More

    ಜಿಲ್ಲೆಗೆ ಕನ್ನಡ ರಥ ಎಳೆಯುವ ಭಾಗ್ಯ

    ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಈ ಬಾರಿ ಹಾವೇರಿಗೆ ಒಲಿದಿದ್ದು, ಹಳೆಯ ಮನಸ್ತಾಪಗಳನ್ನು ಮರೆತು ಎಲ್ಲರೂ ಒಂದಾಗಿ ಕನ್ನಡ ರಥ ಎಳೆಯಲು ಸಜ್ಜಾಗಬೇಕಿದೆ.

    2014ರಲ್ಲಿ ಜಿಲ್ಲೆಗೆ 81ನೇ ಸಾಹಿತ್ಯ ಸಮ್ಮೇಳನದ ಆತಿಥ್ಯ ದೊರಕಿತ್ತು. ಆದರೆ, ಸ್ಥಳದ ಆಯ್ಕೆ ಹಾವೇರಿ ಹಾಗೂ ರಾಣೆಬೆನ್ನೂರ ನಡುವೆ ಗೊಂದಲವುಂಟಾಗಿ, ಕೊನೆಗೆ ಸಮ್ಮೇಳನವನ್ನೇ ಎತ್ತಂಗಡಿ ಮಾಡಲಾಗಿತ್ತು. ಇದರಿಂದ ಮುಜುಗರಕ್ಕೊಳಗಾದ ಕಸಾಪ ಪದಾಧಿಕಾರಿಗಳು ಮುಂದಿನ ನಾಲ್ಕು ಸಮ್ಮೇಳನಕ್ಕೆ ಆತಿಥ್ಯ ಕೊಡಿ ಎಂದು ಒತ್ತಡವನ್ನೇ ಹಾಕಿರಲಿಲ್ಲ. ಇದೀಗ ಕಲಬುರಗಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ಸಮ್ಮೇಳನ ಹಾವೇರಿಯಲ್ಲಿ ಎಂದು ಘೊಷಣೆ ಆಗಿರುವುದು ಸಾಹಿತ್ಯಾಭಿಮಾನಿಗಳಲ್ಲಿ ಸಂತಸ ಉಂಟು ಮಾಡಿದೆ.

    ಫಲ ನೀಡಿದ ಜನಪ್ರತಿನಿಧಿಗಳ ಪ್ರಯತ್ನ: ಜ. 27ರಂದು ನಗರದಲ್ಲಿ ಆಯೋಜಿಸಿದ್ದ 12ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಬಿ.ಸಿ. ಪಾಟೀಲ, ಶಾಸಕ ನೆಹರು ಓಲೇಕಾರ ಈ ಬಾರಿ ಹಾವೇರಿಗೆ ಸಾಹಿತ್ಯ ಸಮ್ಮೇಳನವನ್ನು ತರಲು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದ್ದರು. ಅದರಂತೆ ಜಿಲ್ಲಾ ಕಸಾಪ ಪದಾಧಿಕಾರಿಗಳೂ ಒತ್ತಡ ಹೇರಿದ್ದರಿಂದ ಆರು ವರ್ಷಗಳ ನಂತರ ಸಮ್ಮೇಳನ ಘೊಷಣೆಯಾಗಿದೆ.

    ಗೊಂದಲವಾಗಿದ್ದು ಹೀಗೆ: 2014ರಲ್ಲಿ ಮಡಿಕೇರಿಯಲ್ಲಿ ಆಯೋಜಿಸಿದ್ದ 80ನೇ ಸಾಹಿತ್ಯ ಸಮ್ಮೇಳನದ 2ನೇ ದಿನ ಕಸಾಪ ಕೇಂದ್ರ ಸಮಿತಿ ಸಭೆಯಲ್ಲಿ 81ನೇ ಸಮ್ಮೇಳನ ಹಾವೇರಿ ಜಿಲ್ಲೆಗೆ ಎಂದು ಘೊಷಣೆಯಾಗಿತ್ತು. ನಂತರ ಜಿಲ್ಲಾ ಕಸಾಪ ಅಂದಿನ ಅಧ್ಯಕ್ಷ ಜಿ.ಬಿ. ಮಾಸಣಗಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಾವೇರಿಯಲ್ಲಿ ಸಮ್ಮೇಳನ ಆಯೋಜನೆಗೆ ಅಗತ್ಯ ಮೂಲ ಸೌಲಭ್ಯಗಳಿಲ್ಲ. ರಾಣೆಬೆನ್ನೂರಿನಲ್ಲಿ ಸಮ್ಮೇಳನ ನಡೆಸುವ ನಿರ್ಣಯ ಕೈಗೊಂಡರು. ಅವರ ನಿರ್ಣಯದ ಮೇಲೆ ಕೇಂದ್ರ ಕಸಾಪ ಠರಾವಿನಲ್ಲಿಯೂ ರಾಣೆಬೆನ್ನೂರ ಹೆಸರನ್ನು ಸೇರಿಸಲಾಗಿತ್ತು. ನಂತರ ಇದು ವಿವಾದಕ್ಕೆ ತಿರುಗಿ ಜಿಲ್ಲಾ ಕೇಂದ್ರದಲ್ಲಿ ಸಮ್ಮೇಳನ ನಡೆಸಬೇಕು ಎಂಬ ಒತ್ತಾಯ ಕೇಳಿಬಂತು. ನಂತರ ವಿಕೋಪಕ್ಕೆ ತಿರುಗಿ ಹಾವೇರಿ ಹಾಗೂ ರಾಣೆಬೆನ್ನೂರಿನಲ್ಲಿ ಪ್ರತಿಭಟನೆಗಳು ನಡೆದವು. ಅಂದಿನ ಕಸಾಪ ಅಧ್ಯಕ್ಷರು ಸ್ಥಳ ವಿವಾದ ಕುರಿತಂತೆ ಸಭೆ ನಡೆಸಿದರೂ ಒಮ್ಮತದ ನಿರ್ಣಯ ಕೈಗೊಳ್ಳಲಾಗಲಿಲ್ಲ. ಹೀಗಾಗಿ ಕೊನೆ ಕ್ಷಣದಲ್ಲಿ ಸಮ್ಮೇಳನದ ಆತಿಥ್ಯ ಜಿಲ್ಲೆಯಿಂದ ಎತ್ತಂಗಡಿಯಾಗಿತ್ತು.

    ಈ ಬಾರಿ ಗೊಂದಲವಿಲ್ಲ: 2014ರಲ್ಲಿ 81ನೇ ಸಮ್ಮೇಳನ ಹಾವೇರಿ ಜಿಲ್ಲೆಗೆ ಎಂಬ ವಿಷಯವೇ ಬಹುದೊಡ್ಡ ಗೊಂದಲವಾಗಿದ್ದರಿಂದ ಈ ಬಾರಿ 86ನೇ ಸಮ್ಮೇಳನ ಹಾವೇರಿ ನಗರಕ್ಕೆ ಎಂದು ಘೊಷಣೆಯಾಗಿದೆ.

    ಒಗ್ಗಟ್ಟು ಮೊದಲ ಮಂತ್ರವಾಗಬೇಕಿದೆ: ಜಿಲ್ಲಾ ಸಮ್ಮೇಳನದಲ್ಲಿ ಜನಪ್ರತಿನಿಧಿಗಳು ಹಾವೇರಿಯಲ್ಲಿ ಸಮ್ಮೇಳನ ನಡೆಸಲು ಒತ್ತಡ ಹೇರುವ ಭರವಸೆ ನೀಡಿದ ಬೆನ್ನಲ್ಲೇ ರಾಣೆಬೆನ್ನೂರ ಕಸಾಪ ಪದಾಧಿಕಾರಿಗಳು ಸಭೆ ನಡೆಸಿ ರಾಣೆಬೆನ್ನೂರಿಗೆ ಈ ಹಿಂದೆ ಘೊಷಣೆಯಾಗಿತ್ತು. ಸಮ್ಮೇಳನ ಎತ್ತಂಗಡಿಯಾಗಿ ಅನ್ಯಾಯವಾಗಿದೆ. ಹೀಗಾಗಿ ಈ ಬಾರಿ ರಾಣೆಬೆನ್ನೂರಿನಲ್ಲಿಯೇ ನಡೆಸಬೇಕು ಎಂದು ಒತ್ತಾಯಿಸಿದ್ದರು. ಇದೀಗ ಹಾವೇರಿಗೆ ಸಮ್ಮೇಳನ ಘೊಷಣೆಯಾಗಿದ್ದು, ರಾಣೆಬೆನ್ನೂರಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮೇಳನ ಆಯೋಜನೆಗೆ ಕಸಾಪ ಒಗ್ಗಟ್ಟಿನ ಮಂತ್ರವನ್ನು ಕೈಗೊಳ್ಳಬೇಕಿದೆ.

    ಹಿಂದಿನ ಕಪ್ಪುಚುಕ್ಕೆ ಹೋಗಲಾಡಿಸಲು ನಾವು ಒಂದಾಗಿ ಸಮ್ಮೇಳನ ಮಾಡುತ್ತೇವೆ ಎಂಬ ಭರವಸೆಯನ್ನು ಕಾರ್ಯಕಾರಿ ಸಮಿತಿಗೆ ಕೊಟ್ಟಿದ್ದೇವೆ. ಜಿಲ್ಲೆಯ ಎಲ್ಲರೂ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲು ಉತ್ಸುಕರಾಗಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದಿದ್ದೇವೆ. ಅಲ್ಲದೆ, ಜಿಲ್ಲೆಯ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ಸಮ್ಮೇಳನ ಹಾವೇರಿಗೆ ಬರಲು ಸಹಕಾರ ನೀಡಿದ್ದಾರೆ. ಈ ಸಾರಿ ಯಾವುದೇ ಗೊಂದಲ, ಅಪಸ್ವರಗಳು ಬರದಂತೆ ನೋಡಿಕೊಳ್ಳುತ್ತೇವೆ.
    | ಎಚ್.ಬಿ. ಲಿಂಗಯ್ಯ, ಕಸಾಪ ಜಿಲ್ಲಾಧ್ಯಕ್ಷ


    86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ಹಾವೇರಿಗೆ ಸಿಕ್ಕಿದ್ದು ಸಂತಸ ತಂದಿದೆ. ಹಾವೇರಿ ನಗರದಲ್ಲಿಯೇ ಸಮ್ಮೇಳನ ನಡೆಸಲು ಎಲ್ಲ ಶಾಸಕರು ಪತ್ರ ಕೊಟ್ಟಿದ್ದೇವೆ. ಹಿಂದಿನಂತೆ ಯಾವುದೇ ಅಪಸ್ವರ ಈ ಬಾರಿಯಿಲ್ಲ. ಅದ್ದೂರಿಯಾಗಿ ಸಮ್ಮೇಳನ ನಡೆಸುತ್ತೇವೆ.
    | ನೆಹರು ಓಲೇಕಾರ, ಶಾಸಕರು ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts