More

    ಜಿಲ್ಲೆಯಲ್ಲಿ 104 ಮದ್ಯದಂಗಡಿ ಓಪನ್

    ಹಾವೇರಿ: ಜಿಲ್ಲೆಯ 104 ಸಿಎಲ್-2 ಹಾಗೂ ಎಂಎಸ್​ಐಎಲ್ ಮದ್ಯದಂಗಡಿಗಳಲ್ಲಿ ಸೋಮವಾರ ಬಂದೋಬಸ್ತ್​ನೊಂದಿಗೆ ಮದ್ಯ ವ್ಯಾಪಾರ ಆರಂಭಗೊಂಡಿತು.

    ಮಾ. 24ರಿಂದ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಮದ್ಯ ಮಾರಾಟ ಸ್ಥಗಿತಗೊಂಡಿತ್ತು. ಅಲ್ಲಲ್ಲಿ ದುಬಾರಿ ಬೆಲೆ ಕೊಟ್ಟು ಕೆಲವರು ಮದ್ಯ ಖರೀದಿಸುತ್ತಿದ್ದರು. ಬಹುತೇಕ ಮದ್ಯ ವ್ಯಸನಿಗಳು ಮದ್ಯದ ಅಂಗಡಿಗಳು ಯಾವಾಗ ತೆರೆಯುತ್ತವೆ ಎಂದು ಕಾಯ್ದು ಕುಳಿತುಕೊಳ್ಳುವಂತಾಗಿತ್ತು. ಸರ್ಕಾರ ಸೋಮವಾರದಿಂದ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದರಿಂದ ಬೆಳಗ್ಗೆಯಿಂದಲೇ ಮದ್ಯದಂಗಡಿಗಳ ಮುಂದೆ ಸರದಿ ಕಂಡುಬಂತು. ನಿಯಮದ ಪ್ರಕಾರ ಅಂಗಡಿಗಳನ್ನು ಬೆಳಗ್ಗೆ 9ಕ್ಕೆ ತೆರೆಯಲಾಯಿತಾದರೂ ಅದಕ್ಕೂ ಮುನ್ನವೇ ಅಂಗಡಿಗಳ ಮುಂದೆ ಹಾಕಲಾಗಿದ್ದ ಬ್ಯಾರಿಕೇಡ್​ಗಳಲ್ಲಿ ಜನರು ಸರದಿಯಲ್ಲಿ ನಿಂತಿದ್ದರು. ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಂಡು ನಿಂತಿದ್ದ ಗ್ರಾಹಕರಿಗೆ ಅಂಗಡಿಯವರು ಸ್ಯಾನಿಟೈಜರ್​ನಿಂದ ಕೈ ತೊಳೆದು ಒಳಗೆ ಬಿಟ್ಟರು. ಮುಂಜಾಗ್ರತಾ ಕ್ರಮವಾಗಿ ಎಲ್ಲ ಅಂಗಡಿಗಳ ಎದುರು ಪೊಲೀಸ್ ಬಂದೋಬಸ್ತ್ ಸಹ ಏರ್ಪಡಿಸಲಾಗಿತ್ತು. ಬೆಳಗ್ಗೆ 9ಗಂಟೆಯಿಂದ ಸಂಜೆ 7ಗಂಟೆವರೆಗೂ ಮದ್ಯ ವ್ಯಾಪಾರ ಸರಾಗವಾಗಿ ನಡೆಯಿತು. ಸಂಜೆ 5ಗಂಟೆಯಿಂದ ಸರದಿ ಸಾಲು ಹೆಚ್ಚಾಗಿ ಕೆಲವು ಅಂಗಡಿಗಳ ಎದುರು ಸಾಮಾಜಿಕ ಅಂತರ ಕಣ್ಮರೆಯಾಗಿದ್ದು ಕಂಡುಬಂತು. ತಿಂಗಳುಗಟ್ಟಲೆ ಮದ್ಯವಿಲ್ಲದೇ ಪರದಾಡಿದ್ದ ಮದ್ಯಪ್ರಿಯರು ಕೈಗೆ ಮದ್ಯ ಸಿಗುತ್ತಿದ್ದಂತೆ ಹಿರಿಹಿರಿ ಹಿಗ್ಗಿದರು.

    ಭರ್ಜರಿ ವ್ಯಾಪಾರ: ಜಿಲ್ಲೆಯಲ್ಲಿ ಒಟ್ಟು 104 ಮದ್ಯದ ಅಂಗಡಿಗಳು ತೆರೆದಿದ್ದು ವ್ಯಾಪಾರ ಭರಪೂರಾಗಿಯೇ ನಡೆಯಿತು. ಒಬ್ಬರಿಗೆ 2ಲೀಟರ್​ನಷ್ಟು ಮದ್ಯ ಖರೀದಿಸಲು ಅವಕಾಶ ನೀಡಲಾಗಿತ್ತಾದರೂ ಕೆಲ ಅಂಗಡಿಯವರು ಎಲ್ಲರಿಗೂ ಸಿಗಬೇಕು ಎಂದು ಕೇಳಿದ್ದಕ್ಕಿಂತ ಕಡಿಮೆ ಕೊಟ್ಟು ಕಳಿಸಿದರು. ಬಹುತೇಕ ಅಂಗಡಿಗಳಲ್ಲಿನ ಸ್ಟಾಕ್​ಗಳೆಲ್ಲಾ ಸೋಮವಾರ ಸಂಜೆಯೊಳಗೆ ಖಾಲಿಯಾಗಿರುವುದು ಕಂಡುಬಂತು.

    ಮದ್ಯ ಖರೀದಿಗೆ ಜನಜಂಗುಳಿ

    ಕರೊನಾ ವೈರಸ್ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್​ಡೌನ್​ನಿಂದ ಸ್ಥಗಿತಗೊಂಡಿದ್ದ ಮದ್ಯ ಮಾರಾಟ ಮತ್ತೆ ಆರಂಭಿಸಿದ ಹಿನ್ನೆಲೆಯಲ್ಲಿ ಮದ್ಯ ಪ್ರಿಯರು ರಾಣೆಬೆನ್ನೂರಲ್ಲಿ ಸರದಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದರು. ಆದರೆ ಹಲವೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನೇ ಮರೆತು ಬಿಟ್ಟರು.

    ನಗರದ ಪಿ.ಬಿ. ರಸ್ತೆಯಲ್ಲಿರುವ ಎಂಆರ್​ಪಿ ಪ್ಯಾಲೇಸ್ ಎದುರು ಮಾತ್ರ ಮದ್ಯ ಖಾಲಿ ಆಗಿ ಬಿಡುವುದೋ ಏನೋ ಎಂಬ ಆತಂಕದಿಂದ ಜನತೆ ಮುಗಿಬಿದ್ದು ಮದ್ಯ ಖರೀದಿಸಲು ಮುಂದಾದ ದೃಶ್ಯ ಕಂಡು ಬಂದಿತು. ಇನ್ನೂಳಿದಂತೆ ಎಂಎಸ್​ಐಎಲ್, ದೌಲತ್ ಬಜಾರ್, ಬಸ್ ನಿಲ್ದಾಣ ಹಿಂಭಾಗದಲ್ಲಿರುವ ಎಂಆರ್​ಪಿ ಬಾರ್​ಗಳ ಎದುರು ಜನತೆ ಸಾಲಾಗಿ ನಿಂತು ಮದ್ಯ ಖರೀದಿಸಿದರು.

    ಬಹುತೇಕ ಬಾರ್​ಗಳ ಎದುರು 500ಕ್ಕೂ ಅಧಿಕ ಮೀಟರ್​ನಷ್ಟು ಸಾಲುಗಟ್ಟಿ ನಿಂತು ಮದ್ಯ ಖರೀದಿಸುತ್ತಿರುವುದು ಕಂಡುಬಂದಿತು. ಮದ್ಯ ಖರೀದಿಸಲು ಬರುವವರಿಗೆ ಸ್ಯಾನಿಟೈಸರ್​ನಿಂದ ಕೈ ತೊಳೆದು ಒಳಗೆ ಬರುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಮದ್ಯದ ಅಭಾವ ಇರುವುದರಿಂದ ಒಬ್ಬರಿಗೆ ನಾಲ್ಕು ಬಾಟಲ್ ಮದ್ಯ ಹಾಗೂ 5 ಬಾಟಲ್ ಬಿಯರ್ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts