More

    ಜಿಲ್ಲಾಡಳಿತಕ್ಕೆ ಮೇಜರ್ ಸರ್ಜರಿ ಅಗತ್ಯ

    ಕೋಲಾರ: ಜಿಲ್ಲೆಯ ಆಡಳಿತದ ಜವಾಬ್ದಾರಿ ಹೊತ್ತಿರುವ ನಾಲ್ವರು ಹಿರಿಯ ಅಧಿಕಾರಿಗಳ ನಡುವೆ ಪ್ರತಿಷ್ಠೆಗಾಗಿ ನಡೆದಿರುವ ಮುಸುಕಿನ ಗುದ್ದಾಟ ಸರ್ಕಾರಕ್ಕೆ ಕಸಿವಿಸಿ ಉಂಟು ಮಾಡಿದೆ.

    ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಪಡೆದು ಜಿಲ್ಲಾಧಿಕಾರಿ ಹುದ್ದೆ ಅಲಂಕರಿಸಿರುವವರ ಪಾತ್ರ ದೊಡ್ಡದ್ದೋ ಅಥವಾ ಡೈರೆಕ್ಟ್ ಐಎಎಸ್, ಐಪಿಎಸ್ ಮೂಲಕ ಎಸ್ಪಿ ಹಾಗೂ ಜಿಪಂ ಸಿಇಇ ಹುದ್ದೆ ಹೊಂದಿರುವವರಿಗೆ ಹೆಚ್ಚಿನ ಮಹತ್ವ ಸಿಗಬೇಕಾ ಎಂಬ ವಿಚಾರವಾಗಿ ಅಧಿಕಾರಿಗಳ ನಡುವೆ ಶೀತಲ ಸಮರ ನಡೆದಿರುವುದು ಉಸ್ತುವಾರಿ ಸಚಿವ, ಸಂಸದ ಹಾಗೂ ಶಾಸಕರಿಗೆ ತಲೆ ನೋವಾಗಿ ಪರಿಣಮಿಸಿದೆ.

    ಈ ಹಿಂದೆ ಡಾ.ಎಚ್.ವಿಶ್ವನಾಥ್, ಪ್ರಭಾಕರ್, ಪುಷ್ಪಲತಾ ಇನ್ನಿತರರು ಡೈರೆಕ್ಟ್ ಐಎಎಸ್ ಅಲ್ಲದಿದ್ದರೂ ಕೆಎಎಸ್‌ನಿಂದ ಬಡ್ತಿ ಪಡೆದು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಡೈರೆಕ್ಟ್ ಐಪಿಎಸ್, ಐಎಫ್‌ಎಸ್ ಮೂಲಕ ಎಸ್ಪಿ, ಜಿಪಂ ಸಿಇಒ ಮತ್ತು ಡಿಸಿಎಫ್‌ಗಳಾಗಿ ಕಾರ್ಯನಿರ್ವಹಿಸಿ, ಏನೇ ಭಿನ್ನಾಭಿಪ್ರಾಯವಿದ್ದರೂ ಹೊರ ಜಗತ್ತಿಗೆ ಕಾಣದಂತೆ ಎಚ್ಚರವಹಿಸಿದ್ದರು.

    ಆದರೆ ಕಳೆದ 4 ತಿಂಗಳಿಂದ ಜಿಲ್ಲೆಯ ಹಿರಿಯ ಅಧಿಕಾರಿಗಳು ಎಂದೆನಿಸಿಕೊಂಡಿರುವ ಡಿಸಿ ಸಿ.ಸತ್ಯಭಾಮ, ಕೋಲಾರ ಎಸ್ಪಿ ಕಾರ್ತಿಕರೆಡ್ಡಿ, ಕೆಜಿಎಫ್ ಎಸ್ಪಿ ಮೊಹ್ಮದ್ ಸುಜೀತ ಹಾಗೂ ಜಿಪಂ ಸಿಇಒ ದರ್ಶನ್ ನಡುವೆ ಸಾಮರಸ್ಯ ಇಲ್ಲದಿರುವುದು ಬೆಳಕಿಗೆ ಬಂದಿದ್ದು ಸಚಿವ ಎಚ್.ನಾಗೇಶ್, ಸಂಸದ ಎಸ್.ಮುನಿಸ್ವಾಮಿ ಹಾಗೂ ಶಾಸಕರು ಮೌನ ಮುರಿದು ಹಿರಿಯ ಅಧಿಕಾರಿಗಳಲ್ಲಿನ ಭಿನ್ನಮತ ಶಮನಕ್ಕೆ ದಿಟ್ಟ ನಿರ್ಧಾರ ಕೈಗೊಳ್ಳದಿದ್ದರೆ ಜಿಲ್ಲೆಯ ಜನ ತಬ್ಬಲಿಯಾಗಬೇಕಾಗುತ್ತದೆ.

    ಸತ್ಯಭಾಮ ಡೈರೆಕ್ಟೋ, ಇಂಡೈರೆಕ್ಟೋ ಪ್ರಸ್ತುತ ಜಿಲ್ಲಾ ದಂಡಾಧಿಕಾರಿಯಾಗಿದ್ದಾರೆ, ಪೊಲೀಸ್ ಇಲಾಖೆ ಸೇರಿ ಎಲ್ಲ ಇಲಾಖೆಗಳನ್ನು ಸಮಾನವಾಗಿ ನೋಡುವುದಲ್ಲದೆ ಎಲ್ಲೋ ಲವಶೇಷ ಅಸಮಾಧಾನ, ಅತೃಪ್ತಿ ಕಾಣದಂತೆ ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲಿದೆ.
    ಅಗತ್ಯವಿದ್ದಲ್ಲಿ ಉತ್ತಮ ಆಡಳಿತಕ್ಕಾಗಿ ಹಿರಿಯ ಅಧಿಕಾರಿಗಳ ಸಲಹೆ ಪಡೆಯುವುದು ತಪ್ಪಿಲ್ಲ, ಎಲ್ಲರನ್ನು ತೃಪ್ತಿಪಡಿಸುದುವುದು ಕಷ್ಟ. ಆದರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಜಾಣ್ಮೆಯಿಂದ ಕೆಲಸ ಮಾಡುವುದು ಇವತ್ತಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಅನಿವಾರ್ಯ ಎಂಬುದನ್ನು ಅರಿತರೆ ಜನಸ್ನೇಹಿ ಅಧಿಕಾರಿಯಾಗಲು ಸಾಧ್ಯ.

    ಅದೇ ರೀತಿ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಜಿಲ್ಲಾ ದಂಡಾಧಿಕಾರಿ ಸಲಹೆ ಪಡೆಯುವುದು ಅಥವಾ ಡಿಸಿಗೆ ತಿಳಿಯದ ವಿಚಾರಗಳ ಕುರಿತು ಪರಸ್ವರ ಚರ್ಚೆ ಮೂಲಕ ಸಹಮತಕ್ಕೆ ಬರುವುದಕ್ಕೆ ಜಿಲ್ಲೆಯ ಇಬ್ಬರು ಎಸ್ಪಿ ಮನಸ್ಸು ಮಾಡದಿದ್ದರೆ ಜನರ ರಕ್ಷಣೆ ಕಷ್ಟವಾಗಬಹುದು.
    ಕೋವಿಡ್ ನಿಯಂತ್ರಣ, ದಲಿತರ ಮೇಲಿನ ದೌರ್ಜನ್ಯ, ಇಲಾಖೆಗಳಲ್ಲಿನ ಭ್ರಷ್ಟಾಚಾರ ಇನ್ನಿತರ ಸಮಸ್ಯೆಗಳನ್ನು ಕೇವಲ ಡಿಸಿ, ಜಿಪಂ ಸಿಇಒ ಅಥವಾ ಎಸ್ಪಿಗಳಿಂದ ಬಗೆಹರಿಸುವುದು ಕಷ್ಟ, ಜಿಲ್ಲೆಯ ನಾಲ್ವರು ಹಿರಿಯ ಅಧಿಕಾರಿಗಳು ಜಂಟಿಯಾಗಿ ಕೆಲಸ ಮಾಡಬೇಕು, ಜನಪ್ರತಿನಿಧಿಗಳಿಗೆ ಕಾನೂನು ಅರಿವು ಮೂಡಿಸಿ ತಪ್ಪು ನಡೆಯದಂತೆ ನೋಡಿಕೊಳ್ಳಬೇಕು.

    ಈಗಾಗಲೆ ಜಿಲ್ಲೆಯ ಪರಿಸ್ಥಿತಿ ತಿಳಿದಿರುವ ಸಿಎಂ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಾಲ್ವರು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಅರಿತು ಮುಲಾಮು ಹಚ್ಚದಿದ್ದರೆ ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಹೊಡೆದ ಬೀಳುವುದು ಗ್ಯಾರಂಟಿ.

    ಡಿಸಿ ಮತ್ತು ಇಬ್ಬರು ಎಸ್ಪಿಗಳ ನಡುವೆ ಹೊಂದಾಣಿಕೆ ಇಲ್ಲದಿರುವುದು ನನ್ನ ಗಮನಕ್ಕೆ ಬಂದಿದೆ. ಜಿಲ್ಲೆಯ ಹಿತದೃಷ್ಟಿಯಿಂದ ಪ್ರತಿಷ್ಠೆ ಬದಿಬಿಟ್ಟು ಕೆಲಸ ಮಾಡಬೇಕು, ಇಲ್ಲದಿದ್ದರೆ ದಂಡಂ ದಶಗುಣಂ ಪ್ರಯೋಗಿಸಬೇಕಾಗುತ್ತದೆ, ಆಡಳಿತದಲ್ಲಿ ಆಶಿಸ್ತು ಸಹಿಸುವುದಿಲ್ಲ, ಇನ್ನೆರಡು ದಿನಗಳಲ್ಲಿ ಕರೆಸಿ ಚರ್ಚಿಸುವೆ, ಜನಪರ ಕೆಲಸ ಮಾಡಲು ಇಷ್ಟವಿಲ್ಲದವರು ಜಿಲ್ಲೆಯಿಂದ ನಿರ್ಗಮಿಸಲಿ.
    ಎಚ್.ನಾಗೇಶ್, ಜಿಲ್ಲಾ ಉಸ್ತುವಾರಿ ಸಚಿವ, ಕೋಲಾರ

    ಡಿಸಿ, ಸಿಇಒ ಮತ್ತು ಎಸ್ಪಿಗಳು ಜಿಲ್ಲಾಡಳಿತದ ಆಧಾರ ಸ್ತಂಭ, ಇವರಲ್ಲಿ ಸಂಘರ್ಷ ಉಂಟಾದರೆ ಜನರಿಗೆ ತೊಂದರೆ ಆಗುತ್ತದೆ, ಬಂಗಾರಪೇಟೆ ತಹಸೀಲ್ದಾರ್ ಚಂದ್ರಮೌಳೇಶ್ವರ ಅವರು ಅನ್ಯಾಯವಾಗಿ ಕೊಲೆಯಾಗಿದ್ದಾರೆ, ಹಿರಿಯ ಅಧಿಕಾರಿಗಳ ಜಗಳದಿಂದ ಪ್ರಕರಣ ಸಮಾಧಿಯಾಗುವುದು ಬೇಡ, ಸರ್ಕಾರಕ್ಕೆ ಈಗಾಗಲೇ ಪ್ರಕರಣದ ಬಗ್ಗೆ ಮಾಹಿತಿ ಇರುವುದರಿಂದ ಸತ್ಯ ಮುಚ್ಚಿ ಹಾಕಲು ಯಾರಿದಂಲೂ ಸಾಧ್ಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳನ್ನು ಕರೆಸಿ ಬುದ್ಧಿವಾದ ಹೇಳಬೇಕು.
    ಎಸ್.ಮುನಿಸ್ವಾಮಿ, ಸಂಸದರು.

    ಬಂಗಾರಪೇಟೆ ತಹಸೀಲ್ದಾರ್ ಕೊಲೆ ನಂತರ ಕಂದಾಯ ಇಲಾಖೆಯ ಸಿಬ್ಬಂದಿಯಲ್ಲಿ ಭಯ ಹೆಚ್ಚಾಗಿದೆ, ತನಿಖಾಧಿಕಾರಿಗಳು ನಿಜವಾದ ತಪ್ಪಿತಸ್ಥರನ್ನು ಪತ್ತೆ ಮಾಡಲು ವಿರೋಧವಿಲ್ಲ, ಆದರೆ ಕಂದಾಯ ಇಲಾಖೆಯರವರನ್ನು ಮಾತ್ರ ಟಾರ್ಗೆಟ್ ಮಾಡುವುದು ತಪ್ಪು,ಪೊಲೀಸ್ ಅಧಿಕಾರಿಗಳೊಂದಿಗೆ ಯಾವುದೇ ಭಿನ್ನಮತವಿಲ್ಲ,
    ಸಿ.ಸತ್ಯಭಾಮ, ಜಿಲ್ಲಾಧಿಕಾರಿ, ಕೋಲಾರ

    ನನ್ನ ಮತ್ತು ಡಿಸಿ ನಡುವೆ ಶೀತಲ ಸಮರ ಇಲ್ಲ, ಜಿಲ್ಲೆಯ ಅಭಿವೃದ್ಧಿಗಾಗಿ ನಾವೆಲ್ಲಾ ಕೆಲಸ ಮಾಡುತ್ತಿದ್ದೇವೆ, ಜಿಲ್ಲಾ ದಂಡಾಧಿಕಾರಿಯಾಗಿ ಅವರ ಕೆಲಸ ಅವರು ಮಾಡುತ್ತಿದ್ದಾರೆ.
    ಕಾರ್ತಿಕರೆಡ್ಡಿ, ಕೋಲಾರ ಜಿಲ್ಲಾ ಎಸ್ಪಿ,

    ಆಡಳಿತಾತ್ಮಕ ವಿಚಾರ ಬಹಿರಂಗವಾಗಿ ಚರ್ಚಿಸಲಾರೆ, ಡಿಸಿಯೊಂದಿಗೆ ಭಿನ್ನಮತವಿಲ್ಲ, ಬಂಗಾರಪೇಟೆ ತಹಸೀಲ್ದಾರ್ ಕೊಲೆ ಪ್ರಕರಣದ ತನಿಖೆ ಕಾನೂನು ಬದ್ಧವಾಗಿ ನಡೆಯುತ್ತಿದೆ, ನಿರಾಪರಾಧಿಗಳಿಗೆ ತೊಂದರೆ ಆಗುವುದಿಲ್ಲ,
    ಮಹ್ಮದ್ ಸುಜೀತ, ಕೆಜಿಎಫ್ ಎಸ್ಪಿ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts