More

    ಜಿಲ್ಲಾಡಳಿತಕ್ಕೆಮನೆ ಹಾನಿ ವರದಿ ಸಲ್ಲಿಸಿ

    ಹಾವೇರಿ: ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ತಹಸೀಲ್ದಾರರು ನದಿಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಬೇಕು. ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಸಂಬಂಧಪಟ್ಟ ಗ್ರಾಮಗಳಿಗೆ ಮಾಹಿತಿ ನೀಡಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಅವರು ಜಿಲ್ಲೆಯ ತಹಸೀಲ್ದಾರರಿಗೆ ಸೂಚಿಸಿದರು.

    ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಡಿಯೋ ಸಂವಾದ ನಡೆಸಿದ ಅವರು, ‘ಮನೆಗಳ ಹಾನಿ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ವರದಿ ಸಲ್ಲಿಕೆಗೆ ಕಾರಣ ನೀಡುವುದನ್ನು ನಿಲ್ಲಿಸಿ. ಏನೇ ತಾಂತ್ರಿಕ ತೊಂದರೆಗಳಿದ್ದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಿ. ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ. ಜಿಲ್ಲೆಯಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಅಂತಿಮ ವರದಿಯನ್ನು ಬುಧವಾರ ಸಂಜೆಯೊಳಗೆ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದರು.

    ಕಳೆದ ವರ್ಷದ ನೆರೆ ಹಾಗೂ ಅತಿವೃಷ್ಟಿಯಿಂದ ಹಾಳಾದ ಮನೆಗಳ ನೋಂದಣಿಯಲ್ಲಿಯಾದ ನ್ಯೂನತೆಗಳನ್ನು ಸರಿಪಡಿಸಿ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಸರ್ಕಾರ ಜಿಲ್ಲೆಯ 655 ಮನೆಗಳ ವರ್ಗ ಬದಲಾವಣೆ ಮಾಡಿ ಮಂಜೂರಾತಿ ನೀಡಿದೆ. ಈವರೆಗೆ ಈ ಮನೆಗಳ ಜಿಪಿಎಸ್ ಆಗಿಲ್ಲ. ಈ ಕುರಿತು ಫಲಾನುಭವಿಗಳಿಂದ ದೂರುಗಳು ಬರುತ್ತಿವೆ. ಮನೆ ಮಂಜೂರಾತಿ ವಿಷಯಲ್ಲಿ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ತಹಸೀಲ್ದಾರ್, ತಾಪಂ ಇಒ ಹಾಗೂ ಪಿಡಿಒಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಶೀಘ್ರವೇ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಬೇಕು. ಇದಕ್ಕೆ ತಪ್ಪಿದಲ್ಲಿ ಇಒ ಹಾಗೂ ತಹಸೀಲ್ದಾರರನ್ನು ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಮಾತನಾಡಿ, ನೆರೆ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ನೋಂದಣಿ ಸಮಯದಲ್ಲಿ ಕಳೆದ ವರ್ಷದಲ್ಲಿ ಆದ ತಪ್ಪಿನಿಂದ ಕೆಲವರು ಜೈಲಿಗೆ ಹೋಗಿದ್ದಾರೆ. ಈ ವಿಷಯವಾಗಿ ತನಿಖೆ ನಡೆಸಲಾಗುತ್ತಿದೆ. ಇನ್ನೂ ಕೆಲವರು ಹೋಗುವವರಿದ್ದಾರೆ. ಹಾಗಾಗಿ ಮನೆ ಹಾನಿಯಾದ ಫಲಾನುಭವಿಗಳಿಗೆ ಶೀಘ್ರವೇ ಹಣ ಜಮೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಸಣ್ಣಪುಟ್ಟ ತೊಂದರೆಗಳನ್ನು ತಮ್ಮ ಹಂತದಲ್ಲಿಯೇ ಬಗೆಹರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಮನೆಗಳ ಜಿಪಿಎಸ್ ಮಾಡಲು ಯಾವುದೇ ತೊಂದರೆ ಇರುವುದಿಲ್ಲ. ವಿಳಂಬ ಧೋರಣೆ ಬಿಟ್ಟು ಕೂಡಲೆ ಜಿಪಿಎಸ್ ಕಾರ್ಯ ಪೂರ್ಣಗೊಳಿಸಿ ಜಿಲ್ಲಾಡಳಿತಕ್ಕೆ ಫಲಾನುಭವಿಗಳ ಮಾಹಿತಿ ನೀಡಬೇಕು ಎಂದು ತಹಸೀಲ್ದಾರ್ ಹಾಗೂ ತಾಪಂ ಇಒಗಳಿಗೆ ಸೂಚಿಸಿದರು.

    ವಿಡಿಯೋ ಸಂವಾದಲ್ಲಿ ಜಿಪಂ ಸಿಇಒ ರಮೇಶ ದೇಸಾಯಿ, ಉಪವಿಭಾಗಾಧಿಕಾರಿಗಳಾದ ಡಾ. ದಿಲೀಪ್ ಶಶಿ, ಅನ್ನಪೂರ್ಣ ಮುದಕಮ್ಮನವರ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್. ಹಾವನೂರ, ತಹಸೀಲ್ದಾರ್ ಶಂಕರ ಜಿ.ಎಸ್., ಇತರರಿದ್ದರು.

    ಬೆಳೆ ಸಮೀಕ್ಷೆ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ತೋಟಗಾರಿಕೆ ಹಾಗೂ ಕೃಷಿ ಬೆಳೆ ಲಾಗಿನ್ ಪ್ರಕ್ರಿಯೆಯನ್ನು 15ದಿನದೊಳಗಾಗಿ ಪೂರ್ಣಗೊಳಿಸಬೇಕು.
    | ಸಂಜಯ ಶೆಟ್ಟಣ್ಣವರ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts