More

    ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೊಷಣೆ

    ಕಾರವಾರ: ಜಿಲ್ಲೆಯಲ್ಲಿ ಮಲೆನಾಡು, ಅರೆ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಗಾಳಿಯ ಜತೆ ಭಾರಿ ಮಳೆಯಾಗಿದೆ.

    ಪರಿಣಾಮ ಹಲವೆಡೆ ತಗ್ಗು ಪ್ರದೇಶಗಳಲ್ಲಿ ತೋಟ, ಗದ್ದೆಗಳಿಗೆ ನೀರು ತುಂಬಿದ್ದು, 20 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. 5 ಮನೆಗಳ ಮೇಲೆ ಮರ ಮುರಿದು ಬಿದ್ದಿದ್ದು, 200 ಕ್ಕೂ ಅಧಿಕ ವಿದ್ಯುತ್ ಕಂಬಗಳು ಉರುಳಿ ಬಿದ್ದು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಹಾಗೂ ಮೊಬೈಲ್ ಸಂಪರ್ಕ ಸ್ಥಗಿತಗೊಂಡಿದೆ.

    ಕಾರವಾರ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಕ್ರುಬಾಗ ಸಮೀಪ ಮಂಗಳವಾರ ಬೆಳಗಿನಜಾವ ಮರ ಬಿದ್ದು ಸುಮಾರು ಎರಡು ತಾಸು ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.

    ಕಾರವಾರ ಸದಾಶಿವಗಡ, ಕೋಡಿಬಾಗದಲ್ಲಿ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದಿದೆ. ಅರಗಾ, ಚೆಂಡಿಯಾ ಹಾಗೂ ಮುದಗಾ, ಕಿನ್ನರ, ಮಲ್ಲಾಪುರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ ಉಂಟಾಯಿತು.

    ಮಂಗಳವಾರ ಬೆಳಗ್ಗೆ ಮಳೆ ಕಡಿಮೆಯಾಗಿದ್ದರೂ ಭಾರಿ ಗಾಳಿಯಿಂದ ಸಮುದ್ರದ ಅಲೆಗಳ ಅಬ್ಬರ ಹೆಚ್ಚಿದೆ. ಇದರಿಂದ ಮೀನುಗಾರಿಕೆ ಬೋಟ್​ಗಳು ಮತ್ಸ್ಯೇಟೆಗೆ ತೆರಳದಂತಾಗಿದೆ.

    ಕುಮಟಾ ವರದಿ: ಮರ ಬಿದ್ದು ನಾಗೂರು ರಸ್ತೆಯಲ್ಲಿ ವಾಹನ ಸಂಚಾರ ಕೆಲ ಕಾಲ ಬಂದ್ ಆಗಿತ್ತು. ಹೊನ್ಮಾಂವದಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಹಾನಿಯಾಗಿದೆ. ಅಘನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು, ಇಕ್ಕೆಲದ ಹಲವು ಕಡೆ ತೋಟಗಳಿಗೆ ನೀರು ನುಗ್ಗಿದೆ.

    ಯಲ್ಲಾಪುರ ವರದಿ: ಮದನೂರು ಜೋಗಿನಕೊಪ್ಪದ ದೊಂಡು ಬಜ್ಜು ತಾಟೆ ಅವರ ಕಚ್ಚಾ ಮನೆಗೆಗೆ ಮಳೆಯಿಂದ ಹಾನಿಯಾಗಿದೆ. ಗ್ರಾಮ ಲೆಕ್ಕಾಧಿಕಾರಿ ಶಿವರಾಜ ಬೈಲಕೇರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ವಿದ್ಯುತ್ ಸ್ಥಗಿತ: ಮಂಚಿಕೇರಿ ಭಾಗದಲ್ಲಿ 25, ಕಿರವತ್ತಿ ಭಾಗದಲ್ಲಿ 9 ಪಟ್ಟಣ ವ್ಯಾಪ್ತಿಯಲ್ಲಿ 8, ಉಳಿದೆಡೆ 16 ವಿದ್ಯುತ್ ಕಂಬಗಳು ಮುರಿದಿದ್ದು, ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಮರು ಸಂಪರ್ಕ ನೀಡಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಪಟ್ಟಣದ ರವೀಂದ್ರ ನಗರದಲ್ಲಿ ಮುಂಡಗೋಡ ರಸ್ತೆಯಲ್ಲಿ ಮಾವಿನ ಮರವೊಂದು ಮುರಿದುಬಿದ್ದು, ಎರಡು ತಾಸು ವಾಹನ ಸಂಚಾರ ಸ್ಥಗಿತವಾಗಿತ್ತು. ಅರಣ್ಯಾಧಿಕಾರಿಗಳು ಮರ ತೆರವು ಮಾಡಿದ್ದಾರೆ.

    ರೆಡ್ ಅಲರ್ಟ್: ಜಿಲ್ಲೆಯಲ್ಲಿ ಆ.5 ರಂದು 20 ಮಿಮೀಗಿಂತ ಹೆಚ್ಚು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ರೆಡ್ ಅಲರ್ಟ್ ಘೊಷಿಸಲಾಗಿದೆ. ಆ.9 ರವರೆಗೆ 115 ಮಿಮೀಗಿಂತ ಹೆಚ್ಚು ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.

    ಮಳೆಯ ವಿವರ: ಮಂಗಳವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 121, ಭಟ್ಕಳದಲ್ಲಿ 84, ಹಳಿಯಾಳದಲ್ಲಿ 53.2, ಹೊನ್ನಾವರದಲ್ಲಿ 81.3, ಕಾರವಾರದಲ್ಲಿ 87, ಕುಮಟಾದಲ್ಲಿ 90.6, ಮುಂಡಗೋಡಿನಲ್ಲಿ 44.6, ಸಿದ್ದಾಪುರದಲ್ಲಿ 15.4, ಶಿರಸಿಯಲ್ಲಿ 105.5, ಜೊಯಿಡಾದಲ್ಲಿ 83,8, ಯಲ್ಲಾಪುರದಲ್ಲಿ 64 ಮಿಮೀ ಮಳೆಯಾಗಿದೆ. ಕದ್ರಾ ಜಲಾಶಯದ ಒಳ ಹರಿವು 10 ಸಾವಿರ ಕ್ಯೂಸೆಕ್​ಗೆ, ಸೂಪಾ ಜಲಾಶಯದ ಒಳ ಹರಿವು 18 ಸಾವಿರ ಕ್ಯೂಸೆಕ್​ಗೆ ಹೆಚ್ಚಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts