೆ ಗ್ರೀನ್ ಜೋನ್​ನಲ್ಲಿಯೇ ಇದ್ದ ಜಿಲ್ಲೆಗೆ ಮಹಾರಾಷ್ಟ್ರದ ಮುಂಬೈನಿಂದ ಬಂದವರಿಬ್ಬರು ಸೋಂಕು ತಂದರು. ಅವರ ಸಂಪರ್ಕಕ್ಕೆ ಬಂದ ಸವಣೂರಿನ ಮಹಿಳೆಯೊಬ್ಬರಿಗೆ ಹಾಗೂ ಮುಂಬೈನ ನಂಟು ಹೊಂದಿದ್ದ ಮತ್ತೆ ಮೂವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಮೇ 28ರಂದು ಮಹಾರಾಷ್ಟ್ರದಿಂದ ಬಂದ ನಾಲ್ವರಲ್ಲಿ ಸೋಂಕು ದೃಢಪಟ್ಟಿತ್ತು. ಶನಿವಾರ ಮತ್ತೆ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ. ಅವರೂ ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ. ಹೀಗಾಗಿ ಜಿಲ್ಲೆಯನ್ನು ಮಹಾರಾಷ್ಟ್ರ ರಾಜ್ಯದ ನಂಟು ಬಿಟ್ಟು ಬಿಡದೆ ಕಾಡುತ್ತಿದೆ.

    11 ಮಾತ್ರ ಸಕ್ರಿಯ

    ಜಿಲ್ಲೆಯಲ್ಲಿ ಈವರೆಗೆ 14 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಈಗಾಗಲೇ ಮೂವರು ಸೋಂಕಿನಿಂದ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಶನಿವಾರ ದೃಢಪಟ್ಟಿರುವ ನಾಲ್ವರು ಸೇರಿ ಒಟ್ಟು 11 ಜನರು ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಿರುವ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts