More

    ಜಿಲ್ಲೆಯಲ್ಲಿ ಹೆಚ್ಚಿದೆ ಡೆಂಘ ಆತಂಕ

    ಕಾರವಾರ: ಅಲ್ಪ ಮಳೆಯ ವಾತಾವರಣ ಜಿಲ್ಲೆಯಲ್ಲಿ ಡೆಂಘ ಆತಂಕ ಹೆಚ್ಚಿಸಿದೆ. ಜನರು ಜಾಗೃತರಾಗಿರಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

    ಸದ್ಯ ಜಿಲ್ಲೆಯ ದಾಂಡೇಲಿಯಲ್ಲಿ ಡೆಂಘ ಪ್ರಭಾವ ಹೆಚ್ಚಿದೆ. ಓಣಿಗೊಬ್ಬರಲ್ಲಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಡೆಂಘಯ ಲಕ್ಷಣ ಇರುವ ಸಾಕಷ್ಟು ರೋಗಿಗಳು ಆಸ್ಪತ್ರೆಗಳಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ಇದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಖಾಸಗಿ ಹಾಗೂ ಸರ್ಕಾರಿ ಪ್ರಯೋಗಾಲಯಗಳಲ್ಲಿ ಪ್ರಾಥಮಿಕ ಹಂತಗಳಲ್ಲಿ ನಡೆಸುವ ಎನ್​ಎಸ್1 ಪರೀಕ್ಷೆಯಲ್ಲಿ ದಾಂಡೇಲಿಯೊಂದರಲ್ಲೇ 98 ಜನರಿಗೆ ಡೆಂಘ ಸೋಂಕಿರುವುದು ಖಚಿತವಾಗಿದೆ. ಆದರೆ, ಈ ಪರೀಕ್ಷೆ ಅಷ್ಟು ನಿರ್ಧಿಷ್ಟವಲ್ಲ. ಕೆಲವು ಮಾದರಿಗಳನ್ನು ತರಿಸಿಕೊಂಡು ಜಿಲ್ಲಾ ಆರೋಗ್ಯ ಇಲಾಖೆಯ ಕಾರವಾರ ಪ್ರಯೋಗಾಲಯಕ್ಕೆ ತರಿಸಿಕೊಂಡು ಎಲಿಜಾ ಪರೀಕ್ಷೆಗೊಳಪಡಿಸಿದಾಗ ಐವರಿಗೆ ಮಾತ್ರ ಡೆಂಘ ಸೋಂಕು ಇರುವುದು ಕಂಡುಬಂದಿದೆ. ಅಂಕೋಲಾದಲ್ಲಿ 1, ಕುಮಟಾ ಹಾಗೂ ಹೊನ್ನಾವರದಲ್ಲಿ ತಲಾ 4 ಜನರಿಗೆ ಡೆಂಘ ಇರುವುದು ಖಚಿತವಾಗಿದೆ.

    ಹೆಚ್ಚುವ ಆತಂಕವೇಕೆ?: ಈಡೀಸ್ ಇಜಿಪ್​ಟೈ ಎಂಬ ಸೊಳ್ಳೆಯಿಂದ ಡೆಂಘ, ಚಿಕೂನ್ ಗುನ್ಯಾ, ಝೀಂಕಾ ಮುಂತಾದ ರೋಗಗಳು ಹರಡುತ್ತವೆ. ವಾರಗಳ ಕಾಲ ನಿಂತಿರುವ ಶುದ್ಧ ನೀರಿನಲ್ಲಿ ಈ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಕಾಲಿಗೆ ಬಿಳಿ ಹಾಗೂ ಕಪ್ಪು ಪಟ್ಟಿ ಹೊಂದಿರುವ ಸಣ್ಣ ಗಾತ್ರದ ಸೊಳ್ಳೆಗಳು ಇವಾಗಿವೆ. ಸೋಂಕು ಹೊಂದಿರುವ ರೋಗಿಯನ್ನು ಕಚ್ಚಿ ರಕ್ತ ಹೀರಿ ನಂತರ ಇನ್ನೊಬ್ಬ ರೋಗಿಗೆ ಕಚ್ಚುವ ಮೂಲಕ ರೋಗ ಹರಡುತ್ತವೆ. ಜೋರು ಮಳೆ ಇದ್ದರೆ ಸೊಳ್ಳೆಗಳ ಬೆಳವಣಿಗೆ ಕಡಿಮೆಯಾಗುತ್ತದೆ. ಸದ್ಯ ಇರುವ ಮಳೆ-ಬಿಸಿಲಿನ ವಾತಾವರಣ ಅವುಗಳ ಬೆಳವಣಿಗೆಗೆ ಹೆಚ್ಚು ಅನುಕೂಲಕರವಾಗಿದೆ. ಮಳೆ ಬಂದ ನಂತರ ಅಡಕೆ ತೋಟದ ಹಾಳೆಗಳು, ಒಡೆದ ತೆಂಗಿನಕಾಯಿ ಚಿಪು್ಪ, ಟೈಯರ್​ಗಳು, ಹಳೆಯ ಬಕೆಟ್​ಗಳಂಥ ನಿರುಪಯುಕ್ತ ವಸ್ತುಗಳಲ್ಲಿ ವಾರಗಟ್ಟಲೆ ನೀರು ನಿಂತಲ್ಲಿ ಈಡೀಸ್ ಇಜಿಪ್​ಟೈ ಸೊಳ್ಳೆ ಉತ್ಪತ್ತಿಯಾಗುತ್ತದೆ. ಇದರಿಂದ ಮನೆಗಳು, ಕೆಲಸ ಮಾಡುವ ಸ್ಥಳಗಳ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಸೂಕ್ತ. ಈಗಾಗಲೇ ರೋಗ ಕಂಡುಬಂದಿರುವ ದಾಂಡೇಲಿ, ಕುಮಟಾ, ಹೊನ್ನಾವರ ಭಾಗದಲ್ಲಿ ಇನ್ನಷ್ಟು ಪ್ರಕರಣಗಳು ಹೆಚ್ಚುವ ಆರಂಕವೂ ಇದೆ.

    ಚಳಿ, ಜ್ವರ ಇದ್ದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ

    ಕಾರವಾರ: ಚಳಿ,ಜ್ವರದ ಲಕ್ಷಣಗಳಿರುವವರು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಕಾರವಾರ ಟಿಎಚ್​ಒ ಡಾ. ಸೂರಜಾ ನಾಯಕ ಹೇಳಿದರು.

    ಡಿಎಚ್​ಒ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಅನಾಫಿಲಸ್ ಹೆಣ್ಣು ಸೊಳ್ಳೆ ಕಡಿತದಿಂದ ರೋಗ ಹರಡುತ್ತದೆ. ಮಲೇರಿಯಾ ವೈರಾಣು ಮನುಷ್ಯನ ದೇಹದೊಳಕ್ಕೆ ಸೇರಿ 5 ರಿಂದ 15 ದಿನಗಳೊಳಗಾಗಿ ಚಳಿ,ಜ್ವರ ಆರಂಭವಾಗುತ್ತದೆ. ಬೆವರು, ಮೈ-ಕೈ ನೋವು, ತಲೆನೋವು, ವಾಂತಿ, ನಿಶ್ಯಕ್ತಿಯಂತ ಲಕ್ಷಣ ಕಾಣಿಸಿಕೊಳ್ಳುತ್ತದೆ ಎಂದು ವಿವರಿಸಿದರು. ಜಿಲ್ಲಾ ಕೀಟ ಶಾಸ್ತ್ರಜ್ಞೆ ಡಾ. ಜೋತ್ಸಾ್ನ, ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಕಡಿಮೆಯಾಗುತ್ತಿವೆ. 2018 ರಲ್ಲಿ 38 ಪ್ರಕರಣಗಳಿದ್ದವು, 2019 ರಲ್ಲಿ 14, 2020 ರಲ್ಲಿ 6, ಈ ವರ್ಷ ಇದುವರೆಗೆ ಹೊನ್ನಾವರದಲ್ಲಿ 3, ಅಂಕೋಲಾ-1 ಸೇರಿ 4 ಪ್ರಕರಣಗಳು ಖಚಿತವಾಗಿವೆ. ಹೊರ ಊರುಗಳಿಂದ ಬರುವ ವಲಸೆ ಕಾರ್ವಿುಕರಿಂದ ರೋಗ ಹರಡುತ್ತಿರುವುದು ಕಂಡುಬರುತ್ತಿದೆ. ಜಿಲ್ಲೆಯನ್ನು ಮಲೇರಿಯಾ ಮುಕ್ತವಾಗಿ ಮಾಡುವ ಗುರಿ ಹೊಂದಿದ್ದೇವೆ. ಅದಕ್ಕೆ ಜನರ ಸಹಕಾರ ಅಗತ್ಯ ಎಂದರು. ಪತ್ರಕರ್ತ ಸದಾಶಿವ ಎಂ.ಎಸ್. ವೇದಿಕೆಯಲ್ಲಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೃಂದಾ ಬಿ. ತಾಮ್ಸೆ, ಅನುಪಮಾ ಎಸ್. ಅಂಕೋಲೆಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts