More

    ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಕಿಮ್ಮತ್ತು

    ಧಾರವಾಡ: ಜಿಲ್ಲೆಯ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯಲ್ಲಿ ಜಾನುವಾರು ಸಂತೆ, ಜಾತ್ರೆ ಹಾಗೂ ಸಾಗಣೆಗೆ ನಿಷೇಧ ಹೇರಲಾಗಿದೆ. ಆದಾಗ್ಯೂ ನಗರದ ಜಾನುವಾರು ಮಾರುಕಟ್ಟೆಯಲ್ಲಿ ಮಂಗಳವಾರ ಸಂತೆ ನಡೆಸುವ ಮೂಲಕ ಜಿಲ್ಲಾಧಿಕಾರಿ ಆದೇಶವನ್ನೇ ಉಲ್ಲಂಘಿಸಲಾಗಿದೆ.

    ಚರ್ಮ ಗಂಟು ರೋಗ ಹರಡುವಿಕೆ ತಡೆಗಟ್ಟಲು ಸೆ. 28ರಿಂದ ಜಾನುವಾರು ಸಂತೆ, ಜಾತ್ರೆ ಮತ್ತು ಜಾನುವಾರು ಸಾಗಾಣಿಕೆಗೆ ಪ್ರತಿಬಂಧಕಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದರು. ಈ ಆದೇಶದ ಪ್ರತಿಯನ್ನು ಎಪಿಎಂಸಿ ಕಚೇರಿ ಆವರಣಗಳಲ್ಲಿ ಸಹ ಅಂಟಿಸಲಾಗಿದೆ.

    ಚರ್ಮ ಗಂಟು ರೋಗ ಒಂದು ಜಾನುವಾರಿನಿಂದ ಇನ್ನೊಂದು ಜಾನುವಾರಿಗೆ ಹರಡುತ್ತದೆ. ಇದೇ ಕಾರಣಕ್ಕೆ ಸಂತೆ, ಜಾತ್ರೆ ಹಾಗೂ ಸಾಗಾಣಿಕೆ ತಡೆಯುವಂತೆ ಆದೇಶಿಸಲಾಗಿದೆ. ಆದರೆ ಎಪಿಎಂಸಿ ಅಧಿಕಾರಿಗಳು ಜಿಲ್ಲಾಧಿಕಾರಿ ಆದೇಶವನ್ನು ರೈತರಿಗೆ ಸರಿಯಾಗಿ ತಲುಪಿಸದ ಹಿನ್ನೆಲೆಯಲ್ಲಿ ಈ ಎಡವಟ್ಟು ನಡೆದಿದೆ ಎನ್ನಲಾಗಿದೆ.

    ಈಗಾಗಲೇ ಕರೊನಾ ಹಾವಳಿ ತಡೆಯಲು ಪರಸ್ಪರ ಅಂತರ ಸೇರಿ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಈ ಸಂತೆಯಲ್ಲಿ ಯಾವುದೇ ಅಂತರವೂ ಕಾಣಲಿಲ್ಲ. ಇಂತಹ ಸಂದರ್ಭದಲ್ಲಿ ಜನರಿಗೆ ಕರೊನಾ ಹಾಗೂ ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುವಿಕೆಯಲ್ಲಿ ಯಾವುದೇ ಸಂದೇಹವಿಲ್ಲ ಎಂಬಂತೆ ಕಾಣುತಿತ್ತು.

    ಈ ಕುರಿತು ಪ್ರತಿಕ್ರಿಯೆ ನೀಡಿದ ಎಪಿಎಂಸಿ ಕಾರ್ಯದರ್ಶಿ ವಿ.ಜಿ. ಹಿರೇಮಠ, ಈ ಮಾಹಿತಿ ತಿಳಿಯದ ಕೆಲವರು ಸಂತೆಗೆ ಆಗಮಿಸಿದ್ದರು. ಬಳಿಕ ಧ್ವನಿವರ್ಧಕ ಮೂಲಕ ಅವರಿಗೆ ಮಾಹಿತಿ ನೀಡಲಾಗಿದೆ. ಪ್ರತಿ ಗಾಮಗಳಲ್ಲಿ ಡಂಗೂರ ಸಾರುವ ಮೂಲಕ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts