More

    ಜಿಲ್ಲಾದ್ಯಂತ 917 ಪರೀಕ್ಷಾರ್ಥಿಗಳು ಗೈರು

    ಧಾರವಾಡ/ಹುಬ್ಬಳ್ಳಿ: ಕರೊನಾ ಹಾವಳಿಯಿಂದ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಜಿಲ್ಲೆಯಲ್ಲಿ ಗುರುವಾರ ಸಾಕಷ್ಟು ಮುನ್ನೆಚ್ಚರಿಕೆ ವ್ಯವಸ್ಥೆ ಮಧ್ಯೆ ಯಶಸ್ವಿಯಾಗಿ ಜರುಗಿತು.

    ಇಂಗ್ಲಿಷ್ ಪರೀಕ್ಷೆಗೆ 20,198 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 19,281 ವಿದ್ಯಾರ್ಥಿಗಳು ಹಾಜರಾದರೆ 917 ವಿದ್ಯಾರ್ಥಿಗಳು ಗೈರಾದರು. ಹುಬ್ಬಳ್ಳಿಯಲ್ಲಿ 16, ಧಾರವಾಡದಲ್ಲಿ 17, ಕಲಘಟಗಿ ಮತ್ತು ನವಲಗುಂದದಲ್ಲಿ ತಲಾ 2 ಮತ್ತು ಕುಂದಗೋಳದಲ್ಲಿ 1 ಪರೀಕ್ಷಾ ಕೇಂದ್ರ ಸೇರಿ ಜಿಲ್ಲೆಯಾದ್ಯಂತ 38 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಿದ್ದು, ಎಲ್ಲೂ ಪರೀಕ್ಷಾ ಅಕ್ರಮ ನಡೆದಿಲ್ಲ. ವಾ.ಕ.ರ.ಸಾ. ಸಂಸ್ಥೆಯಿಂದ ವಿದ್ಯಾರ್ಥಿಗಳ ಸಂಚಾರಕ್ಕಾಗಿ ಉಚಿತವಾಗಿ 300 ಬಸ್​ಗಳನ್ನು ಒದಗಿಸಲಾಗಿತ್ತು. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗೊಂದಲವಿಲ್ಲದೆ ನಿರಾಳವಾಗಿ ಪರೀಕ್ಷೆ ಬರೆದರು. ಪ್ರತಿ ಪರೀಕ್ಷೆ ಕೇಂದ್ರದ ವಿದ್ಯಾರ್ಥಿಗಳು ಮತ್ತು ಕರ್ತವ್ಯ ನಿರತ ಸಿಬ್ಬಂದಿಗೆ ಅಗತ್ಯ ಮಾಸ್ಕ್, ಸ್ಯಾನಿಟೈಸರ್ ಪೂರೈಸಲಾಗಿತ್ತು. ಪರಸ್ಪರ ಅಂತರದೊಂದಿಗೆ ಪರೀಕ್ಷೆಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಲ್ಲ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಆರೋಗ್ಯದ ಸ್ಥಿತಿ ದಾಖಲಿಸಿಕೊಳ್ಳಲಾಯಿತು.

    ಪ್ರತ್ಯೇಕ ಕೊಠಡಿ ವ್ಯವಸ್ಥೆ: ಕೋವಿಡ್ ಸೋಂಕು ದೃಢಪಟ್ಟ ಪ್ರದೇಶಗಳನ್ನು ಸೀಲ್​ಡೌನ್ ಮಾಡಲಾಗಿದ್ದು, ಕಂಟೇನ್ಮೆಂಟ್ ಜೋನ್​ಗಳನ್ನಾಗಿ ಮಾರ್ಪಡಿಸಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಅಂಥ ಪ್ರದೇಶಗಳಲ್ಲಿ ವಾಸಿಸುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಇಂಥ ವಿದ್ಯಾರ್ಥಿಗಳಿಗಾಗಿ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ತಲಾ 2 ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ಜಿಲ್ಲಾದ್ಯಂತ ಕಂಟೇನ್ಮೆಂಟ್ ವಲಯಗಳಿಂದ ಬಂದ 162 ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂಡಿಸಿ ಪರೀಕ್ಷೆ ಬರೆಸಲಾಯಿತು ಎಂದು ಧಾರವಾಡ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶಾರದಾ ಕಿರೇಸೂರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts