More

    ಜಿಲ್ಲೆಯಲ್ಲಿನ ಚುನಾವಣಾಕಣಕ್ಕೆ ತಾರಾ ಮೆರಗು

    ನಟ ಕಿಚ್ಚ ಸುದೀಪ್ ಭರ್ಜರಿ ರೋಡ್ ಶೋ

    ಬಿಜೆಪಿ ಅಭ್ಯರ್ಥಿಗಳ ಪರ ಮತಪ್ರಚಾರ


    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಜಿಲ್ಲೆಯಲ್ಲಿ ಚುನಾವಣಾ ಕಣ ಕಾವೇರುತ್ತಿರುವ ನಡುವೆ ನಟ ಕಿಚ್ಚ ಸುದೀಪ್ ಪ್ರವೇಶದಿಂದ ಚುನಾವಣಾ ಕಣಕ್ಕೆ ತಾರಾ ಮೆರಗು ತಂದಿದ್ದಾರೆ. ಈ ಹಿಂದೆ ಬಿಜೆಪಿ ಅಭ್ಯರ್ಥಿಗಳ ಪರ ನಟಿ ಶ್ರುತಿ ಅಬ್ಬರದ ಪ್ರಚಾರ ನಡೆಸಿದ್ದರು. ಇದಾದ ಬಳಿಕ ಮೊದಲ ಬಾರಿ ಪ್ರಚಾರಕ್ಕೆ ಸ್ಟಾರ್ ವ್ಯಾಲ್ಯು ತಂದಿಕೊಟ್ಟಿರುವ ಸುದೀಪ್ ದೊಡ್ಡಬಳ್ಳಾಪುರ ದೇವನಹಳ್ಳಿಯಲ್ಲಿ ಬಿಜೆಪಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದರು.
    ನೆಚ್ಚಿನ ನಟನ ಕಾಣಲು ಕಿಕ್ಕಿರಿದ ಜನ: ನಟ ಸುದೀಪ್ ಅವರನ್ನು ಕಾಣಲು ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ಭಾಗದಲ್ಲಿ ಅಭಿಮಾನಿಗಳ ದಂಡೇ ಹರಿದುಬಂದಿತ್ತು. ರೋಡ್ ಶೋ ಉದ್ದಕ್ಕೂ ಕಿಚ್ಚ ಕಿಚ್ಚ ಎಂಬ ೋಷಣೆ ಕೇಳಿಬಂತು. ಸೇರಿದ ಜನಸ್ತೋಮದ ಕಡೆ ಕೈಬೀಸುತ್ತಾ ಸಾಗಿದ್ದ ಸುದೀಪ್ ಎಲ್ಲರಿಗೂ ಕೈ ಮುಗಿದು ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ನಡೆಸುವ ಮೂಲಕ ಸಂಚಲನ ಸೃಷ್ಟಿಸಿದರು.
    ಏನಾಗಲಿ ಮುಂದೆ ಸಾಗೂ ನೀ: ರೋಡ್ ಶೋ ವೇಳೆ ಅಭಿಮಾನಿಗಳು ಹಾಡು ಹಾಡುವಂತೆ ಒತ್ತಾಯಿಸಿದರು. ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಸುದೀಪ್ ಮುಸ್ಸಂಜೆ ಮಾತು ಚಿತ್ರದ ‘ಏನಾಗಲಿ ಮುಂದೇ ಸಾಗು ನೀ’ ಹಾಡಿನ ಮೂಲಕ ಅಭಿಮಾನಿಗಳ ಮನಗೆದ್ದರು. ಸುದೀಪ್ ಹಾಡುತ್ತಿದ್ದಂತೆ ಕೋರಸ್ ಕೊಟ್ಟ ಜನರೂ ಕುಣಿದು ಕುಪ್ಪಳಿಸಿದರು. ಸೇರಿದ್ದ ಜನಸ್ತೋಮ ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ ದೃಶ್ಯ ಕಂಡುಬಂತು.
    ನನ್ನದೂ ಸ್ವಾರ್ಥವಿದೆ: ನಾನು ಪ್ರಚಾರಕ್ಕೆ ಬಂದಿರುವುದರಲ್ಲಿ ನನ್ನ ಸ್ವಾರ್ಥವೂ ಇದೆ. ಚುನಾವಣಾ ಪ್ರಚಾರದ ಮೂಲಕ ಅಭಿಮಾನಿಗಳನ್ನು ನೇರವಾಗಿ ಕಾಣುವ ನನ್ನ ಆಸೆ ಈಡೇರಿದೆ, ಅಭಿಮಾನಿಗಳನ್ನು ಕಣ್ತುಂಬಿಕೊಳ್ಳುವ ಸುಯೋಗ ಬಂದಿದೆ ಎಂದು ಸುದೀಪ್ ಹೇಳಿದರು. ನಾನೂ ಕೇವಲ ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಚಾರ ಮಾಡುವುದಿಲ್ಲ ಬಿಜೆಪಿಗಾಗಿ ಎಲ್ಲೆ ಕರೆದರೂ ಪ್ರಚಾರಕ್ಕೆ ಹೋಗಲು ಸಿದ್ದನಿದ್ದೇನೆ ಎಂದರು.


    ಉತ್ಸಾಹಿ, ವಿದ್ಯಾವಂತನನ್ನು ಬೆಂಬಲಿಸಿ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕರೊನಾ ಸಂದರ್ಭದಿಂದ ಹಿಡಿದು ಈವರೆಗೆ ಸಾಮಾಜಿಕ, ಆರೋಗ್ಯ, ಉದ್ಯೋಗ, ಶಿಕ್ಷಣ ಸೇವೆಗಳಲ್ಲಿ ತೊಡಗಿರುವ ಉತ್ಸಾಹಿ, ವಿದ್ಯಾವಂತ ಯುವಕ ಧೀರಜ್ ಮುನಿರಾಜು ಗೆಲುವಿಗೆ ಕ್ಷೇತ್ರದ ಜನರು ಆಶೀರ್ವದಿಸಬೇಕು ಎಂದು ನಟ ಕಿಚ್ಚ ಸುದೀಪ್ ಮನವಿ ಮಾಡಿದರು.
    ಶಾಂತಿನಗರದ ಮುತ್ಯಾಲಮ್ಮ ತಾಯಿ ದೇವಾಲಯದಿಂದ ಶನಿವಾರ ಆರಂಭವಾದ ರೋಡ್ ಶೋನಲ್ಲಿ ಮಾತನಾಡಿದ ಸುದೀಪ್ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಯುವ ನಾಯಕರಿಗೆ ಈ ಬಾರಿ ಹೆಚ್ಚಿನ ಅವಕಾಶ ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದರು. ನಾನು ಪ್ರಚಾರಕ್ಕೆ ಹೋದ ಕ್ಷೇತ್ರಗಳೆಲ್ಲಾ ಬಿಜೆಪಿ ಪರ ವಾತಾವರಣ ಇದೆ. ಅಭ್ಯರ್ಥಿಗಳು ಗೆದ್ದ ಬಳಿಕ ಜನರಿಗೆ ಒಳ್ಳೆಯ ಕೆಲಸ ಮಾಡಬೇಕು. ಕ್ಷೇತ್ರದ ಅಭಿವೃದ್ಧಿಗೆ ಶ್ರಮ ವಹಿಸಬೇಕು ಎಂಬುದು ನನ್ನ ಮನವಿಯಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts