More

    ಜಿಟಿಜಿಟಿ ಮಳೆ, ಬೆಳೆಗಳಿಗೆ ರಗಳೆ

    ಬೆಳಗಾವಿ: ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮುಂಗಾರು ಹಂಗಾಮಿನಲ್ಲಿ ಕೊಯ್ಲು ಮಾಡಿದ ಬೆಳೆ ನೀರಲ್ಲಿ ತೊಯ್ದು ರೈತರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಇತ್ತ ನಗರ, ಪಟ್ಟಣ ಪ್ರದೇಶಗಳಲ್ಲಿಯೂ ದಿನವೂ ಜಿಟಿಜಿಟಿ ಮಳೆ ಸುರಿಯುತ್ತಿರುವುದರಿಂದ ನಾಗರಿಕರು ಕಿರಿಕಿರಿ ಅನುಭವಿಸುವಂತಾಗಿದೆ.

    ಜಿಲ್ಲೆಯ ಮೂಡಲಗಿ, ಗೋಕಾಕ, ರಾಮದುರ್ಗ, ಬೈಲಹೊಂಗಲ, ಸವದತ್ತಿ ತಾಲೂಕಿನ ವಿವಿಧ ಭಾಗದ ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶದಲ್ಲಿ ಬೆಳೆದಿರುವ ಈರುಳ್ಳಿ, ಹೆಸರು, ಶೇಂಗಾ, ತೊಗರಿ, ಮೆಕ್ಕೆಜೋಳ, ಹೆಸರು, ಅವರೆ, ಸೋಯಾಬಿನ್ ಸೇರಿದಂತೆ ಸುಮಾರು 258 ಹೆಕ್ಟರ್ ಕೃಷಿ ಭೂಮಿಗೆ ಮಳೆ ನೀರು ನುಗ್ಗಿದೆ.

    ವಿವಿಧ ಬೆಳೆಗಳ ಬಿತ್ತನೆ: ಕೃಷಿ ಮತ್ತು ತೋಟಗಾರಿಕೆ ಇಲಾಖೆಯು ಮುಂಗಾರು ಹಂಗಾಮಿನಲ್ಲಿ 7.16 ಲಕ್ಷ ಹೆಕ್ಟೇರ್‌ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಂಡಿತ್ತು. ಅದರಲ್ಲಿ 5.40 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ವಿವಿಧ ಬೆಳೆಗಳ ಬಿತ್ತನೆಯಾಗಿದೆ.ಅದರಲ್ಲಿ 11,140 ಹೆಕ್ಟೇರ್‌ನಲ್ಲಿ ತೊಗರಿ, 710 ಹೆಕ್ಟೇರ್ ಹುರುಳಿ, 38,300 ಹೆಕ್ಟೇರ್ ಹೆಸರು, 26,155 ಹೆಕ್ಟೇರ್ ಶೇಂಗಾ, 4,605 ಹೆಕ್ಟೇರ್ ಸೂರ್ಯಕಾಂತಿ, 1.20 ಲಕ್ಷ ಹೆಕ್ಟೇರ್ ಮೆಕ್ಕೆಜೋಳ, 10 ಸಾವಿರ ಹೆಕ್ಟೇರ್ ಸಜ್ಜೆ , 98,140 ಹೆಕ್ಟೇರ್ ಸೋಯಾಬಿನ್, ಅವರೆ, 36,830 ಹೆಕ್ಟೇರ್ ಹತ್ತಿ, 3,020 ಹೆಕ್ಟೇರ್‌ನಲ್ಲಿ ಸಿರಿಧಾನ್ಯ ಸೇರಿದಂತೆ ವಿವಿಧ ಬೆಳೆಗಳು ಬಿತ್ತನೆಯಾಗಿದೆ.

    ಅನ್ನದಾತರಿಗೆ ಆತಂಕ: ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹೆಸರು, ಶೇಂಗಾ, ತೊಗರಿ ಬೆಳೆಗಳ ಸುತ್ತ ನೀರು ನಿಂತಿದ್ದು, ಮಳೆ ಹೀಗೆಯೇ ಮುಂದುವರಿದರೆ ಬೆಳೆಗಳು ನಾಶವಾಗಲಿದೆ. ಲಕ್ಷಾಂತರ ರೂ. ವ್ಯಯಿಸಿ ಬಿತ್ತನೆ ಮಾಡಿದ ಬೆಳೆಗಳಿಗೆ ತೇವಾಂಶ ಹೆಚ್ಚುತ್ತಿದ್ದು, ಮಳೆ ನಿಲ್ಲದಿದ್ದರೆ ಅವು ಕೊಳೆತುಹೋಗಲಿದೆ ಎಂದು ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ರೈತರು ಹಾಗೂ ಮೂಡಲಗಿ ತಾಲೂಕಿನ ಕೌಜಲಗಿ ಹೋಬಳಿಯ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಲವೆಡೆ ಕೃಷಿ ಜಮೀನುಗಳಲ್ಲಿ ನೀರು ನಿಂತಿದೆ. ಈ ಕುರಿತು ಜಂಟಿ ಸಮೀಕ್ಷೆ ನಡೆಸಲು ಕೃಷಿ-ತೋಟಗಾರಿಕೆ ಇಲಾಖೆಗೆ ಸೂಚಿಸಲಾಗಿದೆ. ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಒಳಹರಿವು ಇಲ್ಲ. ಹೀಗಾಗಿ ಜಿಲ್ಲೆಯಲ್ಲಿ ಸದ್ಯ ಪ್ರವಾಹ ಪರಿಸ್ಥಿತಿ ಇಲ್ಲ.
    | ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts