More

    ಜಿಲ್ಲೆಯಲ್ಲಿ ನಡೆಯುವ ಅಕ್ರಮ ಮಟ್ಟಹಾಕಲು ನಾವು ರೆಡಿ

    ಬೆಳಗಾವಿ: ಜಿಲ್ಲೆಯಲ್ಲಿ ಅಕ್ರಮ ಮಣ್ಣು ಸಾಗಣೆ ದಂಧೆ, ಹೆದ್ದಾರಿಗಳ ಪಕ್ಕದ ವಾಹನಗಳ ಪಾರ್ಕಿಂಗ್, ಮೀಟರ್ ಬಡ್ಡಿ ದಂಧೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಕಡಿವಾಣ ಹಾಕಲಾಗುವುದು. ಅಂಗನನಾಡಿ ಮಕ್ಕಳಿಗೆ ಕಳಪೆ ಆಹಾರ ವಿತರಣೆ, ಸರ್ಕಾರಿ ಆಸ್ತಿ ಅಕ್ರಮ ನೋಂದಣಿ, ಗ್ರಾಮೀಣ, ಪಟ್ಟಣ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ತಕ್ಷಣ ಪರಿಹರಿಸಲಾಗುವುದು ಎಂದು ಎಸ್‌ಪಿ ಡಾ. ಸಂಜೀವ ಪಾಟೀಲ ಭರವಸೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿದರು. ಚಿಕ್ಕೋಡಿ ತಾಲೂಕಿನ ಮಾಂಜರಿಯಲ್ಲಿ ಅಕ್ರಮವಾಗಿ ಮಣ್ಣು ಸಾಗಣೆ ದಂಧೆ ನಿರಂತರವಾಗಿ ನಡೆಯುತ್ತಿದೆ. ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಅಥಣಿ ತಾಲೂಕಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಮೀಟರ್ ಬಡ್ಡಿ ದಂಧೆ, ಅಕ್ರಮವಾಗಿ ಆಸ್ತಿಗಳ ನೋಂದಣಿ ವಿರುದ್ಧ ಕ್ರಮ ಕೈಗೊಳ್ಳುವುದರ ಜತೆಗೆ ಸಂಬಂಧಿಸಿದ ಇಲಾಖೆಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ. ಬೋರಗಾಂವವಾಡಿಯಲ್ಲಿ ವರದಿಗಾರನ ಹಾವಳಿ ಹೆಚ್ಚಾಗಿದ್ದು ಕಠಿಣ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸುವಂತೆ ಸಾರ್ವಜನಿಕರು ವಿನಂತಿಸಿದರು.

    ಹಾರೂಗೇರಿ, ಯರಗಟ್ಟಿ, ನಿಪ್ಪಾಣಿ ಪಟ್ಟಣ, ಅಥಣಿ ನಗರ, ಗೋಕಾಕ ನಗರಗಳಲ್ಲಿ ರಸ್ತೆಯ ಎರಡು ಬದಿಗಳಲ್ಲಿ ವಾಹನ ಪಾರ್ಕಿಂಗ್ ಮಾಡಲಾಗುತ್ತಿದೆ. ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಕೂಡಲೇ ಈ ಸಮಸ್ಯೆ ಪರಿಹರಿಸಲು ಕ್ರಮ ವಹಿಸಬೇಕು ಎಂದು ವಾಹನ ಸವಾರರು ಪೋನ್ ಮೂಲಕ ಮಾಹಿತಿ ನೀಡಿದರು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಎಸ್‌ಪಿ ಸಂಜೀವ ಪಾಟೀಲ ಅವರು, ಚಿಕ್ಕೋಡಿ ಸೇರಿ ಅಕ್ರಮವಾಗಿ ಮಣ್ಣು ಸಾಗಣೆ ನಡೆಯುತ್ತಿರುವ ಕುರಿತು ವಿಶೇಷ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು. ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುವವರ ಪತ್ತೆಗೆ ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುವುದು. ಅಂಗನವಾಡಿ ಮಕ್ಕಳಿಗೆ ಕಳಪೆ ಆಹಾರ, ಸರ್ಕಾರ ಆಸ್ತಿ ಅಕ್ರಮ ನೋಂದಣಿ, ಸರ್ಕಾರದ ಅನುದಾನ ದುರುಪಯೋಗ, ಕಳಪೆ ಕಾಮಗಾರಿ ಪರಿಶೀಲನೆ ನಡೆಸಿ ಸಂಬಂಧಿಸಿ ಇಲಾಖೆಗಳ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದರು. ಇನ್ಸ್‌ಪೆಕ್ಟರ್‌ಗಳಾದ ಮಹಾದೇವ ಎಸ್.ಎಂ, ಬಾಳಪ್ಪ ತಳವಾರ, ವಿಠ್ಠಲ ಮಾದರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts