More

    ಜಿದ್ದಾಜಿದ್ದಿಯ ಕಣದಲ್ಲಿ ಪ್ರತಿಷ್ಠೆಯ ಪಣ

    ಹುಬ್ಬಳ್ಳಿ: ವರ್ಷಕ್ಕೂ ಮಿಕ್ಕಿ ಸ್ತಬ್ಧವಾಗಿದ್ದ ಚುನಾವಣಾ ರಾಜಕೀಯವು ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಘೊಷಣೆಯೊಂದಿಗೆ ಚುರುಕು ಪಡೆದುಕೊಳ್ಳತೊಡಗಿದೆ.

    ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವ ಪಶ್ಚಿಮ ಪದವೀಧರ ಕ್ಷೇತ್ರ ಹಲವು ವರ್ಷ ಕಾಲ ಕಾಂಗ್ರೆಸ್​ನ ಜಹಗೀರಿನಂತೆ ಇತ್ತು. 2008ರಲ್ಲಿ ಅದನ್ನು ಬಿಜೆಪಿ ಕಿತ್ತುಕೊಂಡಿತು. 2014ರ ಚುನಾವಣೆಯಲ್ಲೂ ಬಿಜೆಪಿಯ ಗೆಲುವು ಮುಂದುವರಿದಿತ್ತು. ಪ್ರೊ. ಎಸ್.ವಿ. ಸಂಕನೂರ ಆಯ್ಕೆಯಾಗಿದ್ದರು.

    ಕಳೆದ ಜೂನ್ ತಿಂಗಳಿಗೆ ಅವಧಿ ಮುಗಿದಿದ್ದರೂ ಕರೊನಾ ಕಾರಣದಿಂದ ಚುನಾವಣೆ ದಿನಾಂಕ ಘೊಷಣೆಯಾಗಿರಲಿಲ್ಲ. ಈಗ ಅ. 28ಕ್ಕೆ ಚುನಾವಣೆ ನಿಗದಿಯಾಗಿದೆ.

    ಸಾಕಷ್ಟು ಸಮಯ ಸಿಕ್ಕಿದ್ದರಿಂದ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಅಂತಿಮಗೊಳಿಸಿಕೊಂಡಿವೆ. ಹೀಗಾಗಿ ಆರಂಭಿಕ ಗೊಂದಲಗಳು ಕಡಿಮೆಯಾಗಿವೆ.

    ಪುನಃ ಗೆಲ್ಲುವ ಮೂಲಕ ತನ್ನ ಹಿಡಿತ ಬಲವಾಗಿಯೇ ಇದೆ ಎನ್ನುವುದನ್ನು ಸಾಬೀತುಪಡಿಸುವುದು ಬಿಜೆಪಿ ಗುರಿ.

    ಕೆಲ ತಿಂಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಒಂದಿಷ್ಟು ಸಂಘಟನಾತ್ಮಕ ಕೆಲಸಗಳು ಆಗಿದ್ದು, ಅದನ್ನು ಒರೆಗೆ ಹಚ್ಚಿ ಕ್ಷೇತ್ರವನ್ನು ಕೈ ವಶಕ್ಕೆ ಪಡೆಯುವುದು ಕಾಂಗ್ರೆಸ್​ನ ಆಸೆ.

    ಒಂದು ಕೈ ನೋಡೋಣ ಎನ್ನುವುದು ಜೆಡಿಎಸ್​ನ ಉಮೇದಿ. ನಿಕಟಪೂರ್ವ ಎಂಎಲ್​ಸಿ ಎಸ್.ವಿ. ಸಂಕನೂರ ಅವರನ್ನೇ ಬಿಜೆಪಿ ಪುನಃ ಕಣಕ್ಕಿಳಿಸುವುದು ಖಾತ್ರಿಯಾಗಿದೆ. ಸಂಕನೂರ ಅವರು ಅಧಿಕಾರದಲ್ಲಿದ್ದಾಗ ಪಕ್ಷ ಸಂಘಟನೆಗೆ ಹೆಚ್ಚು ಶ್ರಮಿಸಿಲ್ಲ, ಆಕಾಂಕ್ಷಿಗಳೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಈ ಸಲ ಬದಲಿಸಬೇಕು ಎಂಬ ಧ್ವನಿ ಕೇಳಿಬಂದಿತ್ತಾದರೂ ಅದಕ್ಕೆ ನಾಯಕರು ಸೊಪ್ಪು ಹಾಕಲಿಲ್ಲ. ಸಚಿವರಾದ ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್ ಮೊದಲಾದವರು ಸಂಕನೂರ ಹೆಸರನ್ನೇ ಶಿಫಾರಸು ಮಾಡಿದ್ದಾರೆ.

    ಕಾಂಗ್ರೆಸ್ ಪಕ್ಷ ಹಾವೇರಿಯ ಡಾ. ಆರ್.ಎಂ. ಕುಬೇರಪ್ಪ ಅವರಿಗೆ ಮಣೆ ಹಾಕಿದೆ. ಕುಬೇರಪ್ಪ ಅವರು ಹಿಂದೆ ಬಿಜೆಪಿಯಲ್ಲಿದ್ದರು. ಟಿಕೆಟ್ ಸಿಗದಿದ್ದಾಗ ಕೋಪಿಸಿಕೊಂಡು ಕಾಂಗ್ರೆಸ್ ಸೇರಿದವರು. ಶಿಕ್ಷಕರ ಸಂಘಟನೆ ಮೂಲಕ ಇಡೀ ಕ್ಷೇತ್ರಕ್ಕೆ ಪರಿಚಿತರಂತೂ ಹೌದು.

    ಅಣ್ಣಿಗೇರಿಯ ವಕೀಲ ಶಿವಶಂಕರ ಕಲ್ಲೂರಗೆ ಜೆಡಿಎಸ್ ಟಿಕೆಟ್ ಅಂತಿಮಗೊಂಡಿದೆ.

    ಮೂರೂ ಪಕ್ಷದಲ್ಲಿ ಭಿನ್ನಮತವೇನೂ ಕಂಡುಬರುತ್ತಿಲ್ಲವಾದ್ದರಿಂದ ಈಗಾಗಲೇ ಹೆಸರು ಅಂತಿಮಗೊಂಡಿರುವವರಿಗೆ ಬಿ ಫಾಮ್ರ್ ಚಿಂತೆ ಇಲ್ಲ. ಅ. 1ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, 8ರವರೆಗೆ ಅವಕಾಶವಿದೆ. ಕೆಲವು ಪಕ್ಷೇತರರ ಸ್ಪರ್ಧೆ ನಿರೀಕ್ಷಿತವಾಗಿದೆ. ಅ. 8ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಸಹ ಅವಕಾಶವಿದೆ.

    ಪ್ರಮುಖರಿಗೆ ಹೊಣೆ: ಅಧಿಕಾರಾರೂಢ ಬಿಜೆಪಿಗೆ ಈ ಚುನಾವಣೆ ಗೆಲ್ಲುವುದು ಸಹಜವಾಗಿ ಪ್ರತಿಷ್ಠೆಯ ಪ್ರಶ್ನೆ. ಹೀಗಾಗಿ, ಹೊಣೆಗಾರಿಕೆಯನ್ನು ಈ ಭಾಗದ ಉಸ್ತುವಾರಿ ಸಚಿವರಾದ ಧಾರವಾಡ ಜಿಲ್ಲೆಯ ಜಗದೀಶ ಶೆಟ್ಟರ್, ಗದಗದ ಸಿ.ಸಿ. ಪಾಟೀಲ, ಉತ್ತರ ಕನ್ನಡದ ಶಿವರಾಮ ಹೆಬ್ಬಾರ, ಹಾವೇರಿಯ ಬಿ.ಸಿ. ಪಾಟೀಲ ಅವರಿಗೆ ವಹಿಸಲಾಗಿದೆ. ಕಾಂಗ್ರೆಸ್​ನಲ್ಲಿ ಹಾಲಿ ಎಂಎಲ್​ಸಿ ಶ್ರೀನಿವಾಸ ಮಾನೆಯವರಿಗೆ ಹೆಚ್ಚಿನ ಜವಾಬ್ದಾರಿ ಕೊಡಲಾಗಿದೆ. ಜೆಡಿಎಸ್​ನಲ್ಲಿ ಎಂಎಲ್​ಸಿ ಬಸವರಾಜ ಹೊರಟ್ಟಿ, ಮಾಜಿ ಶಾಸಕರು, ಮುಖಂಡರಿಗೆ ಸೂಚನೆ ನೀಡಲಾಗಿದೆ. ಚುನಾವಣೆ ಘೊಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಸಭೆ ಮಾಡತೊಡಗಿವೆ.

    ಕಳೆದ ಸಲದ ಫಲಿತಾಂಶ: 2014ರ ಜೂನ್​ದಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯ ಪ್ರೊ. ಸಂಕನೂರ ಅವರು 22,496 ಮತ ಪಡೆದು, ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್​ನ ವಸಂತ ಹೊರಟ್ಟಿ (8589) ಅವರನ್ನು 13907 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು. ಕಾಂಗ್ರೆಸ್​ನ ಪಿ.ಎಚ್. ನೀರಲಕೇರಿಯವರಿಗೆ 4600 ಮತ ಪ್ರಾಪ್ತಿಯಾಗಿತ್ತು. 13 ಪಕ್ಷೇತರರು ಕಣದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts