More

    ಜಿಲ್ಲಾದ್ಯಂತ ‘ಜೇಮ್ಸ್’ ಜಾತ್ರೆ

    ಬೆಳಗಾವಿ: ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅಕಾಲಿಕವಾಗಿ ತೀರಿಹೋದರೂ ಅಭಿಮಾನಿಗಳು, ಕನ್ನಡಿಗರ ಎದೆಯಲ್ಲಿ ಶಾಶ್ವತವಾಗಿದ್ದಾರೆ. ಮಾ.17 ಪುನೀತ್ ಜನ್ಮದಿನ. ಅಪ್ಪು ಜನ್ಮದಿನವೆಂದರೆ ಅಭಿಮಾನಿಗಳಿಗೆ ಹಬ್ಬ. ಅದರ ಜತೆಗೆ ಅವರ ಕೊನೆಯ ಸಿನಿಮಾ ‘ಜೇಮ್ಸ್’ ಕೂಡ ಬಿಡುಗಡೆಯಾಗಿದ್ದು, ನೆಚ್ಚಿನ ನಟನನ್ನು ಅಭಿಮಾನಿಗಳು ಕಣ್ತುಂಬಿಕೊಂಡರು. ಚೆಂದ ನಗುವಿನಿಂದ ಕೋಟ್ಯಂತರ ಹೃದಯ ಕದ್ದಿದ್ದ ಪವರ್‌ಸ್ಟಾರ್ ಇಲ್ಲದ ನೋವಿನ ಮಧ್ಯೆಯೂ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು.

    ಜಿಲ್ಲೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನವನ್ನು ಗುರುವಾರ ಅಭಿಮಾನಿಗಳು ಅತ್ಯಂತ ಸಂಭ್ರಮದಿಂದ ಆಚರಿಸಿದರು. ನೆಚ್ಚಿನ ನಟನ ಅನುಪಸ್ಥಿತಿಯಲ್ಲಿ ಬಿಡುಗಡೆಯಾದ ಪುನೀತ್ ಅವರ ಕೊನೆಯ ಸಿನಿಮಾ ‘ಜೇಮ್ಸ್‌‘ ಕಣ್ತುಂಬಿಕೊಂಡು ಭಾವಪರವಶವಾದರು. ಬೆಳಗ್ಗೆಯಿಂದಲೇ ಜೇಮ್ಸ್ ಸ್ವಾಗತಕ್ಕೆ ಸಜ್ಜಾಗಿದ್ದ ಅಭಿಮಾನಿಗಳು ವಿವಿಧೆಡೆ ಅನ್ನ ಸಂತರ್ಪಣೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಿದ್ದರು. ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಪುನೀತ್ ಭಾವಚಿತ್ರದ ಮೆರವಣಿಗೆ ಜರುಗಿತು. ಆಟೋಗಳ ಮೇಲೆ ಪುನೀತ್ ಭಾವಚಿತ್ರ ಇಟ್ಟು ಮೆರವಣಿಗೆ ಮಾಡಲಾಯಿತು.

    ಬೆಳಗಾವಿ ನಗರದ ಸುಮಾರು ಐದು ಚಿತ್ರಮಂದಿರ ಸೇರಿ ತಾಲೂಕು ಕೇಂದ್ರಗಳಲ್ಲೂ ಜೇಮ್ಸ್ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದು ಎಲ್ಲೆಡೆಯೂ ಸಂಭ್ರಮ ಮನೆ ಮಾಡಿತ್ತು. ನಗರದ ಚಿತ್ರಾ, ನರ್ತಕಿ ಸೇರಿ ಎಲ್ಲ ಚಿತ್ರಮಂದಿರದ ಆವರಣದಲ್ಲಿ ಫ್ಲೆಕ್ಸ್‌ಗಳು, ಕನ್ನಡ ಬಾವುಟಗಳು ರಾರಾಜಿಸಿದವು. ಅಭಿಮಾನಿ ಸಂಘದವರು ಆವರಣವನ್ನು ವಿಶೇಷವಾಗಿ ಅಲಂಕರಿಸಿದ್ದರು. ಪವರ್‌ಸ್ಟಾರ್ ಕಟೌಟ್‌ಗೆ ಹೂಮಳೆಗೈದು, ಘೋಷಣೆ ಕೂಗಿದರು. ಕೆಲ ಅಭಿಮಾನಿಗಳು ಅಪ್ಪು ಫೋಟೋವನ್ನು ಟಾಕೀಸಿನ 17ನೇ ನಂಬರ್ ಸೀಟ್‌ನಲ್ಲಿಟ್ಟು ವಿಶೇಷವಾಗಿ ಜನ್ಮದಿನ ಆಚರಿಸಿದರು. ಮಾ.17 ಪುನೀತ್ ರಾಜ್‌ಕುಮಾರ್ ಜನಿಸಿದ ದಿನ. ಆದ್ದರಿಂದ 17ನೇ ನಂಬರ್ ಸೀಟ್‌ಅನ್ನು ಬುಕ್ ಮಾಡಿ ಅಭಿಮಾನಿಗಳು ಕಾಯ್ದಿರಿಸಿದ್ದರು.

    ಥಿಯೇಟರ್‌ಗಳಲ್ಲಿ ಜೇಮ್ಸ್ ಚಲನಚಿತ್ರ ಆರಂಭವಾಗುತ್ತಿದ್ದಂತೆಯೇ ಜಯಘೋಷಗಳು, ಸಿಳ್ಳೆ, ಚಪ್ಪಾಳೆಗಳು ಮುಗಿಲುಮುಟ್ಟಿದವು. ಕೆಲ ಯುವಕರು ಕನ್ನಡ ಬಾವುಟ ಪ್ರದರ್ಶಿಸಿ ಸಂಭ್ರಮಿಸಿದರು. ಫೋಟೊಗೆ ಹಾರ ಹಾಕಿ ಅಪ್ಪು, ಅಪ್ಪು ಎಂದು ಜಯಘೋಷ ಕೂಗಿದರು. ‘ಅಪ್ಪು ಎಲ್ಲೂ ಹೋಗಿಲ್ಲ. ನಮ್ಮೊಂದಿಗೇ ಇದ್ದಾರೆ. ನಾವು ಅವರೊಂದಿಗೆ ಚಿತ್ರ ವೀಕ್ಷಿಸುತ್ತಿದ್ದೇವೆ’ ಎಂದು ಅಭಿಮಾನಿಗಳು ಹೇಳಿದರು.

    ಸ್ವಯಂಪ್ರೇರಿತ ರಕ್ತದಾನ ಶಿಬಿರ: ಬೆಳಗಾವಿ ರಾಣಿ ಚನ್ನಮ್ಮ ವೃತ್ತದಲ್ಲಿ ಅಭಿಮಾನಿಗಳು ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜನ್ಮದಿನವನ್ನು ಸಡಗರದಿಂದ ಆಚರಿಸಿದರು. ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಅಭಿಮಾನಿಗಳ ಮೆರವಣಿಗೆಗೆ ಪೊಲೀಸರು ಆವಕಾಶ ಕೊಡಲಿಲ್ಲ. ಆದರೂ ಕೆಲವು ಯುವಕರು ಚಿತ್ರಮಂದಿರದ ಸುತ್ತಲೂ ದ್ವಿ-ಚಕ್ರವಾಹನಗಳಲ್ಲಿ ಕನ್ನಡ ಬಾವುಟಗಳೊಂದಿಗೆ ಸುತ್ತು ಹಾಕಿದರು. ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂಭ್ರಮಿಸಿದರು.
    ಸಮವಸ್ತ್ರದಲ್ಲಿ ಸಿನಿಮಾ ನೋಡಿದ ಮಾಜಿ ಯೋಧ: ಪುನೀತ್‌ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆಯಾಗಿದ್ದರಿಂದ ಬೆಳಗಾವಿ ಚಿತ್ರಾ ಚಿತ್ರಮಂದಿರಕ್ಕೆ ಗುರುವಾರ ಮಾಜಿ ಸೈನಿಕ ವಿನಾಯಕ ಮೇದಾರ ಸಮವಸ್ತ್ರ ಧರಿಸಿ ಕುಟುಂಬದೊಂದಿಗೆ ಆಗಮಿಸಿ ಗಮನ ಸೆಳೆದರು. ಗೋಕಾಕ ತಾಲೂಕಿನ ಅಂಕಲಗಿಯಿಂದ ಆಗಮಿಸಿದ್ದ ಮಾಜಿ ಯೋಧ, ಜೇಮ್ಸ್ ಚಿತ್ರ ನೋಡಿ ಅಪ್ಪು ಅವರನ್ನು ಸ್ಮರಿಸಿದರು. ಬಳಿಕ ಕೇಕ್ ಕಟ್ ಮಾಡಿ ಪುನೀತ್ ಜನ್ಮದಿನ ಆಚರಿಸಿದರು.

    ‘ಅಪ್ಪು ಕೊನೆಯ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ನಾನು ಮಾಜಿ ಸೈನಿಕನಾಗಿ ಸೇನಾ ಸಮವಸ್ತ್ರದಲ್ಲೇ ಚಿತ್ರ ನೋಡಲು ಬಂದಿದ್ದೇನೆ. ಅಪ್ಪು ಕೊನೆಯ ಸಿನಿಮಾ ಅಂತ ನಮಗೆ ದುಃಖ ಇಲ್ಲ. ನಮ್ಮ ಎದೆಯಲ್ಲಿ ಎಂದೆಂದಿಗೂ ಅಪ್ಪು ಅಜರಾಮರ. ಇದು ಅಪ್ಪು ಅವರ ಕೊನೆಯ ಚಿತ್ರ ಅಂತಾ ಯಾರೂ ಹೇಳಬೇಡಿ’ ಎಂದು ವಿನಾಯಕ ಮೇದಾರ ಅಭಿಮಾನಿಗಳಲ್ಲಿ ಮನವಿ ಮಾಡಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts