More

    ಜಿಲ್ಲೆಯಲ್ಲಿ ಮುಂಗಾರು ಅಬ್ಬರ

    ಕಾರವಾರ: ಜಿಲ್ಲೆಯಲ್ಲಿ ಮುಂಗಾರಿನ ಅಬ್ಬರ ಶುರುವಾಗಿದೆ. ಮಂಗಳವಾರ ಹಾಗೂ ಬುಧವಾರ ಬೆಳಗ್ಗೆ ಜಿಲ್ಲಾದ್ಯಂತ ವ್ಯಾಪಕ ಮಳೆಯಾಗಿದೆ. ಇದರಿಂದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ.

    ಕಾರವಾರದಲ್ಲಿ ಮಂಗಳವಾರ ರಾತ್ರಿ ಬಿರುಸಾದ ಮಳೆ ಬುಧವಾರ ಮಧ್ಯಾಹ್ನದವರೆಗೂ ಮುಂದುವರಿಯಿತು. ನಂತರ ಕೊಂಚ ಬಿಡುವು ನೀಡಿ ಸಾಯಂಕಾಲ ಮಳೆಯ ಅಬ್ಬರ ಮತ್ತೆ ಪ್ರಾರಂಭವಾಗಿದೆ. ಮಳೆಗೆ ತಾಲೂಕಿನ ಅರಗಾ, ಮುದಗಾ ಭಾಗದಲ್ಲಿ ನೀರು ನಿಂತಿತ್ತು. ನಗರದ ಹಲವೆಡೆ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ನಗರದ ಕೆಎಚ್​ಬಿ, ಹಬ್ಬುವಾಡ ರಸ್ತೆ, ಬಾಂಡಿಶಿಟ್ಟಾ ರಸ್ತೆ ಸೇರಿ ವಿವಿಧೆಡೆ ಚರಂಡಿಗಳು ಉಕ್ಕಿ ರಸ್ತೆಯ ಮೇಲೆ ನೀರು ಹರಿಯಿತು. ತಗ್ಗು ಪ್ರದೇಶಗಳಲ್ಲಿರುವ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಬುಧವಾರ ಬೆಳಗ್ಗೆ 8 ರಿಂದ ಸಾಯಂಕಾಲ 5.30 ರವರೆಗೆ ಮಿಮೀ ಮಳೆಯಾಗಿದೆ.

    ಬುಧವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಅಂಕೋಲಾದಲ್ಲಿ 160.7, ಭಟ್ಕಳದಲ್ಲಿ 118.2, ಹಳಿಯಾಳದಲ್ಲಿ 24.4, ಹೊನ್ನಾವರದಲ್ಲಿ 122.5, ಕಾರವಾರದಲ್ಲಿ 114.1, ಕುಮಟಾದಲ್ಲಿ 91.6, ಮುಂಡಗೋಡಿನಲ್ಲಿ 32.4, ಸಿದ್ದಾಪುರದಲ್ಲಿ 39.4, ಶಿರಸಿಯಲ್ಲಿ 94.5, ಜೊಯಿಡಾದಲ್ಲಿ 57.4, ಯಲ್ಲಾಪುರದಲ್ಲಿ 53.4 ಮಿಮೀ ಮಳೆಯಾಗಿದೆ.

    ಎರಡನೇ ಎಚ್ಚರಿಕೆ: ಕದ್ರಾ ಜಲಾನಯನ ಪ್ರದೇಶದಲ್ಲಿ 123 ಮಿಮೀ ಮಳೆಯಾಗಿದ್ದು, ಒಳ ಹರಿವು 6309 ಕ್ಯೂಸೆಕ್​ಗೆ ಹೆಚ್ಚಿದೆ. ವಿದ್ಯುತ್ ಉತ್ಪಾದನೆ ಮಾಡಿ 5782 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಸಮುದ್ರ ಮಟ್ಟದಿಂದ ಗರಿಷ್ಠ 34.50 ಮೀಟರ್ ಎತ್ತರ ಇರುವ ಅಣೆಕಟ್ಟೆಯಲ್ಲಿ ಸದ್ಯ 29.80 ಮೀಟರ್ ನೀರು ಸಂಗ್ರಹವಾಗಿದೆ. ಒಟ್ಟಾರೆ 32.50 ಮೀಟರ್ ನೀರು ತುಂಬುತ್ತಿದ್ದಂತೆ ಗೇಟ್​ಗಳನ್ನು ತೆರೆದು ನೀರು ಹೊರ ಬಿಡಲಾಗುವುದು ಎಂದು ಕರ್ನಾಟಕ ವಿದ್ಯುತ್ ನಿಗಮ ಪ್ರವಾಹದ ಎರಡನೇ ಮುನ್ನೆಚ್ಚರಿಕೆ ನೋಟಿಸ್ ನೀಡಿದೆ. ಅಣೆಕಟ್ಟೆಯ ಕೆಳಗೆ ನದಿಯ ಇಕ್ಕೆಲಗಳಲ್ಲಿ ಇರುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಲಾಗಿದೆ.

    ಜಲಾಶಯದಂತಾಗಿದೆ ಶಾಲೆವಾಡ: ಕಾರವಾರ ನಗರದ 22 ನೇ ವಾರ್ಡ್​ನ ಶಾಲೆವಾಡದಲ್ಲಿ ಸಂಪೂರ್ಣ ನೀರು ನಿಂತು ಜಲಾಶಯದಂತಾಗಿದೆ. ಶ್ರೀಪಾದ ಶೇಟ್ ಒಂದನೇ ಅಡ್ಡ ರಸ್ತೆಯಲ್ಲಿ ಸುಮಾರು 4 ಅಡಿ ನೀರು ತುಂಬಿದ್ದು, ವಾಹನ ಸಂಚಾರ, ಜನರ ಓಡಾಟ ದುಸ್ತರವಾಗಿದೆ.

    ಇದು ಪ್ರತಿ ಮಳೆಗಾಲದ ಕತೆಯಾಗಿದೆ. ನಾವು ಹಲವು ಬಾರಿ ನಗರಸಭೆ ಅಧಿಕಾರಿಗಳ ಬಳಿ ಹೋಗಿ ಸೋತಿದ್ದೇವೆ . ಇಲ್ಲಿ ರಸ್ತೆ ಮಾಡಿ ಎಂದು ಮನವಿ ಮಾಡಿದರೆ ನಗರಸಭೆ ಅಧಿಕಾರಿಗಳು,‘ರಸ್ತೆ ನಗರಸಭೆಗೆ ಹಸ್ತಾಂತರವಾಗಿಲ್ಲ. ಆ ಬಗ್ಗೆ ದಾಖಲೆ ನೀಡಿ’ ಎನ್ನುತ್ತಿದ್ದಾರೆ. ಎಂಬುದು ಸ್ಥಳೀಯರ ಗೋಳು.

    2013 ರಲ್ಲಿ ಇಲ್ಲಿಗೆ ರಸ್ತೆ ಮಂಜೂರಾಗಿತ್ತು. ನಂತರ ಅದನ್ನು ಬೇರೆಡೆ ಸ್ಥಳಾಂತರಿಸಲಾಯಿತು. ಈ ಬಗ್ಗೆ ಸ್ಥಳೀಯ ಕೌನ್ಸಿಲರ್ ಸಹ ಮಾತನಾಡುತ್ತಿಲ್ಲ. ನೀರು ತುಂಬಿರುವುದರಿಂದ ಆಟೋಗಳು ಇಲ್ಲಿಗೆ ಬರುವುದಿಲ್ಲ. ಗ್ಯಾಸ್ ಸಿಲಿಂಡರ್ ತುಂಬಿದ ವಾಹನಗಳು ಬರುವುದಿಲ್ಲ. ಅಲ್ಲದೆ, ಸದಾ ನೀರು ನಿಂತಿರುವುದರಿಂದ ರೋಗ ಹರಡುವ ಭೀತಿ ಇದೆ ಎನ್ನುತ್ತಾರೆ ಜನರು.

    ನಗರಸಭೆ ಇಲ್ಲಿ ಮನೆ ನಿರ್ವಣಕ್ಕೆ ಅನುಮತಿ ನೀಡಿದೆ. ಮನ ಕರ ವಸೂಲಿ ಮಾಡುತ್ತದೆ. ವಿದ್ಯುತ್ ದೀಪ ಅಳವಡಿಸಿ ರಿಪೇರಿ ಮಾಡುತ್ತದೆ. ಎರಡು ದಿನಕ್ಕೊಮ್ಮೆ ಕಸ ಕೊಂಡೊಯ್ಯಲು ವಾಹನ ಬರುತ್ತದೆ. ಆದರೆ, ರಸ್ತೆ ಮಾಡಲು ಮಾತ್ರ ಅನುಮತಿ ಏಕೆ ಎಂಬುದು ಅರ್ಥವಾಗುತ್ತಿಲ್ಲ. ವಾಮನ ಹರಿಕಂತ್ರ ಶಾಲೆವಾಡ ನಾಗರಿಕ

    ಸ್ಥಳ ಪರಿಶೀಲನೆ ನಡೆಸಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಲಾಗುವುದು. ರಸ್ತೆ ಬಗ್ಗೆ ಪರಿಶೀಲಿಸಲಾಗುವುದು. ಪ್ರಿಯಾಂಗಾ ಎಂ.ಕಾರವಾರ ನಗರಸಭೆ ಪೌರಾಯುಕ್ತೆ

    ರಸ್ತೆ ತುಂಬ ನಿಂತ ನೀರು, ಸಂಚಾರ ಬಂದ್: ಶಿರಸಿನಗರದಲ್ಲಿ ಬುಧವಾರ ಬಿದ್ದ ಭಾರಿ ಮಳೆಗೆ ಇಲ್ಲಿನ ಆಶಾ ಪ್ರಭು ಆಸ್ಪತ್ರೆ ಎದುರಿನ ಶಿರಸಿ- ಯಲ್ಲಾಪುರ ರಾಜ್ಯ ಹೆದ್ದಾರಿ ಮೇಲೆ ಇಡೀ ದಿನ ನೀರು ನಿಂತು ಸಂಚಾರ ಸಂಪೂರ್ಣ ಬಂದ್ ಆಗಿದೆ.

    ಕಳೆದ ಕೆಲವು ದಿನಗಳಿಂದ ಯಲ್ಲಾಪುರ ರಸ್ತೆಯ ರಾಜ ಕಾಲುವೆ ಸಮಸ್ಯೆ ಮತ್ತೆ ಉಲ್ಬಣವಾಗಿದ್ದು, ಖಾಸಗಿ ವ್ಯಕ್ತಿಗಳು ಗಟಾರ ಮುಚ್ಚಿದ ಪರಿಣಾಮ ನೀರು ರಸ್ತೆಯ ಮೇಲೆ ನಿಂತು ಸಂಚಾರಕ್ಕೆ ತೊಂದರೆಯಾಗಿತ್ತು. ರಸ್ತೆಯ ಮೇಲೆ ನೀರು ನಿಂತ ಕಾರಣ ಸ್ಥಳೀಯರು ಮುನ್ನಚ್ಚರಿಕಾ ಕ್ರಮವಾಗಿ ರಸ್ತೆಗೆ ಮರದ ರೆಂಬೆಗಳನ್ನು ಹಾಕಿ ಬಂದ್ ಮಾಡಿದ್ದರು. ಒಂದು ವಾರಗಳ ಹಿಂದೆ ಸುರಿದ ಮಳೆಗೆ ಮೊದಲ ಬಾರಿಗೆ ರಸ್ತೆ ಬಂದ್ ಆಗಿ ಸಂಚಾರ ಸಮಸ್ಯೆ ಉದ್ಭವವಾಗಿತ್ತು.

    ಆಗ ಉಪವಿಭಾಗಾಧಿಕಾರಿ ಅವರು ಎರಡು ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ನಂತರ ಯಲ್ಲಾಪುರ ರಸ್ತೆಯ ಅರ್ಬನ್ ಬ್ಯಾಂಕ್ ಪಕ್ಕದಲ್ಲಿ ಗಟಾರ ತೊಡಲು ನಗರಸಭೆ ಮುಂದಾಗಿತ್ತು. ಆದರೆ, ಅದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಗಟಾರ ಸಮಸ್ಯೆ ನೆನೆಗುದಿಗೆ ಬಿದ್ದಿತ್ತು. ಈಗ ಮತ್ತೆ ಭಾರಿ ಮಳೆ ಸುರಿದ ಪರಿಣಾಮ ರಸ್ತೆಯ ಮೇಲೆ ನೀರು ನಿಂತು, ಸ್ಥಳೀಯ ಹೋಟೆಲ್, ಅಂಗಡಿ, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದು, ಆಡಳಿತ ಕಾರ್ಯ ವೈಖರಿಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts