More

    ಜಿಲ್ಲೆಯಲ್ಲಿ ಹೆಚ್ಚಿದ ಕರೊನಾ ಎರಡನೇ ಅಲೆ ಆತಂಕ ; ಶಿರಾದ ಎಂ.ಜಿ.ಎಂ ಪ್ರೌಢಶಾಲೆಯ 7 ವಿದ್ಯಾರ್ಥಿನಿಯರಿಗೆ ಪಾಸಿಟಿವ್

    ತುಮಕೂರು: ಶಿರಾದ ಎಂ.ಜಿ.ಎಂ ಪ್ರೌಢಶಾಲೆಯ 7 ವಿದ್ಯಾರ್ಥಿನಿಯರಿಗೆ ಮಂಗಳವಾರ ಕರೊನಾ ಸೋಂಕು ದೃಢವಾಗಿದ್ದು, ಜಿಲ್ಲೆಯೆಲ್ಲೆಡೆ ಆತಂಕಕ್ಕೆ ಕಾರಣವಾಗಿದೆ.

    ಪಟ್ಟಣದ ಬಾಲಕಿಯರ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಕರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಲೆಯ 16 ವಿದ್ಯಾರ್ಥಿನಿಯರಿಗೆ ಸೋಮವಾರ ಕರೊನಾ ಪರೀಕ್ಷೆ ನಡೆಸಲಾಗಿತ್ತು, ಎಸ್ಸೆಸ್ಸೆಲ್ಸಿಯ 6 ಹಾಗೂ 9ನೇ ತರಗತಿಯ ಒಬ್ಬ ವಿದ್ಯಾರ್ಥಿನಿಗೆ ಸೋಂಕು ದೃಢವಾಗಿದೆ.

    ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತುರ್ತು ಸಭೆ ನಡೆಸಿ, ಎರಡನೇ ಅಲೆ ವ್ಯಾಪಿಸದಂತೆ ತಡೆಯಲು ಸಕಲ ಸಿದ್ಧತೆಗಳೊಂದಿಗೆ ಸಿದ್ಧರಾಗುವಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

    ಈಗಾಗಲೇ ಕರೊನಾ ಎರಡನೇ ಅಲೆ ಆರಂಭವಾಗುತ್ತಿರುವ ಬಗ್ಗೆ ಸರ್ಕಾರ ನೀಡಿರುವ ಸೂಚನೆ ಅನ್ವಯ ಮೊದಲಿಗೆ ತುಮಕೂರು ಹಾಗೂ ಶಿರಾ ಮತ್ತು ತಿಪಟೂರು ತಾಲೂಕು ಕೇಂದ್ರಗಳಲ್ಲಿ ಕರೊನಾ ಕೇರ್ ಸೆಂಟರ್ ಸ್ಥಾಪಿಸಬೇಕು ಅಲ್ಲದೆ, ಇತರ ತಾಲೂಕು ಕೇಂದ್ರಗಳಲ್ಲಿ ಕರೊನಾ ಚಿಕಿತ್ಸೆ ನೀಡಲು ಈ ಹಿಂದೆ ಕಲ್ಪಿಸಿರುವ ಆರೋಗ್ಯ ಸೌಲಭ್ಯಗಳನ್ನು ಪುನರ್‌ಸ್ಥಾಪಿಸಿ ವೈದ್ಯರು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.

    ಜಿಲ್ಲೆಯಲ್ಲಿರುವ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಐಪ್ರೋ ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್ ಸೇರಿ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಇರುವ ಸೌಲಭ್ಯಗಳನ್ನೇ ಚಿಕಿತ್ಸೆಗೆ ಸಿದ್ಧವಾಗಿಟ್ಟುಕೊಳ್ಳಬೇಕು, ಕಳೆದ ಬಾರಿ ಕೈಗೊಂಡ ಮುಂಜಾಗ್ರತಾ ಕ್ರಮ ಹಾಗೂ ಮಾರ್ಗಸೂಚಿ ಅನ್ವಯ ಕರೊನಾ ನಿಯಂತ್ರಣಕ್ಕೆ ಸಿದ್ಧತೆ ರೂಪಿಸಿಕೊಳ್ಳಬೇಕು, ಆಗಿದ್ದಾಂಗೆ ಜಿಲ್ಲಾಸ್ಪತ್ರೆಯ ತಜ್ಞರ ಸಮಿತಿ ಸಭೆ ನಡೆಸಿ, ಚಿಕಿತ್ಸಾ ವಿಧಾನ ಮತ್ತು ಕೋವಿಡ್ ನಿಯಂತ್ರಣದ ಬಗ್ಗೆ ಚರ್ಚಿಸಬೇಕು ಎಂದರು.

    ಸೋಂಕಿತರು ಚಿಕಿತ್ಸೆಗೆ ಎಲ್ಲಿ ದಾಖಲಾಗುತ್ತಾರೋ ಅದೇ ಆಸ್ಪತ್ರೆಯಲ್ಲಿಯೇ ಪೂರ್ಣವಾಗಿ ಚಿಕಿತ್ಸೆ ಕೊಡಬೇಕು. ಯಾವುದೇ ಕಾರಣಕ್ಕೂ ಸೋಂಕಿತರನ್ನು ಕೊನೆಯ ಹಂತದಲ್ಲಿ ಸರ್ಕಾರಿ ಅಥವಾ ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡಬಾರದು. ಈ ಬಗ್ಗೆ ಲಿಖಿತವಾಗಿ ಆಸ್ಪತ್ರೆಗಳಿಗೆ ಸೂಚನೆ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪಗೆ ಸೂಚಿಸಿದರು.

    ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಎಎಸ್‌ಪಿ ಟಿ.ಜೆ.ಉದೇಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುರೇಶ್‌ಬಾಬು, ಕಾರ್ಯಕ್ರಮ ಅಧಿಕಾರಿಗಳಾದ ಡಾ. ಪುರುಷೋತ್ತಮ್, ಡಾ. ಕೇಶವರಾಜ್, ಡಾ. ಮಹಿಮಾ, ಡಾ. ಚೇತನ್, ಡಾ. ಸನತ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ಇದ್ದರು.

    33 ಜನರಿಗೆ ಕರೊನಾ ಸೋಂಕು: ಜಿಲ್ಲೆಯಲ್ಲಿ ಮಂಗಳವಾರ 33 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 261ಕ್ಕೇರಿದೆ, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 23 ಜನರು ಗುಣಮುಖರಾಗಿದ್ದು ಈವರೆಗೆ 23998 ಜನರಿಗೆ ಮಹಾಮಾರಿಯಿಂದ ಗುಣಮುಖರಾಗಿದ್ದಾರೆ. ಜಿಲ್ಲಾಸ್ಪತ್ರೆ ತುರ್ತು ನಿಗಾ ಘಟಕದಲ್ಲಿ 4 ಜನರಿಗೆ ಚಿಕಿತ್ಸೆ ಮುಂದುವರಿದಿದೆ.

    ಶಿರಾ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರಿಗೆ ಕರೊನಾ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ, ಹಾಸ್ಟೆಲ್‌ನಲ್ಲಿ ತಂಗಿದ್ದ ಇತರ ವಿದ್ಯಾರ್ಥಿಗಳಿಗೆ ಕರೊನಾ ಪರೀಕ್ಷೆ ಮಾಡಿಲಾಗಿದೆ, ಮಾರ್ಗಸೂಚಿ ಅನ್ವಯ ಎಲ್ಲ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಹಾಸ್ಟೆಲ್ ಸ್ಯಾನಿಟೈಸ್ ಮಾಡಲಾಗಿದೆ. ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಸಂಪೂರ್ಣ ನಿಗಾವಹಿಸಲಾಗುವುದು.
    ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts