More

    ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್, ಗಾಂಜಾ ಪತ್ತೆ!

    ಹಾಸನ: ನಗರದ ಜಿಲ್ಲಾ ಕಾರಾಗೃಹದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಮತ್ತು ಡಿವೈಎಸ್ಪಿ ಉದಯಭಾಸ್ಕರ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿತು.


    14 ಪಿಎಸ್‌ಐ ಒಳಗೊಂಡಂತೆ 100 ಪೊಲೀಸರ ತಂಡ ಬೆಳಗಿನ ಜಾವ 5.45ರಲ್ಲಿ ಕಾರಾಗೃಹ ಪ್ರವೇಶಿಸಿ, ಕೈದಿಗಳನ್ನು ಎಬ್ಬಿಸಿ ಹುಡುಕಾಟ ನಡೆಸಿದಾಗ ಕಾರಾಗೃಹದ ಎ, ಬಿ, ಸಿ, ಡಿ, ಇ ಮತ್ತು ಎಫ್ ಕೊಠಡಿಗಳಲ್ಲಿ ಎರಡು ಮೊಬೈಲ್‌ಗಳು ಮತ್ತು 5 ಪ್ಯಾಕೇಟ್ ಗಾಂಜಾ ದೊರಕಿದೆ.


    ಜೈಲಿನಲ್ಲಿ ಕೈದಿಗಳಿಗೆ ಗಾಂಜಾ ಪೂರೈಕೆ ಮತ್ತು ಮೊಬೈಲ್ ಬಳಕೆ ಅವಕಾಶ ನೀಡಿರುವ ದೂರು ಕೇಳಿಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು. ಜಪ್ತಿ ಮಾಡಲಾಗಿರುವ ಮೊಬೈಲ್‌ಗಳಲ್ಲಿ ಕರೆ ಮಾಹಿತಿ ಅಳಿಸಲಾಗಿದೆ. ಆ ಕುರಿತು ತನಿಖೆ ನಡೆಸಲಾಗುವುದು. ಮೊಬೈಲ್ ಸಿಕ್ಕಿದ ಎರಡು ಕೊಠಡಿಗಳ ಕೈದಿಗಳ ವಿರುದ್ಧ ಕರ್ನಾಟಕ ಕಾರಾಗೃಹಗಳ ಕಾಯ್ದೆ 1963ರ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


    ಗಾಂಜಾ ಎಲ್ಲಿಂದ ಪೂರೈಕೆಯಾಗಿದೆ, ಸರಬರಾಜು ಮಾಡಿದವರು ಯಾರು ಎಂಬುದರ ಬಗ್ಗೆಯೂ ತನಿಖೆ ನಡೆಯಲಿದೆ. ದಾಳಿ ವೇಳೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಣಿಕಂಠ, ನವೀನ್‌ಕುಮಾರ್ ಮತ್ತು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಅಬ್ದುಲ್ ಕರೀಂ, ಗುರುಮೂರ್ತಿ ಎಂಬುವರ ರಕ್ತ ಪರೀಕ್ಷೆ ಮಾಡಿಸಿದಾಗ ಗಾಂಜಾ ಸೇವಿಸಿರುವುದು ತಿಳಿದುಬಂದಿದೆ. ಇವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುವುದು ಎಂದರು.


    ಹೊರಗಡೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರನ್ನು ಬಂಧಿಸಿ ಜೈಲಿಗೆ ಕಳುಹಿಸಿದರೆ ಅಲ್ಲೂ ಭೀತಿ ಹುಟ್ಟಿಸುವ ಚಟುವಟಿಕೆ ನಡೆಯುತ್ತಿರುವುದು ಆತಂಕಕಾರಿ. ಇದು ಜೈಲಿನ ಅಧಿಕಾರಿಗಳಿಗೆ ಗೊತ್ತೋ, ಗೊತ್ತಿಲ್ಲವೋ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು. ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಅವರ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.

    ಜೈಲಿನ ಕೈದಿಗಳಿಗೆ ಗಾಂಜಾ ಪೂರೈಕೆ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಸಂಬಂಧ ಈಗಾಗಲೇ ಶ್ರೀನಗರ ಬಡಾವಣೆಯ ಆದಿಲ್ ಮತ್ತು ರಾಹಿಲ್ ಎಂಬಿಬ್ಬರನ್ನು ಗಡಿಪಾರು ಮಾಡಲಾಗಿದೆ. ರಾಹಿಲ್‌ನನ್ನು ಚಿಕ್ಕಮಗಳೂರು ಜಿಲ್ಲೆಗೆ ಕಳುಹಿಸಲಾಗಿದೆ. ಆದಿಲ್ ತಲೆಮರೆಸಿಕೊಂಡಿದ್ದು, ಆತ ಸಿಕ್ಕ ನಂತರ ಜಿಲ್ಲೆಯಿಂದ ಹೊರ ಕಳುಹಿಸಲಾಗುವುದು. ಈವರೆಗೆ 6 ಜನರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.

    ಹರಿರಾಮ್ ಶಂಕರ್, ಎಸ್ಪಿ, ಹಾಸನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts