More

    ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ

    ಬೀದರ್: ಹಿಜಾಬ್ ವಿವಾದದ ಮಧ್ಯೆಯೂ ಜಿಲ್ಲಾದ್ಯಂತ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆದವು. ಮೊದಲ ದಿನ ಕನ್ನಡ ಭಾಷಾ ಪರೀಕ್ಷೆ ನಡೆದಿದ್ದು, ನಕಲು ಸೇರಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

    ಜಿಲ್ಲೆಯ 124 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 29,619 ವಿದ್ಯಾಥರ್ಿಗಳ ಪೈಕಿ ಮೊದಲ ದಿನ ಪ್ರಥಮ ಭಾಷೆಗೆ 27,954 ಹಾಜರಾಗಿದ್ದರೆ, 1560 ಗೈರು ಹಾಜರಾಗಿದ್ದರು.

    ಕರೊನಾ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಜತೆಗೆ ಸ್ಯಾನಿಟೈಸ್ ಮಾಡಲಾಯಿತು. ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಿ ಕೈಗಡಿಯಾರ, ಮೊಬೈಲ್​ಗಳನ್ನು ಇರಿಸಿಕೊಳ್ಳಲಾಯಿತು. ಹಿಜಾಬ್ ಕುರಿತು ಜಿಲ್ಲೆಯ ಎಲ್ಲೂ ವಿವಾದವಾಗಿಲ್ಲ. ಪರೀಕ್ಷಾ ಕೇಂದ್ರದ ಒಳಗಡೆ ಬರುವವರೆಗೆ ಹಿಜಾಬ್ ಅವಕಾಶ ನೀಡಿದ್ದು, ಕೋಣೆಗೆ ಹೋಗುವ ಮುನ್ನ ಹಿಜಾಬ್ ಕಳಚಲು ಪ್ರತ್ಯೇಕ ಕೋಣೆ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ವಿದ್ಯಾಥರ್ಿನಿಯರು ಹಿಜಾಬ್ ಕಳಚಿಟ್ಟು ಪರೀಕ್ಷೆ ಬರೆದರು.

    ಜಿಲ್ಲಾಧಿಕಾರಿ ಗೋವಿಂದರಡ್ಡಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರಬಾಬು ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮೊದಲಿಗೆ ಓಲ್ಡ್ ಸಿಟಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದರು. ಅಲ್ಲಿಂದ ಅಲ್ ಅಮೀನ್ ಶಾಲೆ, ಪನ್ನಾಲಾಲ್ ಹೀರಾಲಾಲ್ ಕಾಲೇಜು, ಅಕ್ಕಮಹಾದೇವಿ ಕಾಲೇಜು, ಗುರುನಾನಕ ಪಬ್ಲಿಕ್ ಸ್ಕೂಲ್, ಕಮಠಾಣೆ, ದತ್ತಗಿರಿ ಶಾಲೆ ಸೇರಿ ವಿವಿಧೆಡೆ ತೆರಳಿ ಆಯಾ ಕೇಂದ್ರಗಳಲ್ಲಿನ ಸ್ಥಿತಿಗತಿ ಬಗ್ಗೆ ಖುದ್ದು ವೀಕ್ಷಿಸಿದರು. ಡಿಡಿಪಿಐ ಗಣಪತಿ ಬಾರಟಕೆ ಇತರರಿದ್ದರು. ಬುಧವಾರ ದ್ವಿತೀಯ ಭಾಷೆ ಪರೀಕ್ಷೆ ನಡೆಯಲಿದೆ.

    ಔರಾದ್ ಪಟ್ಟಣ, ಸಂತಪುರ, ಚಿಂತಾಕಿ, ಕೌಡಗಾಂವ, ವಡಗಾಂವ(ದೇ) ಸೇರಿ ತಾಲೂಕಿನ 17 ಕೇಂದ್ರಗಳಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಕನ್ನಡ ವಿಷಯ ಪರೀಕ್ಷೆ ಸುಸೂತ್ರ ನಡೆದಿದೆ. 3,597 ಮಕ್ಕಳು ಹಾಜರಾಗಿದ್ದು, 183 ಗೈರಾಗಿದ್ದಾರೆ ಎಂದು ಬಿಇಒ ಎಚ್.ಎಸ್.ನಗನೂರ ತಿಳಿಸಿದ್ದಾರೆ.

    ಬಸವಕಲ್ಯಾಣ ತಾಲೂಕಿನ 25 ಕೇಂದ್ರಗಳಲ್ಲೂ ಪರೀಕ್ಷೆ ಸುಸೂತ್ರ ನಡೆದಿದ್ದು, ಆಡಳಿತ ಮತ್ತು ಶಿಕ್ಷಣ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. 5900 ವಿದ್ಯಾರ್ಥಿಗಳ ಪೈಕಿ 308 ಮಕ್ಕಳು ಪರೀಕ್ಷೆಗೆ ಗೈರಾಗಿದ್ದಾರೆ ಎಂದು ಬಿಇಒ ಸಿ.ಜಿ.ಹಳ್ಳದ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts