More

    ಜಿಲ್ಲೆಗೆ ಶಿಕ್ಷಕರು, ವೈದ್ಯರನ್ನು ಕೊಡಿ


    ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿನ ಹಿಂದುಳಿದ ಯಾದಗಿರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದ್ದಾರೆ.

    ಮಂಗಳವಾರ ಬೆಳಗಾವಿಯ ಚಳಿಗಾಲದ ಅಧಿವೇಶನದ ಶೂನ್ಯ ವೇಳೆಯಲ್ಲಿ ಗಮನ ಸೆಳೆಯುವ ನಿಲುವಳಿ ಮೇಲೆ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರೃ ಸಿಕ್ಕು 75 ವರ್ಷ ಕಳೆದರೂ ನನ್ನ ಕ್ಷೇತ್ರದಲ್ಲಿ ಇಂದಿಗೂ ಜನತೆ ಶುದ್ಧ ಕುಡಿಯುವ ನೀರಿಗೆ ಒದ್ದಾಡುವ ಸ್ಥಿತಿ ಎದುರಾಗಿದೆ. ಕ್ಷೇತ್ರದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು ಮರೀಚಿಕೆಯಾಗಿದ್ದು, ಕಲುಷಿತ ನೀರು ಸೇವನೆ ಮಾಡಿ 3 ಜನ ಪ್ರಾಣ ಕಳೆದುಕೊಂಡಿರುವುದು ದುರ್ದೈವದ ಸಂಗತಿ. ಜಿಲ್ಲೆ ಅಭಿವೃದ್ಧಿ ಮಾಡುತ್ತೇವೆ ಎಂಬ ವಿಶ್ವಾಸದ ಮೇಲೆ ಜನತೆ ನಮ್ಮನ್ನು ಆರಿಸಿ ವಿಧಾನಸೌಧಕ್ಕೆ ಕಳಿಸುತ್ತಾರೆ. ಆದರೆ, ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ತಮ್ಮ ಮಾತಿನ ಆರಂಭದಿಂದಲೂ ಕ್ಷೇತ್ರದ ಸಮಸ್ಯೆಗಳನ್ನು ಸದನದ ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟ ಶಾಸಕ ಕಂದಕೂರ, ನಮ್ಮಲ್ಲಿ ಸುಸಜ್ಜಿತ ಶಾಲಾ ಕಟ್ಟಡಗಳಿವೆ ಆದರೆ ಶಿಕ್ಷಕರಿಲ್ಲ, ಸರಕಾರಿ ಆಸ್ಪತ್ರೆಗಳಿವೆ ತಜ್ಞ ವೈದ್ಯರ ಸಮಸ್ಯೆ ಇದೆ. ಹೀಗಾದರೆ ಕಲ್ಯಾಣ ಕರ್ನಾಟಕ ಉದ್ಧಾರವಾಗುವುದು ಯಾವಾಗ? ಎಂದು ಪ್ರಶ್ನಿಸಿದರು.

    ಗುರುಮಠಕಲ್ ಕ್ಷೇತ್ರದ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ ಕಳೆದೊಂದು ದಶಕದಿಂದ ಅಭಿವೃದ್ಧಿ ವಂಚಿತವಾಗಿದೆ. ಭೂಮಿ ನೀಡಿದ ರೈತನ ಕೈಗಳಿಗೆ ಸರಕಾರಗಳು ಪರಿಹಾರ ಮತ್ತು ಕೆಲಸ ನೀಡಿಲ್ಲ. ಇದರಿಂದ ಹೊಟ್ಟೆಪಾಡಿಗಾಗಿ ದೂರದ ಊರುಗಳಿಗೆ ಗುಳೆ ಹೋಗುತ್ತಾರೆ. ಕೆಲವೊಂದು ಸಲ, ಕೆಲಸದ ವೇಳೆ ಅನಾಹುತವಾಗಿ ಪ್ರಾಣ ಕಳೆದುಕೊಳ್ಳುತ್ತಾರೆ. ಆ ಕಟುಂಬಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವಿವರಿಸಿದರು.

    ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿವೆ. ಬಡವರ ಹೊಟ್ಟೆ ತುಂಬಬೇಕಿದ್ದ ಅನ್ನಭಾಗ್ಯ ಯೋಜನೆ ಅಕ್ಕಿ ಇಂದು ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಇದೊಂದು ದೊಡ್ಡ ಹಗರಣವಾಗಿದ್ದು, ಶಾಮೀಲಾದ ಆರೋಪಿಯ ಜತೆಗೆ ಪೊಲೀಸರು ನಿಂತು ಫೋಟೊ ತೆಗೆಸಿಕೊಳ್ಳುತ್ತಾರೆಎಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ಜೆಜೆಎಂ ಮತ್ತು ಜಲಧಾರೆ ಯೋಜನೆ ಕಾಮಗಾರಿಗಳು ಯಾವ ಹಂತದಲ್ಲಿವೆ ಎಂಬ ಬಗ್ಗೆ ಸ್ವತಃ ಶಾಸಕರಾದ ನಮಗೆ ಮಾಹಿತಿ ಇಲ್ಲದಿರುವುದು ದುರ್ದೈವದ ಸಂಗತಿ ಎಂದು ಖೇದ ವ್ಯಕ್ತಪಡಿಸಿದರು.
    ಹೀಗಾಗಿ ಸರಕಾರ ನಮ್ಮ ಜಿಲ್ಲೆಗೆ ಮೊದಲು ಸರಕಾರಿ ಶಿಕ್ಷಕರು ಮತ್ತು ವೈದ್ಯಾಧಿಕಾರಿಗಳ ನೇಮಕಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. ಕಂದಕೂರ ಅವರ ಮಾತನ್ನು ಸಬಾಧ್ಯಕ್ಷ ತದೇಕ ಚಿತ್ತದಿಂದ ಆಲಿಸುತ್ತಿರುವುದು ವಿಶೇಷವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts