More

    ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕರೊನಾ ಸೋಂಕು

    ಗದಗ: ಗದಗ ನಗರದ ಎಸ್.ಎಂ.ಕೃಷ್ಣ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರು, ಒಬ್ಬ ಅಡುಗೆ ಸಿಬ್ಬಂದಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದ್ದರಿಂದ ಪಾಲಕರು ಕಳವಳಗೊಂಡಿದ್ದಾರೆ. ಕರೊನಾ ಮಹಾಮಾರಿ ನಿಧಾನವಾಗಿ ಜಿಲ್ಲೆಯಲ್ಲಿ ವ್ಯಾಪಕವಾಗತೊಡಗಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

    ಆರೋಗ್ಯ ಇಲಾಖೆ ಸಿಬ್ಬಂದಿ ಸೋಮವಾರ ಶಾಲೆಯಲ್ಲಿ ಪರೀಕ್ಷೆ ಮಾಡಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಶಾಲೆಯ ಶಿಕ್ಷಕಿಯೊಬ್ಬರು ನಿತ್ಯ ಧಾರವಾಡದಿಂದ ಗದಗಕ್ಕೆ ಪ್ರಯಾಣ ಮಾಡುತ್ತಿದ್ದಾರೆ. ಅವರಿಗೆ ಜ. 7ರಂದು ಕರೊನಾ ಸೋಂಕು ಕಾಣಸಿಕೊಂಡಿತ್ತು. ಹೀಗಾಗಿ ಶಾಲೆಯಲ್ಲಿರುವ ಎಲ್ಲ 17 ಶಿಕ್ಷಕರು ಮತ್ತು ಇತರೆ ಸಿಬ್ಬಂದಿಯನ್ನು ಟೆಸ್ಟ್ ಮಾಡಿಸಲಾಯಿತು. ಇದರಲ್ಲಿ ಮತ್ತೊಬ್ಬ ಶಿಕ್ಷಕಿ ಮತ್ತು ಅಡುಗೆ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಶಾಲೆಯಲ್ಲಿರುವ 136ಕ್ಕೂ ಹೆಚ್ಚು ಮಕ್ಕಳನ್ನು ಟೆಸ್ಟ್ ಮಾಡಲಾಗಿದೆ.

    ಪಾಲಕರಿಗೆ ಆತಂಕ: ಶಾಲೆಗಳಲ್ಲಿ ಕರೊನಾ ಸೋಂಕು ಪತ್ತೆಯಾಗುತ್ತಿರುವುದರಿಂದ ಪಾಲಕರಲ್ಲಿ ಆತಂಕ ಹೆಚ್ಚಾಗಿದೆ. ಆದರೂ ಮಕ್ಕಳನ್ನು ಒಲ್ಲದ ಮನಸ್ಸಿನಿಂದ ಶಾಲೆಗೆ ಕಳಿಸುತ್ತಿದ್ದಾರೆ. ಖಾಸಗಿ ಶಾಲೆಗಳಲ್ಲಿ ಮಕ್ಕಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಸ್ಯಾನಿಟೈಸರ್ ಕೂಡ ಬಳಕೆ ಮಾಡುತ್ತಿದ್ದಾರೆ. ಆದರೆ, ಕೆಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಮಾಸ್ಕ್ ಧರಿಸುವುದು ಕಡಿಮೆ ಎಂದು ಪಾಲಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

    ಗದಗ ನಗರದ ಎಸ್.ಎಂ.ಕೃಷ್ಣಾ ನಗರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಕ್ಕಳಿಗೂ ಟೆಸ್ಟ್ ಮಾಡಿಸಲಾಗುತ್ತಿದೆ. ಈ ಶಾಲೆ ಹೊರತುಪಡಸಿ ಬೇರಾವ ಶಾಲೆಯಲ್ಲೂ ಇಂತಹ ಪ್ರಕರಣಗಳು ದಾಖಲಾಗಿಲ್ಲ.

    ಬಸವಲಿಂಗಪ್ಪ, ಡಿಡಿಪಿಐ, ಗದಗ

    ಎಸ್.ಎಂ. ಕೃಷ್ಣಾ ನಗರದ ಸರ್ಕಾರಿ ಶಾಲೆಯಲ್ಲಿ ಒಟ್ಟು 136 ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇದರಲ್ಲಿ 51 ಮಕ್ಕಳ ರ್ಯಾಟ್ ಟೆಸ್ಟ್ ನೆಗೆಟಿವ್ ಬಂದಿದೆ. ಉಳಿದ ಸ್ಯಾಂಪಲ್ ಗಳನ್ನು ಆರ್​ಟಿಪಿಸಿಆರ್ ಗೆ ಕಳಿಸಲಾಗಿದ್ದು, ವರದಿ ನಾಳೆ ಬರಲಿದೆ.

    ಜಗದೀಶ ನುಚ್ಚಿನ, ಜಿಲ್ಲಾ ಸಮೀಕ್ಷಣಾಧಿಕಾರಿ, ಗದಗ

    ಹೆಚ್ಚುತ್ತಿರುವ ಪ್ರಕರಣ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕರೊನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಜ. 2ರಿಂದಲೇ ಇದರ ಪ್ರಮಾಣ ದುಪ್ಪಟ್ಟಾಗುತ್ತ ಸಾಗಿದೆ. ಬುಧವಾರ 5, ಗುರುವಾರ 11, ಶುಕ್ರವಾರ 10, ಶನಿವಾರ 16, ಭಾನುವಾರ 11 ಸೋಂಕು ಪ್ರಕರಣಗಳು ಧೃಢಪಟ್ಟಿದ್ದು. ಜಿಲ್ಲೆಯಲ್ಲಿ ಶೇ. 0.30 ಪಾಸಿಟಿವಿಟಿ ದರವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts