More

    ಜಿಲ್ಲೆಗೆ ಮತ್ತೆ ‘ಮಹಾ’ಮಾರಿ

    ಹಾವೇರಿ: ಮಹಾರಾಷ್ಟ್ರದಿಂದ ಬಸ್​ನಲ್ಲಿ ಜಿಲ್ಲೆಗೆ ಬಂದಿರುವ 2 ವರ್ಷದ ಮಗು ಸೇರಿ ಒಂದೇ ಕುಟುಂಬದ ನಾಲ್ವರಲ್ಲಿ ಕರೊನಾ ಸೋಂಕು ಗುರುವಾರ ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿನ ಸೋಂಕಿತ ಸಂಖ್ಯೆ 10ಕ್ಕೇರಿದೆ.

    ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿರುವ ರಾಣೆಬೆನ್ನೂರ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ನಿವಾಸಿಗಳಾದ 2 ವರ್ಷದ ಗಂಡು ಮಗು (ಪಿ 2494), 34 ವರ್ಷದ (ಪಿ 2495) ಪುರುಷ, 28 ವರ್ಷದ ಮಹಿಳೆ (ಪಿ 2496), 22 ವರ್ಷದ (ಪಿ 2497) ವ್ಯಕ್ತಿ ಮೇ 17ರಂದು ಸೇವಾ ಸಿಂಧು ಆಪ್​ನಲ್ಲಿ ನಮೂದಿಸಿ ಮಹಾರಾಷ್ಟ್ರದಿಂದ 2 ಬಸ್​ನಲ್ಲಿ ಜಿಲ್ಲೆಗೆ ಆಗಮಿಸಿದ್ದರು. ಬಸ್​ನಲ್ಲಿ ಒಟ್ಟು 29 ಜನ ಪ್ರಯಾಣಿಸಿ ಜಿಲ್ಲೆಗೆ ಬಂದಿದ್ದರು. ಎಲ್ಲರನ್ನೂ ರಾಣೆಬೆನ್ನೂರ ತಾಲೂಕಿನ ಮಾಕನೂರ ಗ್ರಾಮದ ಬಳಿಯ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಕ್ವಾರಂಟೈನ್ ಅವಧಿ 7 ದಿನಗಳಾದ ಬಳಿಕ ಅವರ ಗಂಟಲ ಮಾದರಿಯನ್ನು ಟೆಸ್ಟ್​ಗೆ ಕಳಿಸಲಾಗಿತ್ತು. ಗುರುವಾರ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ. ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ಮಹಾರಾಷ್ಟ್ರ ಥಾಣೆ ಜಿಲ್ಲೆಯ ಪಾಂಡಪಾಡ್ಯದ ಕಲ್ವಾ ಬೀದಿಯಲ್ಲಿ ವ್ಯಾಪಾರಕ್ಕಾಗಿ ರಾಣೆಬೆನ್ನೂರ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಿಂದ ಒಟ್ಟು 89 ಜನರು ಹೋಗಿದ್ದರು. ಈಗ ಪಾಸಿಟಿವ್ ಬಂದಿರುವ ನಾಲ್ವರು ಸೇರಿ ಇವರೆಲ್ಲರೂ ಮೇ 17ರಂದು ಸೇವಾಸಿಂಧು ಆಪ್ ಮೂಲಕ ಪಾಸ್ ಪಡೆದು ಜಿಲ್ಲೆಗೆ ಆಗಮಿಸಿದ್ದಾರೆ. 89 ಜನರ ಪೈಕಿ 29 ಜನರನ್ನು ಮಾಕನೂರ ಮುರಾರ್ಜಿ ವಸತಿ ಶಾಲೆಯಲ್ಲಿ, 19 ಜನರನ್ನು ಸರ್ಕಾರಿ ಗಿರಿಜನ ಆಶ್ರಮ ಶಾಲೆಯಲ್ಲಿ, ರಾಣೆಬೆನ್ನೂರ ಈಶ್ವರ ನಗರದ ದೇವರಾಜ ಅರಸು ವಸತಿ ನಿಲಯದಲ್ಲಿ 41 ಜನರನ್ನು ಮೂರು ಗುಂಪುಗಳಾಗಿಸಿ ಕ್ವಾರಂಟೈನ್ ಮಾಡಲಾಗಿದೆ. ಇದರಲ್ಲಿ ಮಾಕನೂರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಇದ್ದ 29 ಜನರ ಪೈಕಿ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ. ಈ ವಸತಿ ಶಾಲೆಯ ಸುತ್ತಲಿನ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಹಾಗೂ ಮಾಕನೂರ ಗ್ರಾಮವನ್ನು ಬಫರ್ ಜೋನ್ ಎಂದು ಘೊಷಿಸಲಾಗಿದೆ. ರಾಣೆಬೆನ್ನೂರ ತಹಸೀಲ್ದಾರ್ ಅವರನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಆದೇಶಿಸಿದ್ದಾರೆ.

    ಲಾಕ್​ಡೌನ್ 3.0 ವರೆಗೆ ಗ್ರೀನ್ ಜೋನ್​ನಲ್ಲಿಯೇ ಇದ್ದ ಜಿಲ್ಲೆಗೆ ಮಹಾರಾಷ್ಟ್ರದ ಮುಂಬೈನಿಂದ ಬಂದವರಿಬ್ಬರು ಸೋಂಕು ತಂದಿದ್ದರು. ಅವರ ಸಂಪರ್ಕಕ್ಕೆ ಬಂದ ಸವಣೂರಿನ ಮಹಿಳೆಯೊಬ್ಬರಿಗೆ ಹಾಗೂ ಮುಂಬೈನ ನಂಟು ಹೊಂದಿದ್ದ ಮತ್ತೆ ಮೂವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಮತ್ತೆ ಮಹಾರಾಷ್ಟ್ರದಿಂದ ಬಂದ ನಾಲ್ವರಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲೆಯನ್ನು ಮಹಾರಾಷ್ಟ್ರ ರಾಜ್ಯದ ನಂಟು ಬಿಟ್ಟು ಬಿಡದೇ ಕಾಡುತ್ತಿದೆ.

    7 ಮಾತ್ರ ಸಕ್ರಿಯ: ಜಿಲ್ಲೆಯಲ್ಲಿ ಈವರೆಗೆ 10 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಈಗಾಗಲೇ ಮೂವರು ಸೋಂಕಿನಿಂದ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಗುರುವಾರ ದೃಢಪಟ್ಟಿರುವ ನಾಲ್ವರು ಸೇರಿ ಒಟ್ಟು 7 ಜನರು ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಿರುವ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts