More

    ಜಿಲ್ಲೆಯಲ್ಲಿ ಆರು ಹೆಚ್ಚುವರಿ ಮತಗಟ್ಟೆ

    ಗದಗ: ಪಶ್ಚಿಮ ಪದವೀಧರ ಚುನಾವಣೆ ಘೊಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನಗಳ ಜತೆಗೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ಸೂಚನೆ ನೀಡಿದರು.

    ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಪಶ್ಚಿಮ ಪದವೀಧರರ ಚುನಾವಣೆ-2020ರ ವಿವಿಧ ಸಮಿತಿಗಳ ಮುಖ್ಯಸ್ಥರಿಗೆ ಬುಧವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಐದಕ್ಕಿಂತ ಹೆಚ್ಚು ಜನರು ಮನೆ, ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳದಂತೆ ಕ್ರಮ ವಹಿಸಬೇಕು. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಒಂದೆಡೆ ಸೇರಲು ಅವಕಾಶ ಇಲ್ಲದಿರುವುದರಿಂದ ಚುನಾವಣಾ ಆಯೋಗದ ನಿರ್ದೇಶನ ಮತ್ತು ಕರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಆಗುವಂತೆ ನೋಡಿಕೊಳ್ಳಬೇಕು ಎಂದರು.

    ನೀತಿ ಸಂಹಿತೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ತಾಲೂಕುವಾರು ರಚಿಸಿರುವ ವಿವಿಧ ತಂಡಗಳು ಕಾಲಕಾಲಕ್ಕೆ ನೀಡುವ ನಿರ್ದೇಶನಗಳಂತೆ ಕರ್ತವ್ಯ ನಿರ್ವಹಿಸಬೇಕು. ಅದರಂತೆ ಜಿಲ್ಲೆಯಲ್ಲಿ ಆರು ಹೆಚ್ಚುವರಿ ಮತಗಟ್ಟೆ ಸೇರಿದಂತೆ ಒಟ್ಟು 29 ಮತಗಟ್ಟೆಗಳಿದ್ದು, ನವೆಂಬರ್ 1, 2019ರ ಅಂತ್ಯಕ್ಕೆ 15,743 ಮತದಾರರಿದ್ದಾರೆ ಎಂದು ಹೇಳಿದರು.

    ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಚುನಾವಣಾ ಕೆಲಸ ಕಾರ್ಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಸ್ವೀಪ್ ಸಮಿತಿ ಮತದಾರರಲ್ಲಿ ಕೋವಿಡ್-19 ರೋಗ ತಡೆಗಟ್ಟುವುದರೊಂದಿಗೆ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಭಾಗವಹಿಸುವಿಕೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ನಿರ್ದೇಶಿಸಿದರು.

    ಜಿಪಂ ಸಿಇಒ ಡಾ.ಆನಂದ ಕೆ. ಮಾತನಾಡಿ, ಚುನಾವಣಾ ಕರ್ತವ್ಯದ ಸಂದರ್ಭದಲ್ಲಿ ಲೋಪದೋಷಗಳಾಗದಂತೆ ನೋಡಿಕೊಳ್ಳಬೇಕು. ಇನ್ನುಳಿದ ಚುನಾವಣೆಗಳಂತೆ ಪದವೀಧರ ಕ್ಷೇತ್ರಗಳ ಚುನಾವಣೆಗಳು ಅಷ್ಟೇ ಮಹತ್ವದ್ದಾಗಿವೆ. ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ ಅಧಿಕಾರಿಗಳು ಗುರುತಿನ ಚೀಟಿ ಹೊಂದಿರಬೇಕು. ಚುನಾವಣೆಗೆ ಸಂಬಂಧಿಸಿದ ರಾಜಕೀಯ ಪಕ್ಷಗಳ ಸಭೆಗಳಿಗೆ ಜಿಲ್ಲಾಧಿಕಾರಿಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಜಿಲ್ಲೆಯ ಎಲ್ಲ ತಹಸೀಲ್ದಾರರು ತಮ್ಮ ವ್ಯಾಪ್ತಿಯ ಪ್ರಿಂಟರ್ಸ್ ಮಾಲೀಕರ ಸಭೆ ಕರೆದು ಚುನಾವಣೆಗೆ ಸಂಬಂಧಿಸಿದ ಕರಪತ್ರ, ಭಿತ್ತಿಪತ್ರ, ಬ್ಯಾನರ್ಸ್ ಮುದ್ರಣಕ್ಕೂ ಮುನ್ನ ಅವುಗಳ ಪ್ರತಿಗಳನ್ನು ನೀಡುವಂತೆ ಸೂಚಿಸಬೇಕು. ದೇವಸ್ಥಾನಗಳಲ್ಲಿ ಚುನಾವಣೆ ಸಭೆ ಸೇರದಂತೆ ಕ್ರಮ ಕೈಗೊಳ್ಳಬೇಕು. ವಿಡಿಯೋ ವಿಚಕ್ಷಣಾ ದಳ ಸಭೆ ನಡೆಯುವ ಸ್ಥಳಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್. ಮಾತನಾಡಿ, ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧದ ದೂರಿನಲ್ಲಿ ಸ್ಪಷ್ಟತೆ ಇರಬೇಕು. ಅಭ್ಯರ್ಥಿಗಳು 50,000 ರೂ.ಕ್ಕಿಂತ ಹೆಚ್ಚು ಹಣ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದು ಕಂಡು ಬಂದರೆ ಹಣ ಜಪ್ತಿ ಮಾಡಲಾಗುವುದು ಎಂದರು.

    ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ತರಬೇತಿಯಲ್ಲಿ ಇದ್ದರು.

    ನೀತಿ ಸಂಹಿತೆ ಅನುಷ್ಠಾನಕ್ಕೆ ತಂಡ ರಚನೆ

    ಗದಗ: ಪಶ್ಚಿಮ ಪದವೀಧರರ ಮತಕ್ಷೇತ್ರ ಚುನಾವಣೆ ಕುರಿತಂತೆ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ತಾಲೂಕುವಾರು ತಂಡಗಳನ್ನು ರಚಿಸಿ ಜಿಪಂ ಸಿಇಒ ಅವರನ್ನು ನೋಡಲ್ ಅಧಿಕಾರಿ ಎಂದು ನೇಮಕ ಮಾಡಿ ಜಿಲ್ಲಾಧಿಕಾರಿ ಸುಂದರೇಶಬಾಬು ಆದೇಶ ಹೊರಡಿಸಿದ್ದಾರೆ.

    ಗದಗ ತಾಲೂಕಿಗೆ ಸಂಬಂಧಿಸಿದಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಮುಳಗುಂದ, ಉಪ ತಹಸೀಲ್ದಾರರು, ಲಕ್ಷ್ಮೇಶ್ವರ, ಶಿರಹಟ್ಟಿ, ಮುಂಡರಗಿ, ರೋಣ, ಗಜೇಂದ್ರಗಡ, ನರಗುಂದ ತಾಲೂಕುಗಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಹಾಗೂ ಉಪ ತಹಸೀಲ್ದಾರರನ್ನು ನೇಮಕ ಮಾಡಲಾಗಿದೆ.

    ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಹಾಗೂ ಚುನಾವಣೆಯ ವಿಷಯಗಳ ದೂರು, ಸಲಹೆ ಹಾಗೂ ವಿಚಾರಣೆಗಾಗಿ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು ಸಹಾಯವಾಣಿ ಸಂಖ್ಯೆ 08372-239177 ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

    ಮಾಧ್ಯಮ ಪ್ರಮಾಣೀಕರಣ ಸಮಿತಿ: ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿಯನ್ನು ರಚಿಸಲಾಗಿದೆ. ಸಮಿತಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಅಧ್ಯಕ್ಷ ಹಾಗೂ ಜಿಪಂ ಉಪಕಾರ್ಯದರ್ಶಿ ಬಿ.ಕಲ್ಲೇಶ ಮತ್ತು ನಿವೃತ್ತ ಪತ್ರಕರ್ತ ಐ.ಕೆ. ಕಮ್ಮಾರ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರು, ಸದಸ್ಯ ಕಾರ್ಯದರ್ಶಿ ಮತ್ತು ನೋಡಲ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

    ಒಂದೇ ದಿನ 7 ನಾಮಪತ್ರ

    ಧಾರವಾಡ: ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬುಧವಾರ 7 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಇದುವರೆಗೆ 9 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಸಲ್ಲಿಕೆಯಾಗಿವೆ.

    ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ಎಂ. ಕುಬೇರಪ್ಪ ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿಯಾಗಿ ನಿಕಟಪೂರ್ವ ಎಂಎಲ್​ಸಿ ಎಸ್.ವಿ. ಸಂಕನೂರ, ಜೆಡಿಎಸ್ ಅಭ್ಯರ್ಥಿಯಾಗಿ ಶಿವಶಂಕರ ಕಲ್ಲೂರ, ಆಜಾದ್ ಮಜ್ದೂರ್ ಕಿಸಾನ್ ಪಾರ್ಟಿ ಅಭ್ಯರ್ಥಿಯಾಗಿ ಪ್ರಕಾಶ ಕಾಂಬಳೆ ನಾಮಪತ್ರ ಸಲ್ಲಿಸಿದರು. ಸ್ವತಂತ್ರ ಅಭ್ಯರ್ಥಿಗಳಾಗಿ ಶಿವಕುಮಾರ್ ತಳವಾರ, ಬಸವರಾಜ ತೇರದಾಳ, ಚರಣರಾಜ್ ಕೆ.ಎ. ನಾಮಪತ್ರ ಸಲ್ಲಿಸಿದ್ದಾರೆ. ಅಭ್ಯರ್ಥಿಗಳ ಅರ್ಜಿಗಳನ್ನು ಸಹಾಯಕ ಚುನಾವಣಾಕಾರಿ ಹಾಗೂ ಧಾರವಾಡ ಜಿಲ್ಲಾಕಾರಿ ನಿತೇಶ ಪಾಟೀಲ ಅವರು ಸ್ವೀಕರಿಸಿದರು. ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದೆ. ಅ. 9ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 12ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದ್ದು, 28ರಂದು ಮತದಾನ ಜರುಗಲಿದೆ.

    ಅನುಮತಿ ಕಡ್ಡಾಯ: ಫೇಸ್​ಬುಕ್, ವಾಟ್ಸಾಪ್, ಟ್ವಿಟರ್, ಇನ್​ಸ್ಟಾಗ್ರಾಂ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಪಕ್ಷ, ವ್ಯಕ್ತಿಗೆ ಸಂಬಂಧಿಸಿದಂತೆ ಆಸೆ, ಆಮಿಷಗಳನ್ನು ಒಡ್ಡುವ ಪೋಸ್ಟ್ ಹಾಕುವವರ ಮೇಲೆ ಜಿಲ್ಲಾಡಳಿತ ನಿಗಾವಹಿಸಿದ್ದು, ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು. ಅಲ್ಲದೇ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಿಸಬೇಕಿದ್ದಲ್ಲಿ ಜಿಲ್ಲಾಡಳಿತದ ಅನುಮತಿ ಕಡ್ಡಾಯವಾಗಿದೆ. ಪೂರ್ವಾನುಮತಿ ಇಲ್ಲದೇ ಪ್ರಕಟಿಸಿದಲ್ಲಿ ಸೂಕ್ತ ಕ್ರಮ ವಹಿಸಿಲಾಗುವುದು ಎಂದು ಜಿಲ್ಲಾಧಿಕಾರಿ ಸುಂದರೇಶ್ ಬಾಬು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts